ಮೇ 28, 2014

ಅಟ್ಲಾಂಟಿಕ್ ಸಿಟಿಪೂರ್ವ ತೀರದ ಲಾಸ್ ವೇಗಸ್ ಅಂತ ಕರೆಸಿಕೊಳ್ಳುವ ಅಟ್ಲಾಂಟಿಕ್ ಸಿಟಿ ನೋಡುವುದೆಂದು ತೀರ್ಮಾನಿಸಿ ಹೊರಟಾಗಿತ್ತು. ಸ್ಟಾಂಫೋರ್ಡ್  ನಗರದಿಂದ ಅಟ್ಲಾಂಟಿಕ್ ಸಿಟಿ ಗೆ ಸುಮಾರು ಮೂರು ಗಂಟೆಗಳ ಪ್ರಯಾಣ. ಎಕ್ಸ್ಪ್ರೆಸ್ ವೇನಲ್ಲಿ ಗಂಟೆಗೆ ೧೦೦ - ೧೨೦ ಕಿಲೋಮೀಟರು ವೇಗದಲ್ಲಿ ಸರಾಗವಾಗಿ ಚಲಿಸುತ್ತಿದ್ದ ಕಾರು, ಅಪರೂಪಕ್ಕೆ ಸಿಕ್ಕಿರೋ ಕನ್ನಡ ಹುಡುಗರ ದಂಡು, ಕಾರಿನ ಸ್ಟೀರಿಯೋದಿಂದ ಹೊರಹೊಮ್ಮುತ್ತಿದ್ದ 'ಬಾನಿಗೊಂದು ಎಲ್ಲೆ ಎಲ್ಲಿದೆ.. ನಿನ್ನಾಸೆಗೆಲ್ಲಿ ಕೊನೆಯಿದೆ.. ' ಹಾಡು, ಜೊತೆಗೆ ಅಟ್ಲಾಂಟಿಕ್ ಸಿಟಿಯ ಬಗ್ಗೆ ಚಿಕ್ಕದೊಂದು ಕುತೂಹಲ ಆ ವೀಕೆಂಡ್ ಗೆ ಹೊಸ ಉತ್ಸಾಹವನ್ನಂತೂ ತಂದಿತ್ತು. ಕನ್ನಡ ಹಾಡುಗಳನ್ನ ಕೇಳುತ್ತಾ, ಗೆಳೆಯರೊಂದಿಗೆ ಊರು, ಬೆಂಗಳೂರು, ಕೆಲಸ ಹೀಗೆ ಹರಟುವಷ್ಟರಲ್ಲಾಗಲೇ ಅಟ್ಲಾಂಟಿಕ್ ಸಿಟಿಯ ಸಮುದ್ರ ತೀರ ನಮ್ಮನ್ನ ಬರಮಾಡಿಕೊಂಡಿತ್ತು. ಅಲ್ಲಿಗೆ ಬಂದಾಗ ಸಂಜೆ ೪ ಗಂಟೆ. ಸೂರ್ಯ ಇನ್ನೂ ಸುಡುತ್ತಲೇ ಇದ್ದ.  ಬೇಸಿಗೆಯಲ್ಲಿ ಅಮೆರಿಕಾದ ಪೂರ್ವ ತೀರದ ಪ್ರದೇಶಗಳಲ್ಲಿ ಕತ್ತಲಾಗುವುದು ಎಂಟು ಗಂಟೆಯ ಮೇಲೆಯೇ ಆದ್ದರಿಂದ ಅವಾಗಿನ್ನೂ ಮಧ್ಯಾಹ್ನದ ಲೆಕ್ಕ.                                      


