'ಭಾರತ್ ಇಕೋ ಸಿಟಿ' ಅಂತ ದೊಡ್ಡ ಅಕ್ಷರಗಳಲ್ಲಿ ಬರೆದಿದ್ದ ಬೋರ್ಡಿನ ಮುಂದೆ ನಿಂತು, ಮುಖದ ಮೇಲೆ ಬೀಳುತ್ತಿರುವ ಸೂರ್ಯನ ಕಿರಣಗಳು ಮರೆಮಾಚುವಂತೆ ಫೋನನ್ನ ಅಡ್ಡ ಇಟ್ಟು ಸೆಲ್ಫಿ ಕ್ಲಿಕ್ಕಿಸಿದ ಸಮೀರ. ಕ್ಲಿಕ್ಕಿಸಿದ ಫೋಟೋ ನೋಡಿದ ತಕ್ಷಣ,ಮುಖದಲ್ಲಿ ಇನ್ನೂ ಸ್ವಲ್ಪ ನಗು ಇದ್ದಿದ್ದರೆ ಚೆನ್ನಾಗಿರ್ತಿತ್ತೇನೋ ಅನ್ನಿಸಿತು. ಹಿಂದೆ ಇದ್ದ ಬೋರ್ಡಿನ ಅಕ್ಷರಗಳೂ ತುಂಬಾ ದೊಡ್ದವಿದ್ದದರಿಂದ ಬರೀ ಭಾರತ್ ಅಂತಿದ್ದದ್ದಷ್ಟೇ ಕಾಣಿಸಿತು. ಬೋರ್ಡು ಪೂರ್ಣವಾಗಿ ಬರುವಂತೆ ಫೋಟೋ ತೆಗೆಯುವಂತೆ ಯಾರಿಗಾದರೂ ಕೇಳಬೇಕು ಅಂತ ಸುತ್ತ ಇರುವವರನ್ನೆಲ್ಲಾ ಒಮ್ಮೆ ನೋಡಿದ. ಅಲ್ಲಿದ್ದವರ್ಯಾರೂ ಕನ್ನಡದವರಂತೆ ಕಾಣಲಿಲ್ಲ. ಎಲ್ಲಿಂದಲೋ ಬಂದಿರುವವರಿರಬೇಕು ಅನಿಸಿತು. ತನಗೆ ಬರುತ್ತಿದ್ದ ಅಲ್ಪ ಸ್ವಲ್ಪ ಇಂಗ್ಲೀಷಿನಲ್ಲಿ ಅವರಿಗೆ ಕೇಳೋಕೆ ಯಾಕೋ ಧೈರ್ಯ ಸಾಲಲಿಲ್ಲ. ಅಷ್ಟಕ್ಕೂ ಬೆಳ್ಳಂಬೆಳಿಗ್ಗೆ ಈ ಬೋರ್ಡಿನ ಮುಂದೆ ನಿಂತು ಫೋಟೋ ತೆಗೆದುಕೊಳ್ಳುತ್ತಿರುವ ತನ್ನನ್ನು ಕಂಡು ಅವರೇನು ಅಂದುಕೊಂಡಾರು ಅಂತನಿಸಿ ಸುಮ್ಮನಾದ. ಆ ಬೋರ್ಡಿನ ಹಿಂದೆ ಬೃಹತ್ ಅಮೃತ ಶಿಲೆಯ ಕಟ್ಟಡ. ಅದರ ಒಳಹೊಕ್ಕ. ವಿಶಾಲವಾದ ಆವರಣ. ಕಟ್ಟಡದ ಗೋಡೆಗಳಿಗೆ ಚಿನ್ನದ ಬಣ್ಣದ ಲೇಪನ. ಮಧ್ಯದಲ್ಲೊಂದು ದೊಡ್ಡ ಗಡಿಯಾರ, ಅದರ ಪ್ರಕಾರ ಬೆಳಿಗ್ಗೆ ಐದು ಕಾಲು. ಎಂದಿನಂತೆ ತನ್ನ ರೂಮಲ್ಲಿದ್ದಿದ್ದರೆ ಸೊಂಪಾದ ನಿದ್ದೆ ಬರುತ್ತಿದ್ದ ಸಮಯ. ಅಲಾರಂ ಎಬ್ಬಿಸಿದಷ್ಟೂ ನಿದ್ದೆ ಹೆಚ್ಚಾಗುತ್ತಿತ್ತು. ಆದರೆ ಇಲ್ಲಿ ಆಗಲೇ ಬೆಳಗಾಗಿ ಸುಮಾರು ಹೊತ್ತಾದಂತೆ ಜನ ಅವಸರದಿಂದ ಓಡಾಡುತ್ತಿರುವುದನ್ನ ನೋಡಿ, ಹೊಸತಾಗಿ ಕಟ್ಟಲ್ಪಟ್ಟ ನಗರದ ಬಗ್ಗೆ ಅವನಿಗೆ ಆಗಲೇ ಚೂರು ಹೆಮ್ಮೆ.
ಕಟ್ಟಡದ
ಒಳಗೆ ಮತ್ತೊಂದು ಫೋಟೋ ತೆಗೆದುಕೊಳ್ಳುವ ಮನಸ್ಸಾಯಿತು. ಆದರೆ ಆಸೆಯನ್ನ ಹತ್ತಿಕ್ಕಿದ. ಅಲ್ಲಿಂದ ರೈಲು ಹಿಡಿದು ಒಂದು ಗಂಟೆ
ಕೂತು 'ಆಟೋ ಸಿಟಿ'ಗೆ ಬಂದು ಅವನ
ಸುಪರ್ವೈಸರ್ ಗೆ ಫೋನ್ ಮಾಡುವುದಕ್ಕೆ ಕಳಿಸಿದ್ದ
ಇ- ಮೇಲ್ ನ ಪ್ರಿಂಟ್ ಔಟ್ ಮತ್ತೆ ನೋಡಿದ. ರೈಲಿನ ನಂಬರ್ ಎಲ್ಲೂ ಇರಲಿಲ್ಲ. ಅದೇ ಕಟ್ಟಡದ ಒಂದು
ಭಾಗದಲ್ಲಿ ದೊಡ್ಡ ಮಾಪ್ ಬಿಡಿಸಲಾಗಿತ್ತು. ಆಟೋ ಸಿಟಿಗೆ ಟ್ರೈನ್
ನಂಬರ್ ೧೭ ಈಸ್ಟ್ ಅಂತ ಕಷ್ಟಪಟ್ಟು ಹುಡುಕಿದ. ಟಿಕೆಟ್ ತೆಗೆದುಕೊಳ್ಳುವಲ್ಲಿ ಹೋದ. ಟಿಕೆಟ್
ಕೊಡುವ ಜಾಗದಲ್ಲಿ ಯಾರೂ ಇರಲಿಲ್ಲ. ಯಾರಾದರೂ ಬರಬಹುದು ಅಂತ
ಸ್ವಲ್ಪ ಹೊತ್ತು ಕಾದು ನೋಡಿದ. ಅಲ್ಲೇ
ಓಡಾಡುತ್ತಿರುವವರನ್ನ ಯಾರಾದರಲ್ಲೂ ಕೇಳುವುದಕ್ಕೆ ಹಿಂಜರಿಕೆ. ಅದರಲ್ಲೂ ಯಾರೂ ತನ್ನ ಕಡೆಯೂ ನೋಡದೆ ವೇಗವಾಗಿ ಒಂದಲ್ಲ ಒಂದು ರೈಲಿನತ್ತ ಓಡುತ್ತಿದ್ದಾರೆ. ಎಲ್ಲರಲ್ಲೂ ಯಾವುದೋ ಗಡಿಬಿಡಿ. ಕೊನೆಗೂ ಯಾರಿಗಾದರೂ ಕೇಳೇ
