ಡಿಸೆಂಬರ್ 3, 2012

Candle light dinner

ಜಗಮಗಿಸುವ ಬೆಳಕಿನ
Hotel ನಲ್ಲಿ
ಕೃತಕ ಕತ್ತಲ ನಿರ್ಮಾಣ

Current ಇಲ್ಲದ ಕಾಲದಲ್ಲಿ
ಅಜ್ಜ-ಅಜ್ಜಿ ವರ್ಷಗಟ್ಟಲೆ ಮಾಡಿದ
ರಾತ್ರಿಯೂಟಕ್ಕೆ -
ಹೊಸ ವ್ಯಾಖ್ಯಾನ

Table ಮೇಲಿಟ್ಟ ಮೇಣದ ಬತ್ತಿಯ
ಬಡ ಬೆಳಕಲ್ಲಾದರೂ ಅವಳು
ಚಂದ ಕಾಣಬಹುದೇನೋ ಎಂದು ನೆನೆದು
ಒಂದು ಕ್ಷಣ ರೋಮಾಂಚನ

-
ಅಕ್ಷಯ ಪಂಡಿತ್, ಸಾಗರನವೆಂಬರ್ 15, 2012

ಗುಜರಿ ಪೇಟೆ

ನೆನಪಿನ ಓಣಿಯ ಕದ ತೆಗೆದು
ಒಳಹೊಕ್ಕರೆ, ಇಕ್ಕಟ್ಟಿನ
ಗುಜರಿಪೇಟೆ
ಬಣ್ಣ ಮಾಸಿ ಸವಕಲಾಗಿ
ತೂಕಕ್ಕೆ ಹರಾಜಿಗಿಟ್ಟಿರೋ
ಹಚ್ಚ ಹಳೆ ನೆನಪುಗಳ ಸಂತೆ

ಕೆಲಸಕ್ಕೆ ಬಾರದ  ಟ್ರಿಗನಾಮೆಟ್ರಿ,
ಐನ್ಸ್ಟೈನ್ನ ಸಿದ್ಧಾಂತ
ಬೆಪ್ಪುತಕ್ಕಡಿ ಎಂಬ ಬೈಗುಳದ ಜೊತೆ
ಬೆತ್ತದೇಟು ಖಚಿತ
ಬಾಲ್ಯದ ನೆನಪಿಗೆ ಅದರದ್ದೇ ತೂಕ
ಹರಾಜಿನಲ್ಲೂ ಮತ್ತೆ ಕೊಂಡುಕೊಳ್ಳಲಾಗದ ಬೆಲೆ

ಕೆಂಪು ಸ್ಕೂಟೀಯ
ಪಕ್ಕದ್ಮನೆ ಹುಡುಗಿ ನಕ್ಕಾಗ
ಅವಳ ಕೆನ್ನೆ ಅಷ್ಟೇ ಕೆಂಪು
ಪ್ರೀತಿ ಯಾಚನೆಗೆ
ತಡೆಯಾದ ಮುಜುಗರ
ತನ್ನಿನ್ತಾನೆ ತೂಕ ಕಳೆದುಕೊಂಡ ವಿರಹ

ದೊಗಲು ಜುಬ್ಬಾ, ಕನ್ನಡಕ  ಏರಿಸಿ
ಅಪ್ಪ ಮಾತಾಡಿದರೆ
ಧಿಕ್ಕರಿಸಲಾರದಷ್ಟು ಗಾಂಭೀರ್ಯ
ಅಮ್ಮನ ಜೊತೆಗಿನ ಜಗಳಕ್ಕೆ
ಎದುರು ಮಾತಿಗೆ ಬೀಳುವ ಅಣ್ಣನ  ಪೆಟ್ಟಿಗೆ
ತೂಕ ಕೇಳಲು ಸಿಕ್ಕಾಪಟ್ಟೆ ಹಿಂಜರಿಕೆ

ಓಡಿ ಹೋದ ಆಸೆಕಂಗಳ ಅಕ್ಕ
ಒಡಗೂಡಿ ಆಡಿದ ಚನ್ನೇಮಣೆ ಹತ್ತಿದ ಗೇರುಮರ
ಕಳೆದುಹೋದದ್ದೆಲ್ಲಾ ಇಲ್ಲಿ ಮಾರಾಟಕ್ಕೆ ಲಭ್ಯ
ಗುಜರಿಪೇಟೆಯಲ್ಲೂ
ಒಂದರ ಜೊತೆ ಇನ್ನೊಂದು ಉಚಿತ
ಒಂದಕ್ಕೊಂದು ಬೆಸೆದಂತೆ ನೆನಪುಗಳ ಕೊಂಡಿ