ಅಟ್ಲಾಂಟಿಕ್ ಸಿಟಿಯ ಪ್ರಮುಖ ಆಕರ್ಷಣೆಗಳೆಂದರೆ ಅಲ್ಲಿನ ಸಮುದ್ರ ತೀರ, ಪ್ರಸಿದ್ದ ಬೋರ್ಡ್ ವಾಕ್ ಮತ್ತು ಕ್ಯಾಸಿನೊ, ನೈಟ್ ಕ್ಲಬ್ ಗಳು. ನಮ್ಮ ಸವಾರಿ ಮೊದಲು ಹೊರಟಿದ್ದು ಬೀಚಿನ ಕಡೆಗೆ. ಸಮುದ್ರ ತೀರ ಗಿಜಿಗುಡುತ್ತಿತ್ತು. ಒಂದಿಷ್ಟು ಜನ ಬಿಸಿಲಿಗೆ ಮೈ ಒಡ್ಡಿ ಕೂತಿದ್ದರೆ, ಇನ್ನೊಂದಿಷ್ಟು ಜನ ಬಿಸಿಲಿಗೆ ಅಡ್ಡಲಾಗಿ ಹಿಡಿದ ಕೊಡೆಗಳ ನೆರಳಲ್ಲಿ ವಿಶ್ರಮಿಸುತ್ತಾ ಸಮುದ್ರದ ಅಲೆಗಳನ್ನ ನೋಡುತ್ತಾ ಹೊತ್ತು ಕಳೆಯುತ್ತಿದ್ದರು. ಅಲೆಗಳ ಮೇಲೆ ಸರ್ಫಿಂಗ್ ಮಾಡುವ ಅಡ್ವೆಂಚರ್ ಪ್ರಿಯರು, ತೀರದಲ್ಲಿ ಗಾಳಿಪಟ ಹಾರಿಸುತ್ತಾ ತಮ್ಮ ಸಮಯ ಕಳೆಯ ಬಯಸುವವರು, ಸಣ್ಣ ಸಣ್ಣ ಟ್ಯೂಬಿನ ಮೇಲೆ ಲೈಫ್ ಜಾಕೆಟ್ ಹಾಕಿಕೊಂಡು ತೇಲುವ ಮಕ್ಕಳು ಇವೆಲ್ಲವನ್ನ ನೋಡುತ್ತಾ ಬೀಚಿನಲ್ಲಿ ಒಂದಿಷ್ಟು ಹೊತ್ತು ಕಳೆದು ಹೊರಟಿದ್ದು ಅಲ್ಲೇ ಇರುವ  ಚಿಕ್ಕ ಅಮ್ಯೂಸ್ಮೆಂಟ್ ಪಾರ್ಕ್ ಗೆ. 

ಡಿಸ್ನಿ ವರ್ಲ್ಡ್ ಗೆ ಅಥವಾ ನಮ್ಮ ಬೆಂಗಳೂರಿನ ವಂಡರ್ ಲಾ ಗೆ ಹೋಲಿಸಿದರೆ ತುಂಬಾ ಚಿಕ್ಕದಾದರೂ ಸಮುದ್ರದ ಮೇಲೆ ಇದನ್ನ ನಿರ್ಮಿಸಿರುವುದು ಇದರ ವಿಶೇಷ. ಎತ್ತರದ ಜೈಂಟ್ ವ್ಹೀಲ್ ಅಥವಾ ಇನ್ನಿತರ ರೈಡ್ ನಲ್ಲಿ ಕೂತರೆ ಅದು ಮೇಲಿಂದ ಕೆಳಕ್ಕೆ ವೇಗವಾಗಿ ತಿರುಗಿದಾಗ ಕೆಳಗೆ ಕಾಣುವ ಅಟ್ಲಾಂಟಿಕ್ ಮಹಾಸಾಗರ, ಮತ್ತದರ ಅಲೆಗಳು ಅನುಭವಕ್ಕೆ ಹೊಸ ಮೆರಗು ಕೊಡುತ್ತದೆ. ಜೊತೆಗೆ ಅಲ್ಲಿನ ಮತ್ತೊಂದು ಆಕರ್ಷಣೆ ಅಲ್ಲಿನ ಹೆಲಿಕಾಪ್ಟರ್  ರೌಂಡ್ಸ್. ಅಟ್ಲಾಂಟಿಕ್ ಸಿಟಿಯ ಎತ್ತರ ಕಟ್ಟಡಗಳ ಮೇಲೆ ಹಾದು ಹೋಗಿ ಸಮುದ್ರದ ಮೇಲೊಂದು ಸುತ್ತು ಹಾಕಿ ನಗರ ಪ್ರದಕ್ಷಿಣೆ ಮಾಡಿ ಬರಬಹುದು. 