ಬಿಡೋದು ಅಂತ ತೀರ್ಮಾನಿಸುವಷ್ಟರಲ್ಲಿ ಅಲ್ಲೇ ಇದ್ದ ಟಿವಿಯ ಪರದೆಯಲ್ಲಿ ಟಿಕೆಟ್ ಬುಕ್ ಹೇಗೆ
ಮಾಡುವುದು, ರೈಲಿನ ಪ್ಲಾಟ್ಫಾರ್ಮ್ ಕಂಡುಹಿಡಿಯುವುದು ಹೇಗೆ
ಎಂಬೆಲ್ಲದರ ವಿವರಣೆ ವಿಡಿಯೋ ಮುಖಾಂತರ ಬರುತ್ತಿರುವುದನ್ನ ಗಮನಿಸಿ, ಅದರ ಆಣತಿಯಂತೆಯೇ ಎಟಿಎಂ ಮೆಶಿನ್ನಿನ ತರಹದ ಕಿಯೋಸ್ಕ್ ಒಂದಕ್ಕೆ ನೋಟು ಹಾಕಿ
ಟಿಕೆಟ್ ತೆಗೆದುಕೊಂಡ. ತಾನು ಒಳಬಂದ ದ್ವಾರದ ಎದುರು ಗೋಡೆಯ ಮೇಲೆ ಸುಮಾರು ಹತ್ತಿಪ್ಪತ್ತು
ಬಾಗಿಲುಗಳು. ಪ್ರತಿಯೊಂದೂ ದ್ವಾರದಲ್ಲೂ ಒಂದೊಂದು
ಪ್ಲಾಟ್ಫಾರ್ಮ್. ಆಟೋ ಸಿಟಿ, ಫುಡ್ ಸಿಟಿ, ಪ್ಲೇ ಸಿಟಿ, ಅಗ್ರಿ ಸಿಟಿ, ರೆಸಿಡೆನ್ಶಿಯಲ್ ಹೀಗೆ ಹತ್ತಾರು ದಾರಿಗಳು. ೧೭ ಇ ಪ್ಲಾಟ್ಫಾರ್ಮ್ ೫ ಅನ್ನೋ ಬೋರ್ಡು
ನೋಡಿ ಆ ಕಡೆ ಓಡಿದ. ಹೊಸ ನಗರ ಅವನಿಗೆ ಗೊತ್ತಿಲ್ಲದೆಯೇ ಅವನಲ್ಲಿ ಹೊಸ ವೇಗವನ್ನ
ತುಂಬುತ್ತಿತ್ತು.
ಪ್ಲಾಟ್ಫಾರ್ಮ್ ಗೆ ಬಂದು ನಿಂತ ಎರಡೇ ನಿಮಿಷದಲ್ಲಿ ರೈಲು ವೇಗವಾಗಿ ಬಂದು ನಿಂತಿತ್ತು. ಸುವ್ಯವಸ್ಥಿತ ಮೆಟ್ರೊ ರೈಲು. ದ್ವಾರದಲ್ಲಿ ಟಿಕೆಟ್ ತಾನೇ ತಾನಾಗಿ ಸ್ಕಾನ್ ಆಗುತ್ತಿತ್ತು. ಟಿಕೆಟ್ ಇಲ್ಲದಲ್ಲಿ ದೊಡ್ಡ ಬೀಪ್ ಶಬ್ಧ. ಎಲ್ಲರ ಜೊತೆ ಸಾಲಲ್ಲಿ ನಿಂತು ಅದನ್ನ ಹತ್ತಿಕೊಂಡ ಸಮೀರ. ರೈಲಿನ ಬೋಗಿಯ ಹಿಂದಿನ ಸೀಟಿನಲ್ಲಿ ಮಫ್ಲರ್ ಹೊದ್ದುಕೊಂಡು, ದೊಡ್ಡ ಅಕ್ಷರಗಳಲ್ಲಿ ರೀಬಾಕ್ ಅಂತ ಬರೆದಿದ್ದ ಸ್ವೆಟರ್ ಧರಿಸಿದ್ದ ಒಂದೆಪ್ಪತ್ತು ವರ್ಷದ ಮುದುಕನ ಪಕ್ಕದಲ್ಲಿ ಹೋಗಿ ಕುಳಿತುಕೊಂಡ. ರೈಲು ಸೆಕೆಂಡುಗಳಲ್ಲಿ ಜನರಿಂದ ತುಂಬಿ ನಿಮಿಷದಲ್ಲಿ ಮತ್ತೆ ವಾಪಸ್ ಹೊರಟಿತು. ಸಮೀರನಿಗೆ ಸಣ್ಣ ಆತಂಕ, ಸರಿಯಾದ ರೈಲಲ್ಲೇ ಬಂದು ಕೂತಿದ್ದೇನಾ ಅಥವಾ ಇನ್ಯಾವುದರಲ್ಲೋ ಬಂದು ಕುಳಿತಿರಬಹುದಾ? ಪಕ್ಕದಲ್ಲಿದ್ದ ಮುದುಕನಲ್ಲಿ ಕೇಳುವ ವಿಚಾರ ಮಾಡಿದ. ಆತನೂ ಎಲ್ಲೋ ಹೊರಗಿನವನಿರಬೇಕು ಅಂತನಿಸಿ ಇಂಗ್ಲಿಷಿನಲ್ಲಿ ವಿಚಾರಿಸಿದ. ಆ ಮುದುಕ ಮಾತನಾಡಲಿಲ್ಲ. ತಕ್ಷಣವೇ ಕನ್ನಡದಲ್ಲಿ ಕೇಳಿದ ಸಮೀರ. ಆ ಮುದುಕ ಈ ಬಾರಿಯೂ ಮಾತನಾಡುವ ಉಮೇದಿ ತೋರಿಸಲಿಲ್ಲ. 'ಹೌದು. ಆಟೋ ಸಿಟಿಗೆ ಹೋಗತ್ತೆ' ಅಂತಷ್ಟೆ ಹೇಳಿ ತನ್ನ ಪಾಡಿಗೆ ತಾನು ಕಣ್ಣು ಮುಚ್ಚಿ ಮಲಗಿದ. ಇಡೀ ಬೋಗಿಯನ್ನ ಮತ್ತೆ ಕಣ್ಣಾಡಿಸಿದ. ನೋಡಿದ ತಕ್ಷಣ ಸುಲಭಕ್ಕೆ ಮಾತನಾಡಿಸಬಹುದು ಅಂತನಿಸುತ್ತಿದ್ದ ಒಬ್ಬ ಜೀವಿಯೂ ಮೌನಕ್ಕೆ ಶರಣಾಗಿದ್ದು ನೋಡಿ, ಯಾರ ಸಹವಾಸವೂ ಬೇಡ ಅಂತ ಕಿವಿಗೆ ಇಯರ್ ಫೋನ್ ಸಿಕ್ಕಿಸಿಕೊಂಡು ತನ್ನ ಪಾಡಿಗೆ ಕೂತ. 'ವೆಲ್ಕಮ್ ಟು ಆಟೋ ಸಿಟಿ. ಪ್ಲೀಸ್ ಟೇಕ್ ಕೇರ್ ಆಫ್ ಯುವರ್ ಬಿಲೋಂಗಿಂಗ್ಸ್' ಅಂತ ರೈಲಿನ ಉದ್ಘೋಷಕಿಯ ಧ್ವನಿ ಹೊರಟಿದ್ದೇ ಸೀಟಿಂದ ದಡಬಡಾಯಿಸಿ ಎದ್ದ. ಒಂದು ಗಂಟೆಗೂ ಮುಂಚೆಯೇ ಆಟೋ ಸಿಟಿಯ ದೊಡ್ಡ ದೊಡ್ಡ ಕಾರ್ಖಾನೆಗಳು, ಇಷ್ಟು ದಿನ ಕೆಲಸ ಹುಡುಕುತ್ತಿದ್ದ ಅವನ ಕಣ್ಣುಗಳಿಗೆ ತಣ್ಣನೆ ಸ್ವಾಗತ ಹೇಳಿದ್ದವು.