ಇಲ್ಲೇ ಕಳೆದು ಹೋಗುತ್ತೇನೆ
ಹೊರಪ್ರಪಂಚದ ದಾರಿ ಬೇಕಿಲ್ಲ
ಹೊರಬಂದರೆ ಬದುಕುವ ಭಯ
ಕೃತಕ ನಗೆಯ ನಾಗಾಲೋಟದಲ್ಲಿ
ಹಿಂದೆ ಬೀಳುವ ಭಯ
ಗುಂಪಿನಲ್ಲಿ ಕಳೆದುಹೋಗುವ ಭಯ

ನೆನಪುಗಳ ಸರಕಿನ
ಹಿಂಬದಿಯ
ಮೂಲೆಯಲ್ಲಿ ಸಾಕು
ನನಗೊಂದು ಸಣ್ಣ ಜಾಗ
ನಾನೂ ಒಂದು ಹಳೆಯ
ಬಣ್ಣ ಮಾಸಿದ  ಸವಕಲಾದ
ಸರಕು ಅಷ್ಟೇ!!

-
ಅಕ್ಷಯ ಪಂಡಿತ್, ಸಾಗರಅಕ್ಟೋಬರ್ 5, 2012

ಖುಷಿಯ ವಿಚಾರಹರವಿಕೊಂಡು ಕೂತಿದ್ದೆ ನೂರಾರು ಕನಸು
ನಿನ್ನ ನೋಡುವ ಮೊದಲು..
ಆಮೇಲೆಲ್ಲಾ ನಿನ್ನದೊಂದೇ ಕನಸು
ಉಳಿದವೆಲ್ಲಾಬರಿ ಕಾಗದದಲ್ಲೇ
ಉಳಿದು ಹೋದ ಸಾಲು...

ಶಹರದ ಕೋಟೆಯ ಮೇಲೆ ಹತ್ತಿ
ರಾಜನಂತೆ ಮೆರೆಸಿ ರಾಣಿಯಂತೆ ಮೆರೆದಾಕೆ..
ಕೋಟೆಯ ತುದಿಯಲ್ಲಿ ನಿಂತು
ನಗಾರಿ ಬಾರಿಸುವುದೊಂದೇ  ಬಾಕಿ
ಹೊಸ ಮನ್ವಂತರದ ಆರಂಭಕೆ...

ಇದ್ದಕ್ಕಿದ್ದಂತೆ ಕೊನೆಯಾಯಿತು
ಜೊತೆ ನಡೆದ ಹಾದಿ...
ಅವನೇ ಎಳೆದೊಯ್ದನೋನೀನೇ
ತಲೆಯಾಡಿಸಿ ಹಿಂದೆ ಹೊದೆಯೋ
ಎಲ್ಲಾ ಅಸ್ಪಷ್ಟ ಚಿತ್ರ.. 

ಕಡಲ ಕಿನಾರೆಯಲಿ ಹುಚ್ಚು ಮಳೆ
ನನ್ನೆದೆಯಲ್ಲಿ ಭೋರ್ಗರೆತ...
ನಿನ್ನಪ್ಪಅಲೆಗಳಷ್ಟೇ ನಿರ್ದಯಿ
ಕಾರಣ ಬೇಕಿಲ್ಲನನ್ನಿಂದ ನೀ
ದೂರಾದದ್ದೊಂದೇ ವಿಧಿತ...

ಕೋಟೆಯ ಶಿಥಿಲ ಗೋಡೆಗಳಿನ್ನೂ
ಕಥೆ ಹೇಳುತ್ತಿವೆ.. ಕೇಳುವವರ್ಯಾರಿಲ್ಲ..
ಇನ್ನೇನಿದ್ದರೂ
ನಿನ್ನದು ನೆನಪು ಮಾತ್ರ
ಮತ್ತೆ ಸಿಗುವೆಯೆಂಬ ಕನಸಿಲ್ಲ..


ಆದರೆ ಖುಷಿಯ ವಿಚಾರ ಕೇಳು... 
ಮತ್ತೆ ಮರುಜನ್ಮ ತಳೆದಿದೆ ನೂರಾರು ಕನಸು.... 
ಎಲ್ಲಕ್ಕೂ ಸ್ಪೂರ್ತಿ ನೀನೆ... ನಿನ್ನ ಮೇಲಿನ
ಹಠ... ಮುನಿಸು... 