ಬೋರ್ಡ್ ವಾಕ್ ನಲ್ಲಿ ಒಂದು ಸಣ್ಣ ವಾಕ್.. 


ಸಮುದ್ರದ ಮರಳು, ಬೀಚಿನ ಹೋಟೆಲುಗಳ ಮೇಲೆ ಬಾರದಿರಲೆಂದು ಸಮುದ್ರ ತೀರಕ್ಕೆ ಸಮಾನಾಂತರವಾಗಿ ಕಟ್ಟಲಾಗಿರೋ ಬೋರ್ಡ್ ವಾಕ್ ಸುಮಾರು ೪ ಮೈಲು ಉದ್ದ, ೨೪ ಅಡಿ ಅಗಲವಿದೆ. ೧೮೭೦ರಲ್ಲಿ ಕಟ್ಟಲಾಗಿದ್ದ ಈ ಹಾದಿಯನ್ನ  ಕಟ್ಟಿರೋದು ಮರದ ಹಲಗೆಗಳಿಂದ. ತುಂಬಾ ಹಳೆಯದಾದರೂ ಇದು ಇಂದಿಗೂ ಪ್ರಸಿದ್ದ. ಅಮೇರಿಕಾದ ಶ್ರೀಮಂತ ಇತಿಹಾಸಕ್ಕೆ ಸಂಕೇತವಂತೆ.  ಇದರ ಒಂದು ಬದಿಗೆ ಸಮುದ್ರದ ನೋಟವಿದ್ದರೆ, ಇನ್ನೊಂದು ಬದಿಗೆ ಒಂದಾದರ ಮೇಲೊಂದು ಶಾಪಿಂಗ್ ಮಾಲುಗಳು, ರೆಸ್ಟೋರೆಂಟ್ ಗಳು, ಕ್ಯಾಸಿನೋಗಳು, ಕ್ಲಬ್ಬುಗಳು, ಹೋಟೆಲುಗಳು ಮತ್ತಿತರ ಆಕರ್ಷಣೆಗಳು. ಶಾಪಿಂಗ್ ಪ್ರಿಯರಿಗೆ ಹೇಳಿ ಮಾಡಿಸಿದ ತಾಣ. ಇಲ್ಲಿ ವಾಹನಗಳಿಗೆ ಪ್ರವೇಶವಿಲ್ಲ. ಒಂದು ಕಡೆ ನಿಸರ್ಗ ಸೌಂದರ್ಯವನ್ನ, ಮತ್ತೊಂದೆಡೆ ಮಾನವ ನಿರ್ಮಿತ ಸೌಂದರ್ಯವನ್ನ ಅನುಭವಿಸುತ್ತಾ ಸಾಗುವ ಈ ವಾಕ್ ನಿಜಕ್ಕೂ ಖುಷಿ ಕೊಡುತ್ತದೆ. ನಡೆದು ನಡೆದು ಸುಸ್ತಾಗಿ , ಸಂಜೆ ಹೊತ್ತಿನ ಹಿತವಾದ ತಂಗಾಳಿಯಲ್ಲಿ ಬೋರ್ಡ್ ವಾಕ್ ನ ಬದಿಯಲ್ಲಿರುವ ಬೆಂಚುಗಳ ಮೇಲೆ ಕೂತು  ಒಂಚೂರು ವಿಶ್ರಮಿಸಿ, ಮತ್ತೊಂದಿಷ್ಟು ಉತ್ಸಾಹದಿಂದ ಹೊರಟಿದ್ದು ಕ್ಯಾಸಿನೋಗಳ ಕಡೆಗೆ. 