ಹೊಸ ಜಾಗಕ್ಕೆ ಬಂದವನೇ ತನ್ನ ಸುಪರ್ವೈಸರ್ ಜೊತೆ ಭೇಟಿಯಾದ. ಅಲ್ಲೇ ಅವತ್ತಿನ ದಿನದ
ಮಟ್ಟಿಗೆ ಸುಧಾರಿಸಿಕೊಳ್ಳಲು ವ್ಯವಸ್ಥೆ ಮಾಡಲಾಗಿತ್ತು. ರೂಮಿಗೆ ಹೋದವನೇ ಶವರ್ ಗೆ ಬೆನ್ನು
ತಾಡಿದ. ಧಾರವಾಡದಿಂದ ಕಳೆದ ಹದಿನಾಲ್ಕು ಗಂಟೆ ಬಸ್ಸಿನಲ್ಲಿ
ಪ್ರಯಾಣಿಸಿ ರಾತ್ರಿಯೆಲ್ಲಾ ಬಸ್ಸಿನಲ್ಲಿ ಅತ್ತ ಮಲಗಲಾರದೇ, ಇತ್ತ ಎದ್ದಿರಲಾರದೇ ಬಂದ ಮೈ ಕೈ ನೋವಿಗೆ ಬಿಸಿನೀರು ಹಿತವೆನಿಸಿತು. ಕಣ್ಣು ಸಣ್ಣದೊಂದು ನಿದ್ದೆ ಬೇಡುತ್ತಿತ್ತು.
ಧಾರವಾಡದ
ಮಾಳಮಡ್ಡಿಯ ಎರಡಂತಸ್ತಿನ, ಒಂದಿಪ್ಪತ್ತು ಕೋಣೆಯ ಮಹಾವೀರ್ ಬಿಲ್ಡಿಂಗಿನ ಮೊದಲನೇ ಅಂತಸ್ತಿನ ಮೆಟ್ಟಿಲ ಪಕ್ಕದ ಸಣ್ಣ ಕೋಣೆಯೊಂದರಲ್ಲಿ, ಮಲಗಿದರೆ ತಲೆಯಿಂದ ಕಾಲಿನ ತನಕ
ಮಾತ್ರ ಬರುವಷ್ಟು ಉದ್ದದ ಕಡಪಾ ಕಲ್ಲಿನ ಮಂಚದ ಮೇಲೆ ಚಾಪೆ ಹಾಸಿ, ಬೇಸಿಗೆಯ ಧಗೆಯಲ್ಲಿ, ತಿರುಗದ ಫ್ಯಾನಿನ ಕಡೆ ಮುಖ ಹಾಕಿ, ಕೈಗೆ ಸಿಕ್ಕಿದ ಪುಸ್ತಕದಲ್ಲೋ, ದಿನಪತ್ರಿಕೆಯಲ್ಲೋ
ಗಾಳಿ ಬೀಸಿಕೊಂಡು, ಏನನ್ನೋ ಓದಿಕೊಂಡು ಸಮಯ ಕಳೆಯುತ್ತಿದ್ದ
ಸಮೀರನಿಗೆ ಬೆಳಗಾಗುವುದರ ಒಳಗೆ ತನ್ನ ಅದೃಷ್ಟ ಬದಲಾಗಿ ಹವಾ ನಿಯಂತ್ರಿತ ಸರ್ವೀಸ್ ಅಪಾರ್ಟ್ಮೆಂಟ್
ಒಂದರಲ್ಲಿ ಮೆತ್ತನೆಯ ಹಾಸಿಗೆಯ ಮೇಲೆ ಉರುಳಾಡುತ್ತಾ ಮಲಗಿರುವುದು ವಿಚಿತ್ರವಾಗಿ ಕಂಡಿತ್ತು.
ಹೊಸತಾಗಿ ಶುರುವಾಗಲಿರುವ ಕೆಲಸ, ಅಲ್ಲಿ ಪರಚಯವಾಗಲಿರುವ ಹೊಸಾ ಜನ, ಹೊಸಾ ಊರು, ಹೊಸತಾಗಿ ಸಿಗುತ್ತಿರುವ ಸೌಕರ್ಯಗಳು.
ಕುತೂಹಲದ ಬೆರಗುಗಣ್ಣಲ್ಲೇ ಹೊಸ ಕನಸುಗಳೂ.
ಭವಿಷ್ಯದ
ಕನಸುಗಳು ನಿದ್ದೆಗೆ ಜಾಗ ಕೊಡಲಿಲ್ಲ. ಕಾರ್ಖಾನೆಯ ಕಡೆ ಹೊರಟ. ಕಾರುಗಳ ಇಂಜಿನ್ ತಯಾರಿಸುವ ಜಾಗ ಅದು. ಅಲ್ಲಿ ಅವನ ಕೆಲಸ ವಿವರಿಸಲಾಯಿತು. ಅವನ ಮಾರ್ಗದರ್ಶಕನ ಪರಿಚಯ ಆಯಿತು. ಅಲ್ಪ ಸ್ವಲ್ಪ
ಕೆಲಸ ಕಲಿತುಕೊಂಡು ಮತ್ತೆ ಸಂಜೆ ಇಕೋ ಸಿಟಿಯ ಕಡೆಯ ರೈಲು ಹತ್ತಿದ. ಖಾಯಂ ಉಳಿದುಕೊಳ್ಳಲು
ರೆಸಿಡೆನ್ಸಿಯಲ್ ಸಿಟಿಯಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಅದಕ್ಕಿನ್ನೊಂದು ರೈಲು.
ರೈಲಿನಲ್ಲಿ
ಪಕ್ಕದ ಸೀಟಿನಲ್ಲಿ ಮತ್ತೆ ಅದೇ ಮುದುಕ. ಸಮೀರ ಅವನನ್ನ ನೋಡಿ ಮುಗುಳ್ನಕ್ಕ. ಆ ಮುದುಕನಿಗೂ
ಬೆಳಿಗ್ಗೆ ಇವನನ್ನ ನೋಡಿದ ನೆನಪಾಗಿರಬೇಕು. ಒಳ್ಳೆ ಮೂಡಿನಲ್ಲೂ ಇದ್ದ. ಅವನೂ ವಾಪಸ್ ನಕ್ಕ. 'ನಿಮ್ದೂ ಇಲ್ಲೇ ಕೆಲ್ಸಾ ಏನೂ?' ಸಮೀರ ಕೇಳಿದ. ಆ ಮುದುಕ
ಮಾತನಾಡಲಿಲ್ಲ, ಸುಮ್ಮನೆ ನಕ್ಕ. ಮಾತಾಡಿಸಿದರೂ ವಾಪಸ್ ಮಾತಾಡದ
ಮುದುಕನನ್ನ ನೋಡಿ ಸಿಟ್ಟು ಬಂತು. ಯಾಕೋ ಮಾತು ಮುಂದುವರೆಸುವುದು ವ್ಯರ್ಥ ಎನಿಸಿ ಕಿವಿಗೆ ಇಯರ್
ಫೋನ್ ಸಿಕ್ಕಿಸಿಕೊಳ್ಳುವಷ್ಟರಲ್ಲಿ, ಆ ಮುದುಕನೇ ಮಾತಿಗೆ
ಮುಂದಾದ. 'ಇಲ್ಲೇ ಇತ್ತು ನನ್ ಕಬ್ಬಿನ್ ಗದ್ದೆ, ನನ್ ಮನೆ'. ಸಮೀರ ಕಿಟಕಿಯಿಂದ ಹೊರಗಡೆ ಇಣುಕಿದ. ಯಾವ
ಗದ್ದೆಯೂ ಕಾಣಲಿಲ್ಲ. ಬರೀ ಕಾರ್ಖಾನೆಗಳು, ಆಫೀಸುಗಳು.
ಮುದುಕನನ್ನ ಮತ್ತೆ ದಿಟ್ಟಿಸಿದ.
'ಹೆಂಡ್ತಿ ಹೊಂಟೋಗಿ ಐದು ವರ್ಷ
ಆಯ್ತು. ಇಬ್ರ್ ಮಕ್ಳು. ಇಬ್ರೂ ಇಲ್ಲೇ ಆಟ ಆಡ್ಕಂಡ್ ಬೆಳ್ದವ್ರು.. ಈಗ ಒಬ್ಬ ಮುಂಬೈಲಿ ಇದಾನೆ.
ಇನ್ನೊಬ್ಬ ಮದ್ರಾಸಲ್ಲಿ ಯಾವ್ದೋ ಕಾಲ್ ಸೆಂಟ್ರಲ್ಲಿ ಕೆಲ್ಸ ಮಾಡ್ತಾವ್ನೆ. ಅವ್ನು ಕಳೆದ ಸಲ
ಬಂದಾಗ ತಂದಿರೋ ಸ್ವೆಟರ್ ಇದು. ಅದೇನೋ ಬ್ರಾಂಡ್ ಅಂತೆ. ದಿನಾ ಈ ರೈಲಲ್ಲಿ ನಾನು ನನ್ ಹಳೆ ಶರ್ಟು
ಹಾಕ್ಕೊಂಡಿರೋದು ಈ ಜನಕ್ಕೆ ಸರಿ ಬರಲ್ವಂತೆ, ಇದನ್ನ ಹಾಕ್ಕ, ಮರ್ಯಾದೆ ಅಂತಂದ.' ಅಂತ ಹೇಳುತ್ತಾ ಅವನ
ಸ್ವೆಟರ್ ನ ಜೇಬಲ್ಲಿರೋ ಫೋಟೋ ತೆಗೆದು ತೋರಿಸಿದ. ಹಳೆಯ ಬ್ಲಾಕ್ ಅಂಡ್ ವೈಟ್ ಫೋಟೋ. ಅವನ ಮನೆಯ
ಫೋಟೋ ಅದು. 'ಹಿಂಗಿತ್ತು ನೋಡು ಈ ಊರು. ಈ ಗವರ್ಮೆಂಟು ಅದೇನೋ
ಸಿಟಿ ಕಟ್ಟುತೀನಿ ಅಂತಂತು. ದುಡ್ಡು ಕೊಡ್ತೀನಿ ಜೊತೆಗೊಂದು ಮನೇನೂ ತಗಳಿ ಅಂತಾನೂ ಅಂತು. ದೊಡ್ಡ
ಮಗನೂ ಹಂಗೇ ಅಂದ. ದುಡ್ಡು ತಗೊಂಡು ಆರಾಮಾಗಿರು, ಇನ್ನೆಷ್ಟು ದಿನ
ಗದ್ದೆ ಕೆಲ್ಸ ನಿಂಗೆ ಅಂದ. ಹೌದಲ್ವಾ ಅಂತನಿಸ್ತು. ಜಾಗ ಕೊಟ್ಟೆ. ನನ್ನ ಊರವ್ರೆಲ್ಲಾ ಜಾಗ
ಕೊಟ್ರು. ಕೊಡದೇ ಇರೋ ಹಾಗೂ ಇರ್ಲಿಲ್ಲ. ನನ್ ಎದುರಿಗೇ ಬುಲ್ದೋಜರ್ ಹತ್ತಿಸಿ ಮನೆ
ಒಡೆದ್ರು. ಗದ್ದೆ ಮೇಲೆ ರೋಲರ್ ಓಡಾಡ್ತು. ಹೋಗಿದ್ದು ಹೋಯ್ತು, ನನ್ನದಲ್ಲ
ಅಂದಮೇಲೆ ನಾನ್ಯಾಕೆ ತಲೆ ಕೆಡಿಸ್ಕೋಬೇಕು ಅಂತ ಎಲ್ರೂ ಹೇಳಿದ್ರು. ನನ್ನದಲ್ಲ ನಿಜ. ದುಡ್ಡು ಕೊಟ್ಟಿದಾರೆ, ಮನೆ
ಕೊಟ್ಟಿದಾರೆ. ಆದರೆ ಏನ್ ಮಾಡ್ಲಿ.. ಮನೇಲಿ ಕೂತ್ರೆ ಹೊತ್ ಹೋಗಲ್ಲ. ನಿದ್ದೆಯಿಂದ ಎಚ್ಚರ
ಆದ್ರೆ ಹಿಂಸೆ ಆಗತ್ತೆ. ಅದಕ್ಕೆ ಈ ರೈಲು ಹತ್ತಿ ಕೂತುಬಿಡ್ತೀನಿ. ಗದ್ದೆ, ಮನೆ, ಮಕ್ಕಳು ಎಲ್ಲಾ ನೆನಪಾಗತ್ತೆ. ಜೊತೆಗೆ
ಒಂದೆರಡು ಸಣ್ಣ ನಿದ್ದೆನೂ ಇಲ್ಲೇ. ರಾತ್ರಿ ಮತ್ತೆ ಮನೆ. ಬೆಳಿಗ್ಗೆ ಮತ್ತೆ ಇದೇ ರೈಲು. ಮನೆ, ಗದ್ದೆ, ಮಕ್ಕಳು, ನೆನಪು.. ಎಲ್ಲವೂ ಬೇಕಲ್ವಾ ಉಸಿರು ಹಿಡಿಕೊಂಡು ಇರೋಕೆ... ಸಿಟಿ ಕಟ್ಕೊಂಡು
ನಮ್ಮನ್ನೆಲ್ಲಾ ಮೂಲೆಗೆ ಸರಿಸಿ ಖುಷಿಯಾಗಿದಾರೆ ಎಲ್ಲಾ' ಅಂತ
ಹೇಳಿ ಮತ್ತೆ ಮೌನವಾದ.