-
ಅಕ್ಷಯ ಪಂಡಿತ್ಸಾಗರ


ಸೆಪ್ಟೆಂಬರ್ 14, 2012

Software Engineer ನ ಖಾಸ್‌ಬಾತ್
ವಾರದ ೫  ದಿನ ನಿರಂತರ ಜೀತ !
ಸೋಮವಾರ ಬೆಳಗಾದರೆ ಸಾಕು,
ಶುಕ್ರವಾರ ಸಂಜೆ ಯಾವಾಗಾಗುವುದೋ
ಅನ್ನೋ ಚಿಂತೆ.. 
ದಿನಕ್ಕೆ ಹತ್ತು ಗಂಟೆ office ನಲ್ಲಿ..
ಆಮೇಲೆ office ಏ ಬರುತ್ತೆ ಮನೆಗೆ
laptop ರೂಪದಲ್ಲಿ.. 
ಕಿನ್ನರಿ ವೇಷ ಧರಿಸಿ ಬರುವ ಮಾಯಾವಿ
ರಕ್ಕಸನಂತೆ!

ಅಮ್ಮ ಹೇಳ್ತಾ ಇರ್ತಾಳೆ
ಈಗಿನ ಕಾಲದ ಹುಡುಗರಿಗೆ ಜನ ಬಳಕೆ ಕಡಿಮೆ... 
ನನ್ನದೇನಿದೆ ತಪ್ಪು..  
ಬಳಕೆಯಲ್ಲಿರುವುದೇ ಅಷ್ಟು ಜನ... 
ಸೈಟು, ಅಪಾರ್ಟ್‌ಮೆಂಟು, ಕಾರು
ಬೇರೆ ಏನೂ ಬೇಕಿಲ್ಲ... 
ಅವರಿಗೆ ಅವರದ್ದೇ ಒಂದು ಲೋಕ
client ಕೆಲಸವೇ ಕೈಲಾಸ...

ಅಮೇರಿಕ ದಲ್ಲಿರುವ ಕ್ಲೈಂಟ್ ಗೆ ಬೆಳಕು ಹರಿದರೆ
ನಮಗದು ಸುಪ್ರಭಾತ.. 
ಮುಖವನ್ನೇ ನೋಡದೇ ಇಷ್ಟು ದಿನ 
ಅವನೊಡನೆ ಮಾತುಕತೆ...
ಕಡೆಯ ತನಕ ಮುಖ ತೋರಿಸದೇ 
ಮರೆಯಲ್ಲಿ ನಿಂತು ಮಾತನಾಡುವ ಹಳೆ ಕಾಲದ
ಪಿಕ್ಚರ್ನ ಕೇಡಿಯೊಬ್ಬ ನೆನಪಾಗುತ್ತಾನೆ!
ಪಿಕ್ಚರ್ ನ  climax ನಲ್ಲಿ ಆಗುವಂತೆ 
ಯಾರಾದರೂ ಬಂದು ಅವನನ್ನ 
ಚಚ್ಚಿ ಹಾಕಬಾರದೇ  ಎಂದುಕೊಳ್ಳುತ್ತೇನೆ!

ಎಲ್ಲಾ ಮುಗಿಸಿ ಮಲಗೋಣವೆನ್ನುವಷ್ಟರಲ್ಲಿ
ಬಾಸ್ ನ ಫೋನ್ "ಸ್ಟೇಟಸ್ ಏನಾಯ್ತು?"
ಬೆಳಿಗ್ಗೆ ಯಾರದೋ facebook status ನೋಡಿದ ನೆನಪು
"ಕನ್ನಡಿಗ ನೀನು ಗರ್ವದಿಂದ ಘರ್ಜಿಸು!"
ದಿನಾ ರಾತ್ರಿ ಕೇಳುವುದು ಮಾತ್ರ ತಮಿಳು ಬಾಸಿನ ಘರ್ಜನೆ !

ಹಾಗೋ ಹೀಗೋ ಶುಕ್ರವಾರ ಅಂತ್ಯವಾದರೆ
weekend ಮಾಡಬೇಕಿರುವ ಕೆಲಸಗಳದೊಂದು 
ಬೃಹತ್ ಪಟ್ಟಿ...