ಇಲ್ಲೂ ಒಂದು ತಾಜ್ ಮಹಲ್ !ಅಟ್ಲಾಂಟಿಕ್ ಸಿಟಿಗೆ ಕತ್ತಲಾದಂತೆ ಹೊಸ ಹೊಳಪು. ಕ್ಯಾಸಿನೊಗಳು ಗಿಜಿಗುಡಲು ಆರಂಭಿಸಿರುತ್ತದೆ. ಸಿಸರ್ಸ್, ಟ್ರೋಪಿಕಾನಾ, ಬೋರ್ಗಾಟ ಹೀಗೆ ಲೆಕ್ಕವಿಡಲಾಗದಷ್ಟು ಕ್ಯಾಸಿನೋಗಳು ಇಲ್ಲಿವೆ. ಅದರಲ್ಲಿ ಒಂದು ಕ್ಯಾಸಿನೋದ ಹೆಸರು ಟ್ರಂಪ್ ತಾಜ್ ಮಹಲ್.  ಮೊಗಲರ ಶೈಲಿಯ ಗುಮ್ಮಟಗಳು ಅಮೆರಿಕಾದ ಇತರ ಕಟ್ಟಡಗಳ ನಡುವಲ್ಲಿ ಎದ್ದು ಕಾಣುತ್ತದೆ.  ಒಳ ಹೊಕ್ಕರೆ ಸಾವಿರಾರು ಗೇಮ್ ಸ್ಲಾಟ್ ಮಷೀನ್ ಗಳು, ರೌಲೆಟ್, ಪೋಕರ್ ಟೇಬಲ್ ಗಳು.  ದುಡ್ಡು ಹಾಕಿ ಬಟನ್ ಒತ್ತುತ್ತಾ ತಮ್ಮ ಅದೃಷ್ಟ ಪರೀಕ್ಷೆಯಲ್ಲಿ ಜನ ಮುಳುಗಿರುತ್ತಾರೆ. ಮುಂದೆ ಕಂಪ್ಯೂಟರ್ ಪರದೆಯಲ್ಲಿ ಒಂದಿಷ್ಟು ಚಿತ್ರಗಳು ತಿರುಗುತ್ತಿರುತ್ತವೆ, ಬಟನ್ ಒತ್ತಿದಾಗ ಆ ಚಿತ್ರಗಳು ಒಂದಿಷ್ಟು ನಿಯಮದಂತೆ ಬಂದರೆ ಒಂದಿಷ್ಟು ಲಾಭ, ಇಲ್ಲವಾದರೆ ಪ್ರತಿ ಸಲ ಡಾಲರ್ ಕಳೆದುಕೊಂಡ ಬೇಸರ. ಕೊನೆಗೂ ನನ್ನ ಗೆಳೆಯನೊಬ್ಬನಿಗೆ ಅದೃಷ್ಟ ಖುಲಾಯಿಸಿ ಆ ಪ್ರವಾಸದ ಖರ್ಚೆಲ್ಲಾ ಗೆದ್ದುಕೊಂಡ. ನನ್ನ ಪಾಲಿಗೆ ಮಾತ್ರ ವಿಜಯಲಕ್ಷ್ಮಿ ಒಲಿಯಲಿಲ್ಲ. ಜೂಜಾಡುವ ಚಟವಿಲ್ಲದಿದ್ದರೂ ಎಲ್ಲಾ ಆಟದ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಅಂತೂ ಇತ್ತು. ಅದಕ್ಕಾಗೇ ನಮ್ಮ ಸವಾರಿ ಹೊರಟಿದ್ದು ರೌಲೆಟ್ ಗೇಮ್ ನ ಕಡೆಗೆ. ಯಾವುದೋ ನಂಬರ್ ಗೆ, ಸಮ ಬೆಸ, ಬಿಳಿ, ಕಪ್ಪು ಹೀಗೆ  ತಮ್ಮ ದುಡ್ಡು ಹಾಕಿರುತ್ತಾರೆ, ಗೆಲುವಿನ ಸಾಧ್ಯತೆ ಕಡಿಮೆ ಇದ್ದು ಗೆದ್ದಷ್ಟೂ ಹೆಚ್ಚು ಲಾಭ. ಹಾಗೆಯೇ ಪಕ್ಕ ಕಣ್ಣು ಹಾಯಿಸಿದರೆ ಪೋಕರ್ ಟೇಬಲ್ ಗಳು. ಜೂಜಾಡಿ ಸುಸ್ತಾದವರಿಗೆ ಅಲ್ಲೇ ಪಾನ ಸೇವೆ ಕೂಡಾ. ಗೆದ್ದವರು ಗೆದ್ದ ಖುಷಿಯಲ್ಲಿ ಇನ್ನೊಂದು ಆಟ ಆಡಿದರೆ, ಸೋತವರು ಮುಂದಿನ ಆಟ ಗೆಲ್ಲಬಹುದೆಂದು ಮತ್ತೆ ದುಡ್ಡು ಹಾಕಿರುತ್ತಾರೆ. ಒಟ್ಟಿನಲ್ಲಿ ಮುಗಿಯದ ಆಟ. ನೆನಪಾಗಿದ್ದು ಬೆಳಿಗ್ಗೆ ಕಾರಿನಲ್ಲಿ ಕೇಳಿದ ಹಾಡು 'ನಿನ್ನಾಸೆಗೆಲ್ಲಿ ಕೊನೆಯಿದೆ... ಏಕೆ ಕನಸು ಕಾಣುವೆ...  ನಿಧಾನಿಸು...  ನಿಧಾನಿಸು.. "


ದಿನಾಲೂ ಸಾವಿರಾರು ಕೋಟಿ ವ್ಯವಹಾರ ನಡೆಯುವ ಈ ಕ್ಯಾಸಿನೋದಲ್ಲಿ ನಾವು ಹೋದಾಗ ಒಂದು ಮಿಲಿಯನ್ ಡಾಲರ್ ಕ್ಯಾಶ್ ನ ಭದ್ರ ಗಾಜಿನಲ್ಲಿ  ಪ್ರದರ್ಶನಕ್ಕೆ ಇಡಲಾಗಿತ್ತು. ಕಾಸು ಗೆಲ್ಲದಿದ್ದರೂ  ಒಮ್ಮೆಲೇ ಅಷ್ಟು ದುಡ್ಡನ್ನ ನೋಡೋ ಅದೃಷ್ಟ ಅಂತೂ ಇತ್ತು. ಎಲ್ಲಾ ಮುಗಿಸಿ ಹೊರಬರುವಷ್ಟರಲ್ಲಿ ಮುಂಜಾನೆ ನಾಲ್ಕೂವರೆ. ಇನ್ನೇನು ಹೊರಬರಬೇಕು ಅನ್ನುವಷ್ಟರಲ್ಲಿ ಕಂಡಿದ್ದು ಗೇಮ್ ಸ್ಲಾಟ್ ಮಷೀನ್ ನ ಮುಂದೆ ಕೂತು ಒಂದಿಷ್ಟು ದುಡ್ಡು ಬಾಚಿಕೊಳ್ಳುತ್ತಿದ್ದ  ೭೦ ರ ವಯಸ್ಸಿನ ಒಬ್ಬ ಅಜ್ಜಿ. ಅವಳ ಅನಿವಾರ್ಯತೆಯೋ, ಜೀವನೋತ್ಸಾಹವೋ ಗೊತ್ತಿಲ್ಲ, ಆ ವಯಸ್ಸಲ್ಲಿ, ಆ ರಾತ್ರಿಯಲ್ಲಿ ಅಲ್ಲಿ ಜೂಜಾಡುತ್ತಿದ್ದ ಅವಳ ಬಗ್ಗೆ ಸಣ್ಣದೊಂದು ಅಚ್ಚರಿ ಮೂಡಿತ್ತು. ಹೊರಬಂದಾಗ ಸೂರ್ಯಮೂಡುತ್ತಿದ್ದ. ಅಟ್ಲಾಂಟಿಕ್ ಮಹಾಸಾಗರದ ಮೇಲೆ ಸೂರ್ಯರಶ್ಮಿ. ರಾತ್ರಿ ಎಲ್ಲಾ ಜಾಗರಣೆಯಿಂದ ಮುಚ್ಚುತ್ತಿದ್ದ ಕಣ್ಣುಗಳಿಗೆ ವಿಶ್ರಾಂತಿ ಕೊಡಲು ಹೋಟೆಲ್ ನ ಕಡೆ ಹೊರಟೆವು. ಸಣ್ಣದೊಂದು ನಗರ ಕೊಟ್ಟ ಹೊಸ ಅನುಭವಗಳಿಗೆ ಧನ್ಯವಾದ ಹೇಳುತ್ತಾ. 