ಸಮೀರನಿಗೆ
ಏನು ಹೇಳಬೇಕೋ ತೋಚಲಿಲ್ಲ. ವರ್ಷಗಟ್ಟಲೇ ಕಾದು ಸಿಕ್ಕ ಕೆಲಸ ಇದು. ಇಕೋ ಸಿಟಿ, ಆಟೋ ಸಿಟಿ ಎಲ್ಲಾ
ನೀರ್ಮಾಣವಾಗದಿದ್ದರೆ, ತಾನು ಎಲ್ಲಿರುತ್ತಿದ್ದೆ? ವಯಸ್ಸಾದ ಮೇಲೆ ಏನು ಮಾಡುತ್ತಿರುತ್ತಿದ್ದೆ? ಮನೆಯೂ
ಇಲ್ಲದೆ, ಗದ್ದೆಯೂ ಇಲ್ಲದೆ ರಸ್ತೆ ಪಾಲಾಗಿರುತ್ತಿದ್ದೆ ಅಲ್ಲವಾ? ಕೆಲಸ ಸಿಗದೇ ನನ್ನ ಮದುವೆ ಆಗುತ್ತಿತ್ತಾ? ಮಕ್ಕಳೇ
ಇರ್ತೀರ್ಲಿಲ್ಲ! ನನಗೂ ಒಂದು ಊರಿದೆ. ಅದನ್ನ ಬಿಟ್ಟು ಎಷ್ಟೋ ವರ್ಷ ಆಯ್ತು. ಕೆಲಸ ಇಲ್ಲದೇ ಊರಿಗೆ
ಹೋದ್ರೆ ನೆನಪಲ್ಲ.. ಬರೀ ಊರವರ ಮುಂದೆ ನಗೆಪಾಟಲು. ಊರಲ್ಲಿದ್ದರೆ ಉಪಯೋಗಕ್ಕೆ ಬಾರದವ ಅಂತ
ಯಾರ್ಯಾರದೋ ಬಾಯಲ್ಲಿ ಕೇಳಬೇಕಾಗುತ್ತೆ ಅಂತ ಹತ್ತಿರದ ಧಾರವಾಡದಲ್ಲೊಂದು ಸಾವಿರ ರೂಪಾಯಿ
ಬಾಡಿಗೆಗೆ ರೂಂ ಮಾಡಿ, ಅಪ್ಪನಿಗೆ ದುಡ್ಡು ಕೇಳೋದು ಮುಜುಗರ ಅನಿಸಿದಾಗಲೆಲ್ಲಾ
ಅಲ್ಲೇ ಯಾವುದೋ ಖಾನಾವಳಿಯಲ್ಲಿ ಸಪ್ಲೈಯರ್ ಕೆಲಸಕ್ಕೆ ಸೇರಿಕೊಂಡು, ಮದುವೆ ಮನೆ ಕಂಟ್ರಾಕ್ಟರ್ಗೆ ಸಲಾಂ ಹೊಡೆದುಕೊಂಡು ಯಾವುದೋ ಮದುವೆಯಿದ್ದರೆ ಅಲ್ಲಿ
ಬಡಿಸುವ ಕೆಲಸ ಗಿಟ್ಟಿಸಿಕೊಂಡು ಊಟಕ್ಕೆ, ಬಾಡಿಗೆಗೆ ಒಂದಿಷ್ಟು
ದುಡ್ಡು ಹೊಂದಿಸಿ, ದಿನಾಲೂ ಕೆಲಸಕ್ಕೆ ಅಲೆಯುತ್ತಿದ್ದ ದಿನಗಳು
ತುಂಬಾ ಹಿಂದಿನದೇನು ಅಲ್ಲ. ನಿನ್ನೆಯವರಗೂ ಅದೇ. ಮೊನ್ನೆ ಪೊಸ್ಟಿನಲ್ಲಿ ತನ್ನ ರೂಮಿಗೆ ಹೊಸ
ಕಂಪನಿಯ ಕೆಲಸದ ಆಫರ್ ಲೆಟರ್ ಬರದೇ ಹೋಗಿದ್ದಿದ್ದರೆ ಇಷ್ಟು ಹೊತ್ತಿಗೆ ಖಾನಾವಳಿಯಲ್ಲಿ ಸೊಪ್ಪಿನ ಪಲ್ಯ
ಬಡಿಸಿಕೊಂಡು, ಅದು ನಿಧಾನವಾದರೆ ಅವರ ಕೈಲಿ ಬೈಸಿಕೊಂಡು ಕೂತಿರುವ
ಯೋಚನೆ ಕಣ್ಣ ಮುಂದೆ ಸುಳಿಯಿತು. ಯಾವುದೇ ಕಾರಣಕ್ಕೆ ಮತ್ತೆ ಆ ದಿನಗಳ ಯೋಚನೆ ಬೇಡ ಅಂತ ಅದನ್ನ
ದೂರ ಮಾಡುವ ಪ್ರಯತ್ನ ಮಾಡಿದ. ರೈಲಿನಲ್ಲಿ ಕಣ್ಣಾಡಿಸಿದ. ಪ್ರತಿ ಐದೈದು ನಿಮಿಷಕ್ಕೆ ರೈಲಿದ್ದರೂ ತುಂಬಿರುವ ಬೋಗಿ. ಇವರೆಲ್ಲರಿಗೂ ತನ್ನಂತೇ
ಹೊಸ ಕನಸು ಕಟ್ಟಿ ಕೊಟ್ಟ ಊರಲ್ಲವಾ? ಸಮೀರನಿಗೆ ಇಷ್ಟು ಹೊತ್ತು ಈ ಮುದುಕ ಮಾತ್ರ ತನ್ನವ ಅಂತನಿಸುತ್ತಿತ್ತು. ಆದರೆ ಅವನ ಕೊರಗುವಿಕೆ
ಕೇಳಿಸಿಕೊಂಡ ಮೇಲೆ, ತನ್ನ ನೆನಪುಗಳನ್ನ ಹಾಳು ಮಾಡಿದ್ದಕ್ಕೆ ನಗರಕ್ಕೆ
ಬಯ್ಯುತ್ತಿದ್ದ ಮುದುಕನ್ನೊಬ್ಬನನ್ನ ಬಿಟ್ಟು
ಉಳಿದವರೆಲ್ಲರೂ ತನ್ನವರು ಅನ್ನಿಸಲು ಶುರುವಾಯಿತು. ಮುದುಕನ ಮಾತುಗಳಿಗೆ ಅರ್ಥ ಇಲ್ಲ
ಅಂತನಿಸಿ ಅವನ ಬಳಿ ಮಾತನಾಡುವುದು ನಿಲ್ಲಿಸಿದ. ಇಬ್ಬರೂ
ಕಿಟಕಿಯಾಚೆಗೆ ದೃಷ್ಟಿಯಿಟ್ಟರು. ಒಬ್ಬ ಕನಸುಗಳತ್ತ. ಇನ್ನೊಬ್ಬ ನೆನಪುಗಳತ್ತ.
ಮಾರನೆಯ ದಿನ ಬೆಳಿಗ್ಗೆ ಸಮೀರ ರೈಲು ಹತ್ತಿದಾಗ, ರೈಲು
ತುಂಬಿತ್ತು. ಬಾಗಿಲ ಬಳಿಯೇ ನಿಂತುಕೊಂಡ ಸಮೀರ. ಆ ಮುದುಕ ಎಂದಿನಂತೆ ಅದೇ ಸೀಟಿನಲ್ಲಿ ಕೂತಿದ್ದ,
ಸೀಟಿನ ಪಕ್ಕದ ಗಾಜಿಗೆ ಒರಗಿಕೊಂಡು. ಆ ಮುದುಕನ ಕಡೆಗೆ ನೋಡಿ ಕೈ ಬೀಸಿದ. ಮುದುಕ
ಇತ್ತ ನೋಡಲೂ ಇಲ್ಲ.