ಮತ್ತೆ ಸೋಮವಾರ ಬೆಳಿಗ್ಗೆ...
ಹೊಸ ತೆಲುಗು ಪಿಕ್ಚರ್ ನೋಡಿ ಬಂದವನ
ಮುಖದಲ್ಲಿ ಏನೋ ಸಾಧಿಸಿದ ಖುಷಿ.. 
ಕೇಳುತ್ತಾನೆ. "how was your weekend man"

ಏನು ಮಾಡಿದೆನೋ, ಬಿಟ್ಟೆನೋ ಗೊತ್ತಿಲ್ಲ... 
ಒಟ್ಟಿನಲ್ಲಿ,  ಹೊಸ ವಾರದ ಜೀತಕ್ಕೆ 
fresh ಆಗಿ ready!!


-
ಅಕ್ಷಯ ಪಂಡಿತ್ಸಾಗರ


ನದಿ ಮತ್ತು ಬದುಕುನದಿ ಚೆಲುವೆ!
ಮೈ ಮರೆಯುತ್ತಾ
ತನ್ನಿಷ್ಟದಂತೆ ಕುಣಿಯುತ್ತಾ
ಒಮ್ಮೆ ಹುಚ್ಚು ಪ್ರವಾಹ ಎಬ್ಬಿಸುತ್ತಾ
ಮಗದೊಮ್ಮೆ ತಣ್ಣಗಾಗುತ್ತಾ
ನೋಡಿದಷ್ಟೂ ನೋಡಬೇಕೆನ್ನಿಸುವ ಸೊಗಸು
ಸಾಗರನ ಸೇರುವ ಕಾತುರತೆ
ಸೇರಿದೊಡನೆ ಒಂದು ಬಿಸಿ ಅಪ್ಪುಗೆ !!


ನದಿ ವಿರಹಿ!
ತನ್ನ ಸಖ ಮಳೆ ಸುರಿಸದೇ ದಿನವೆಷ್ಟಾಯ್ತೋ!
ಅವನಿಗಾಗಿ ಕಾದು ಕಾದು ಸೊರಗಿ ಹೋಗಿದ್ದರೂ
ಬಂದೆ ಬರುತ್ತಾನೆನ್ನೋ ಭರವಸೆ
ಕಡೆಗೂ ಅವನೊಂದು ದಿನ
ಪ್ರೀತಿ ಮಳೆ ಸುರಿಸಿದಾಗ
ನದಿ ಉತ್ಸಾಹದ ಚಿಲುಮೆ
ಪಾರವಿಲ್ಲ ಅವಳ ಪ್ರೀತಿ ರಭಸಕ್ಕೆ !!


ನದಿ ಹೆಣ್ಣು !
ಪ್ರತಿದಿನವೂ ಹೊಸದಾರಿ
ಹಾದಿಯುದ್ದಕ್ಕೂ ಸಂಘರ್ಷ
ಆದರೂ ಮಮತೆ ಮರೆತಿಲ್ಲ
ಉಪಕಾರ ಪಡೆದವರ ಲೆಕ್ಕವಿಲ್ಲ
ಸಾಗರ ಸೇರುವಾಗಲೂ ನೋವು ನಿಂತಿಲ್ಲ
ಅಲೆಗಳೊಂದಿಗೆ ತಾಕಾಟ, ಅಲ್ಲೂ ಹೋರಾಟ
ಸಂಘರ್ಷದಿಂದ ಬಿಡುಗಡೆಯಿಲ್ಲ !!


ನದಿ ಯೋಗಿ !
ಹುಟ್ಟಿದ ಊರಿನ ಹಂಗಿಲ್ಲ 
ನಿಂತ ನೆಲೆಯ ಋಣ ಇಲ್ಲ
ನಡೆದದ್ದೇ ದಾರಿ
ಗಮ್ಯದ ಹುಡುಕಾಟ
ಪಯಣ ಮಾತ್ರ ನಿರಂತರ 
ಸಾಗರ ಸೇರಿ ಪ್ರಶಾಂತವಾದ ನಂತರ
ಅದೊಂದು ಸಾರ್ಥಕ ಕ್ಷಣ! ಮುಕ್ತಿ ಭಾವ !


ನದಿ ನಿತ್ಯ ನೂತನ!
ವೈವಿಧ್ಯಗಳ ಅನಾವರಣ
ನಮ್ಮದೇ ಪ್ರತಿಬಿಂಬ
ಬದುಕಿನ ನಿಲುವುಗನ್ನಡಿ
ಪ್ರತಿ ಜೀವವೂ
ಒಂದೊಂದು ರೀತಿ
ಬಾಳುವ ಬಗೆಗೆ
ನದಿ ಸ್ಪೂರ್ತಿ !!-
ಅಕ್ಷಯ ಪಂಡಿತ್, ಸಾಗರ