ಮತ್ತಿತರ ಆಕರ್ಷಣೆಗಳು
ಇನ್ನೂ ಹತ್ತು ಹಲವು ಆಕರ್ಷಣೆಗಳು ಇಲ್ಲಿವೆ. ಇಲ್ಲಿನ ಬೋರ್ಡ್ ವಾಕ್ ಹಾಲ್ ಅನ್ನೋ ಕಟ್ಟಡದ ಮೇಲೆ ಬೆಳಕಿನಾಟ ನಡೆಯುತ್ತದೆ. ಬೆಳಕಿನಲ್ಲಿ ಕಟ್ಟಡದ ಮೇಲೆ ವಿವಿಧ ಬಗೆಯ 3D ಕಲ್ಪನೆಗಳು ಮೂಡುತ್ತವೆ. ಕಟ್ಟಡ ಬಿದ್ದಂತೆ, ಡಿಸೈನ್ ಬದಲಾದಂತೆ, ರೈಲು ಕಟ್ಟಡದ ಮೂಲಕ ಹೋದಂತೆ ಇತ್ಯಾದಿ. ಯೂಟ್ಯೂಬ್ ನಲ್ಲಿ ಇದರ ವೀಡಿಯೊ ನೋಡಬಹುದು. ಲಿಂಕ್ ಇಲ್ಲಿದೆ. https://www.youtube.com/watch?v=DqhcdyUOYj0 . 

ಇದಲ್ಲದೇ ನ್ಯೂಜೆರ್ಸಿಯ ಅತಿ ಎತ್ತರದ, ಅಮೆರಿಕಾದ ಮೂರನೆ ಅತಿ ಎತ್ತರದ ಲೈಟ್ ಹೌಸ್ ಇಲ್ಲಿದೆ. ರಿಪ್ಲಿ'ಸ್ ಬಿಲೀವ್ ಇಟ್ ಆರ್ ನಾಟ್ ಮತ್ತೊಂದು ಆಕರ್ಷಣೆ, ಇಲ್ಲಿನ ಅಕ಼್ವೆರಿಯಮ್ ಮಕ್ಕಳಿಗೆ ಖುಷಿ ಕೊಡತ್ತೆ. ಬೋಟ್ ರೈಡ್ ಗಳು, ಕ್ರೂಸ್ ಗಳು ಇವೆ.


ಒಟ್ಟಿನಲ್ಲಿ ವೀಕೆಂಡ್ ನ ಖುಷಿಯಾಗಿ ಕಳೆಯೋಕೆ ಅಟ್ಲಾಂಟಿಕ್ ಸಿಟಿ ಹೇಳಿ ಮಾಡಿಸಿದಂತಿದೆ. 
- ಅಕ್ಷಯ ಪಂಡಿತ್, ಸಾಗರ 
೮/೪/೨೦೧೪