ಸಮಯಕ್ಕೆ ಸರಿಯಾಗಿ, ಒಂದು ಗಂಟೆಯಲ್ಲಿ ಸಮೀರನ ಕಾರ್ಖಾನೆಯ
ಸ್ಟಾಪ್ ಬಂದಿತ್ತು. ಇಳಿದುಕೊಂಡ. ಯಾವುದೋ ಟ್ರೈನಿಂಗಿಗೆ ಕಳಿಸಿದರು. ಅಲ್ಲಿ ಇಡೀ ಸಿಟಿಯ ಪರಿಚಯ
ಮಾಡಿಸಲಾಯ್ತು. "ನಗರದ ಒಳಗೆ ಇನ್ನೊಂದಿಷ್ಟು ನಗರಗಳು. ಶಾಪಿಂಗಿಗೆ ಎಂದೇ ಒಂದು ಸಣ್ಣ ನಗರ.
ಎಲ್ಲಾ ತರಹದ ಮಾಲುಗಳು, ಸೂಪರ್ ಮಾರ್ಕೆಟ್ ಗಳು, ಮಲ್ಟಿಪ್ಲೆಕ್ಸುಗಳು ಅಲ್ಲಿ. ಲೆಕ್ಕವಿಲ್ಲದಷ್ಟು ಟೆನ್ನಿಸ್ ಕೋರ್ಟು, ಕ್ರಿಕೆಟ್ ಗ್ರೌಂಡು, ಫುಟ್ಬಾಲ್ ಗ್ರೌಂಡುಗಳು, ಇಂಡೋರ್ ಸ್ಟೇಡಿಯಂಗಳು, ಆಟದ ಟೂರ್ನಮೆಂಟುಗಳು ನಡೆಸೋದಕ್ಕೆ
ಸ್ಪೋರ್ಟ್ಸ್ ಕಾಂಪ್ಲೆಕ್ಸ್. ಕಿರಾಣಿ ಪದಾರ್ಥಗಳೆಲ್ಲಾ ಇಲ್ಲೇ ತಯಾರಾಗುತ್ತದೆ ಫುಡ್
ಪ್ರೊಸೆಸಿಂಗ್ ಸಿಟಿಯಲ್ಲಿ. ಅದಕ್ಕೆ ಬೇಕಾದ ಸಾಮಾನು ಸರಂಜಾಮುಗಳೆಲ್ಲಾ ಅಗ್ರಿ ಸಿಟಿಯಿಂದ ಸಪ್ಲೈ
ಆಗುತ್ತದೆ. ಅಗ್ರಿ ಸಿಟಿಯನ್ನೂ ಒಂದು ಹತ್ತು ಕಂಪನಿಗಳು ನೋಡಿಕೊಳ್ಳುತ್ತಿದೆ. ಯಾರು ಏನು
ಬೆಳೆಯಬೇಕು, ಎಷ್ಟು ಬೆಳೆಯಬೇಕು ಎಲ್ಲವೂ ಕಂಪನಿ ನಿರ್ಧಾರ ಮಾಡುತ್ತದೆ.
ಎಲ್ಲರಿಗೂ ಉಳಿದುಕೊಳ್ಳಲು ರೆಸಿಡೆನ್ಷಿಯಲ್ ಸಿಟಿಯಲ್ಲಿ ವ್ಯವಸ್ಥೆ ಇದೆ. ನಗರದ ತುಂಬೆಲ್ಲಾ
ಎಲ್ಲಾ ದಿಕ್ಕಿನಲ್ಲೂ ಒಂದೊಂದು ರೆಸಿಡೆನ್ಷಿಯಲ್ ಸಿಟಿ. ನಿಮಗೆ ಬೇಕಾಗಿರೋ ಎಲ್ಲವನ್ನೂ ಈ ಸಿಟಿ
ನೋಡಿಕುಳ್ಳುತ್ತದೆ" ಅಂತೆಲ್ಲಾ ಟ್ರೈನಿಂಗಿನಲ್ಲಿ ಹೇಳುತ್ತಿದ್ದರೆ, ಇದನ್ನೆಲ್ಲಾ ಕೇಳಿದ ಸಮೀರ ಕೂತಲ್ಲೆ ಕಂಪಿಸುತ್ತಿದ್ದ. ಹೀಗೆಲ್ಲಾ ಇರಬಹುದು
ಅನ್ನೋ ಯೋಚನೆಯೇ ಅವನ ತಲೆಯ ಒಳಗೆ ಸುಲಭಕ್ಕೆ ಇಳಿಯುತ್ತಿರಲಿಲ್ಲ.
ಇಡೀ ದಿನ ಇನ್ನೂ ಒಂದಿಷ್ಟು ಟ್ರೈನಿಂಗ್ ಮುಗಿಸಿ ಮತ್ತೆ ವಾಪಸ್ ಟ್ರೈನು ಹತ್ತಿದ.
ಸುಸ್ತು ಆವರಿಸಿತ್ತು. ಚಿಕ್ಕದೊಂದು ನಿದ್ರೆ ಮಾಡಿ ಎದ್ದಾಗ ಆಗಲೇ ಅವನ ಸ್ಟಾಪ್ ಬಂದಿತ್ತು.
ಅವಸರದಲ್ಲಿ ರೈಲಿನಿಂದ ಇಳಿದುಕೊಂಡ. ರೈಲಿನಿಂದ ಹೊರಬಂದ ಮೇಲೆ ಆ ಮುದುಕನನ್ನ ನೋಡಲೇ
ಇಲ್ಲವಲ್ಲಾ ಇವತ್ತು ಅಂತ ಕುತೂಹಲಕ್ಕೆ ರೈಲಿನ ಒಳಗೊಮ್ಮೆ ದೃಷ್ಟಿ ಹರಿಸಿದ ಅವನ ಖಾಯಂ
ಸೀಟಿನ ಕಡೆಗೆ. ನೆನಪು, ಮಕ್ಕಳು, ಮನೆ ಅಂತ
ಕೊರಗುತ್ತಾ ಕೂತಿರಬೇಕು ಯಾವತ್ತಿನಂತೆ ಅಂತ ಮನಸ್ಸಲ್ಲೇ ನಕ್ಕ. ಕಿಟಕಿಯ ಹೊರಗಿಂದಲೇ ಮತ್ತೆ ಕೈ
ಬೀಸುವ ಪ್ರಯತ್ನ ಮಾಡಿದ, ಈ ಕಡೆ ತಿರುಗಿದರೆ ನೋಡಲಿ ಅಂತ. ಆ ಮುದುಕ
ಇವನ ಕಡೆ ತಿರುಗಲೇ ಇಲ್ಲ. ರೈಲು ಮತ್ತೆ ಹೊರಟು ಹೋಯಿತು. ತಕ್ಷಣ ಸಮೀರನ ತಲೆಯಲ್ಲಿ ಒಂದು
ಯೋಚನೆ ಹೊಕ್ಕಿತು. ಬೆಳಿಗ್ಗೆ ಅವನನ್ನ ರೈಲಿನ ಬಾಗಿಲ ಬಳಿಯಿಂದ ನೋಡಿದ್ದು ನೆನಪಾಯಿತು. ಆ ಮುದುಕ ಬೆಳಿಗ್ಗೆ ಹೇಗೆ ಕುಳಿತಿದ್ದನೋ ಹಾಗೇ ಇದ್ದಾನಲ್ಲವಾ? ಬೆಳಿಗ್ಗೆಯೂ ತಲೆ ತಗ್ಗಿಸಿ ಗಾಜಿಗೆ ಒರಗಿಕೊಂಡು, ಈಗಲೂ
ಹಾಗೆಯೇ. ಮುದುಕ ಸುಮ್ಮನೇ ಮಲಗಿದ್ದಷ್ಟೇ ಇರಬಹುದಾ? ಮನೆಯ ಕಡೆಗೆ ಹೋಗಲು ಯಾಕೋ ಮನಸ್ಸು ಒಪ್ಪಲಿಲ್ಲ. ಇನ್ನೊಂದು ರೈಲು ಹತ್ತಿ ಹೊರಟರೆ ಅದು
ಅಲ್ಲಿ ಹೋಗಿ ಮುಟ್ಟುವಷ್ಟರಲ್ಲಿ ಮತ್ತೆ ಈ ರೈಲು ವಾಪಸ್ ಬಂದಿರುತ್ತೆ. ಅನುಮಾನಗಳು ನಿಜವಾಗದಿರಲಿ
ಅಂತ ಬೇಡಿಕೊಂಡ. ಮತ್ತೆ ಆ ರೈಲು ಬರಲು ಎರಡು ಗಂಟೆ ಬೇಕು ಅಂತ ಗೊತ್ತಿದ್ದರೂ ಬಂದು ಹೋಗುವ
ಎಲ್ಲಾ ರೈಲುಗಳ ಕಿಟಕಿಯೊಳಗೆ ದೃಷ್ಟಿ ಹಾಯಿಸಿ ಮುದುಕನನ್ನ ಹುಡುಕುತ್ತಿದ್ದ. ಕೊನೆಗೂ ಆ ಮುದುಕ
ಮತ್ತೆ ಕಂಡ. ತಕ್ಷಣ ಒಳಹೊಕ್ಕ ಸಮೀರ ಆ ಸೀಟಿನ ಪಕ್ಕ ಕೂತು ಮಾತಾಡಿಸುವ ಪ್ರಯತ್ನ ಮಾಡಿದ.
ಉತ್ತರವಿಲ್ಲ. ಕೈ ಹಿಡಿದು ತಳ್ಳಿದ. ಅನುಮಾನ ನಿಜವಾಗಿತ್ತು. ತಕ್ಷಣ ಎಮರ್ಜೆನ್ಸೀ ನಂಬರ್ ಗೆ
ಫೋನ್ ಮಾಡಿ ವಿವರಿಸಿದ. ಇಕೋ ಸಿಟಿಯ ಪೊಲೀಸರು ಹತ್ತೇ ನಿಮಿಷದಲ್ಲಿ ಅಲ್ಲಿದ್ದರು. ಆಂಬ್ಯುಲೆನ್ಸ್
ಕೂಡ.
"ಆ ಮುದುಕನ ಪರಿಚಯ ಇದೆಯಾ" ಪೊಲೀಸರು ಸಮೀರನಿಗೆ ಪ್ರಶ್ನೆಗಳನ್ನ
ಹಾಕಲು ಶುರು ಮಾಡಿದರು.
"ಹೌದು" - ತನ್ನ ಕಥೆ ಹೇಳಿಕೊಂಡ ಅಂದರೆ
ಪರಿಚಯ ಇತ್ತು ಅಂತಲೇ ಅಲ್ಲವಾ? ಹೌದು ಅಂದ.
"ಮನೆ ಎಲ್ಲಿ ಈ ತಾತಂದು?"
"ಗೊತ್ತಿಲ್ಲ" - ಅವನ
ಜೇಬಿನಲ್ಲಿ ಒಂದು ಹಳೆಯ ಫೋಟೋ ಇದೆ. ಅದು ಅವನ ಹಳೆಯ ಮನೆ. ಆ ಮುದುಕ ಇನ್ನೂ ಮನೆಯೆಲ್ಲಿ ಅಂದರೆ
ಅದನ್ನೇ ತೋರಿಸುತ್ತಾನೆ. ಹೊಸದು ಉಳಿದುಕೊಳ್ಳೋಕೆ ಜಾಗವಷ್ಟೆ ಅವನಿಗೆ. ಮನೆಯಲ್ಲ. ಹಳೆಯ ಫೋಟೋ
ಪೊಲೀಸರಿಗೆ ತೋರಿಸಿದರೆ ಹುಚ್ಚ ಅಂತ ತಲೆ ಪಟ್ಟಿ. ಮನೆ ಎಲ್ಲಿ? ಗೊತ್ತಿಲ್ಲ.
"ಮತ್ತೆ ಯಾರಾದರೂ ಪರಿಚಯದವರು?
ಮಕ್ಕಳು? ಯಾವದಾದ್ರೂ ಫೋನ್ ನಂಬರ್ರು?
"
"ಇಲ್ಲ" - ಆ
ಮುದುಕ ಯಾರ ಬಳಿಯೂ ಮಾತಾಡಿದ್ದು ನೋಡಿಲ್ಲ. ಮಕ್ಕಳು ಭೇಟಿಯಾಗಿ ಎಷ್ಟು ವರ್ಷವಾಗಿರಬಹುದೋ?
ಬರೀ ಅವನ ನೆನಪಲ್ಲಿ ಮಾತ್ರ ಕಾಣುತ್ತಿದ್ದರಾ? ಯಾಕಿಂಥ
ಯೋಚನೆ? ಬಂದು ಹೋಗಿ ಮಾಡುತ್ತಿದ್ದರೇನೋ, ಗೊತ್ತಿಲ್ಲ.
"ಇಲ್ಲ. ಆ ಮುದುಕನ ಯಾವ ಪರಿಚಯಸ್ಥರೂ ಗೊತ್ತಿಲ್ಲ. ಒಬ್ಬ ಮಗ ಮುಂಬೈ ಲಿ ಇನ್ನೊಬ್ಬ ಚೆನ್ನೈಲಿ.
ಅಷ್ಟೇ ಗೊತ್ತಿರೋದು"
ಸಮೀರನನ್ನ ಇನ್ನೂ ಕೇಳುವುದು ಸುಮ್ಮನೇ ದಂಡ ಅಂತ ಭಾವಿಸಿದ ಇನ್ಸ್ಪೆಕ್ಟರ್ ಅಲ್ಲಿಂದ ಹೊರಟ.
ಆಂಬ್ಯುಲೆನ್ಸಿನಲ್ಲಿ
ಮುದುಕನನ್ನ ಹತ್ತಿಸಿಕೊಳ್ಳಲಾಯಿತು. ಸಮೀರನೂ
ಜೊತೆಗೇ ಹೋದ. ಸಿಸಿ ಟಿವಿಯ ಮುಖಾಂತರ ಆ ಮುದುಕ ದಿನಾಲೂ ಬರುತ್ತಿದ್ದ ದಾರಿಯನ್ನ ಟ್ರಾಕ್ ಮಾಡಿ
ಕೊನೆಗೂ ಅವನ ಮನೆ ಕಂಡು ಹಿಡಿಯಲಾಯಿತು. ಮುನ್ನೂರು ಮನೆಗಳ ಬಿಲ್ಡಿಂಗಿನಲ್ಲಿ ಚಿಕ್ಕದೊಂದು ಮನೆ.
ಅಲ್ಲೇ ಹಾಲ್ ನಲ್ಲಿ ಒಂದು ಚಾಪೆ ದಿಂಬು. ತಾಗಿಕೊಂಡಿರುವ ಅಡಿಗೆ ಮನೆಯಲ್ಲಿ ಒಂದಿಷ್ಟು
ಪಾತ್ರೆಗಳು. ಮಗನ ಮದುವೆಯ ಅಲ್ಬಮ್ಮು. ಮತ್ಯಾವ ವಿವರಗಳೂ ಸಿಗಲಿಲ್ಲ. ಅಲ್ಲೇ ಅಕ್ಕಪಕ್ಕದ
ಮನೆಗಳಲ್ಲಿ ಅವನ ಬಗ್ಗೆ ವಿಚಾರಿಸಲಾಯಿತು. ಬೆಳಿಗ್ಗೆ ಹೋದರೆ ದಿನಾ ರಾತ್ರಿ ಬರ್ತಾನೆ ಮನೆಗೆ
ಅನ್ನೋದು ಬಿಟ್ಟು ಬೇರೇನೂ ಗೊತ್ತಾಗಲಿಲ್ಲ. ಮುಂಚೆಯಿಂದ ಆ ಮುದುಕನ ಬಗ್ಗೆ ಪರಿಚಯವಿದ್ದವರೂ ಯಾರೂ
ಸಿಗಲಿಲ್ಲ. ಅಪಾರ್ಟ್ಮೆಂಟ್ ಬಿಲ್ಡಿಂಗಿನಲ್ಲಿ ಇವನ ಫೋಟೋ ನೋಟಿಸ್ ಹಾಕಲಾಯ್ತು. ಆಸ್ಪತ್ರೆಯಿಂದ ಪೋಸ್ಟ್ ಮಾರ್ಟಮ್ ರಿಪೋರ್ಟ್ ಬಂದಿತ್ತು. ಮುದುಕ ಹೃದಯಾಘಾತದಿಂದ
ಸತ್ತಿದ್ದಾನೆ. ಆಸ್ಪತ್ರೆಗೆ ತಂದಾಗ ಸತ್ತು ಹದಿನಾಲ್ಕು ಗಂಟೆ
ಕಳೆದಿದೆ. ಬೆಳಗಿನ ಜಾವ ಸುಮಾರು ಐದು ಗಂಟೆಯ ಹೊತ್ತಲ್ಲಿ ಪ್ರಾಣ ಬಿಟ್ಟಿರಬಹುದು ಅಂತ ಡಾಕ್ಟರ್
ಹೇಳಿದ್ದರು.
ಇಡೀ
ದಿನ ಆ ಮುದುಕ ಆ ಟ್ರೈನಿನಲ್ಲಿ ಹೆಣವಾಗೇ ಕೂತಿದ್ದನಾ? ಯಾರೂ ಮಾತನಾಡಿಸಲು ಪ್ರಯತ್ನಿಸಲಿಲ್ಲವಾ? ತಾನಾದರೂ ಬೆಳಿಗ್ಗೆ ಮುದುಕನನ್ನ ಮಾತಾಡಿಸೋಕೆ ಇನ್ನೊಂದಿಷ್ಟು ಪ್ರಯತ್ನ ಮಾಡಿದ್ದರೆ! ತಕ್ಷಣ ಗೊತ್ತಾಗಿ ಆಸ್ಪತ್ರೆ ಸೇರಿಸಿದ್ದರೆ? ಯೋಚನೆಗಳು
ಬಂದವು.
ಅಮ್ಮ
ನೆನಪಾದಳು. ಅಲ್ಲಿಂದಲೇ ಅವಳಿಗೊಂದು ಫೋನ್ ಮಾಡಿದ. 'ಹೆಂಗಿದೆ ಮಗಾ ಹೊಸಾ ಊರೂ?' ಕೇಳಿತ್ತು ಅತ್ತಲಿಂದ ಅಮ್ಮನ ಧ್ವನಿ. ಸತ್ರೂ ಕೇಳವ್ರಿಲ್ಲ ಈ ಊರಲ್ಲಿ ಅಂತ ಬಾಯಿ
ತುದಿಗೆ ಬಂದ ಮಾತು ಹಾಗೆಯೇ ಅಲ್ಲಿಯೇ ಉಳಿದುಕೊಂಡಿತು. "ತುಂಬಾ ಚಂದ ಇದೆ, ನಂಗೆ ಕೆಲ್ಸಾನೇ ಸಿಗಲ್ವೇನೋ ಅಂದ್ಕಂಡಿದ್ದೆ... ಅಂತೂ ನಿನ್ ಆಸೆ ತೀರ್ತು ನೋಡು..
ನಿನ್ನ ಮಗ ಇನ್ನು ನಿನ್ ಕೈಗೆ ಸಿಕ್ಕಲ್ಲ.." ಅಂದ. ಅಮ್ಮ ಸುಮಾರು ದಿನದ ಬಳಿಕ
ಖುಷಿಯಾಗಿದ್ದಂತೆ ಕಂಡಿತು. ಯಾಕೋ ಮುಂದೆ ಮಾತಾಡಲಾಗಲಿಲ್ಲ ಸಮೀರನಿಗೆ. ಫೋನ್ ಕಟ್ ಮಾಡಿದ.
ಒಂದು ದಿನ ಕಾದರು. ಮುದುಕನ ಹೆಣ ನೋಡಲು ಯಾರೂ ಬರಲಿಲ್ಲ. ಮಾರನೆಯ ದಿನ ವಿದ್ಯುತ್
ಚಿತಾಗಾರದಲ್ಲಿ ಸುಡಲಾಯ್ತು. ಸಮೀರನೂ ಕೆಲಸಕ್ಕೆ ಹೋಗಬೇಕಾದ ಕಾರಣ ಆ ಮುದುಕನನ್ನ ಸುಡುವಾಗ
ಜೊತೆಯಿರಲಿಲ್ಲ. ವಾಪಸ್ ಬಂದವನೇ ಚಿತಾಗಾರದ ಮುಂದೆ ಸುಮ್ಮನೇ ಕುಳಿತುಬಿಟ್ಟ. ಕಣ್ಣೀರು
ತಾನೇ ತಾನಾಗಿ ಹರಿದಿತ್ತು.
ರೈಲು ಬಂದು ಹೋಗುವುದು ಮಾಡುತ್ತಲೇ ಇತ್ತು. ಎಷ್ಟೋ ಜನ ಇಳಿದುಕೊಂಡು ಎತ್ತಲೋ
ಹೊರಡುತ್ತಿದ್ದರು. ಇನ್ನೊಂದಿಷ್ಟು ಜನ ಬಂದು ಹತ್ತುತ್ತಿದ್ದರು. ಮಾರನೆಯ ದಿನ ಬೆಳಿಗ್ಗೆ ರೈಲು ಹತ್ತಿದ ಸಮೀರ ಮುದುಕನ ಸೀಟಲ್ಲಿ ಕೂತ.
ಕಿಟಕಿಯಾಚೆಗೆ ಗದ್ದೆ, ಸ್ಕೂಲು, ಮನೆ,
ಹುಡುಗರು, ಅವರ ಆಟ, ಜಗಳ,
ನಗು ಎಲ್ಲವೂ ಕಂಡವು. ಫಸಲಿನ ಮೇಲೆ ಬೂಟುಗಾಲಲ್ಲಿ ಓಡುತ್ತಿರುವವರೂ ಕಂಡರು.
ಬರಿಗಾಲಲ್ಲಿ ಓಡುವವರೂ. ಸಮೀರನೂ ಗುಂಪಲ್ಲಿ ಓಡುತ್ತಿದ್ದ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