ನವೆಂಬರ್ 15, 2012

ಗುಜರಿ ಪೇಟೆ

ನೆನಪಿನ ಓಣಿಯ ಕದ ತೆಗೆದು
ಒಳಹೊಕ್ಕರೆ, ಇಕ್ಕಟ್ಟಿನ
ಗುಜರಿಪೇಟೆ
ಬಣ್ಣ ಮಾಸಿ ಸವಕಲಾಗಿ
ತೂಕಕ್ಕೆ ಹರಾಜಿಗಿಟ್ಟಿರೋ
ಹಚ್ಚ ಹಳೆ ನೆನಪುಗಳ ಸಂತೆ

ಕೆಲಸಕ್ಕೆ ಬಾರದ  ಟ್ರಿಗನಾಮೆಟ್ರಿ,
ಐನ್ಸ್ಟೈನ್ನ ಸಿದ್ಧಾಂತ
ಬೆಪ್ಪುತಕ್ಕಡಿ ಎಂಬ ಬೈಗುಳದ ಜೊತೆ
ಬೆತ್ತದೇಟು ಖಚಿತ
ಬಾಲ್ಯದ ನೆನಪಿಗೆ ಅದರದ್ದೇ ತೂಕ
ಹರಾಜಿನಲ್ಲೂ ಮತ್ತೆ ಕೊಂಡುಕೊಳ್ಳಲಾಗದ ಬೆಲೆ

ಕೆಂಪು ಸ್ಕೂಟೀಯ
ಪಕ್ಕದ್ಮನೆ ಹುಡುಗಿ ನಕ್ಕಾಗ
ಅವಳ ಕೆನ್ನೆ ಅಷ್ಟೇ ಕೆಂಪು
ಪ್ರೀತಿ ಯಾಚನೆಗೆ
ತಡೆಯಾದ ಮುಜುಗರ
ತನ್ನಿನ್ತಾನೆ ತೂಕ ಕಳೆದುಕೊಂಡ ವಿರಹ

ದೊಗಲು ಜುಬ್ಬಾ, ಕನ್ನಡಕ  ಏರಿಸಿ
ಅಪ್ಪ ಮಾತಾಡಿದರೆ
ಧಿಕ್ಕರಿಸಲಾರದಷ್ಟು ಗಾಂಭೀರ್ಯ
ಅಮ್ಮನ ಜೊತೆಗಿನ ಜಗಳಕ್ಕೆ
ಎದುರು ಮಾತಿಗೆ ಬೀಳುವ ಅಣ್ಣನ  ಪೆಟ್ಟಿಗೆ
ತೂಕ ಕೇಳಲು ಸಿಕ್ಕಾಪಟ್ಟೆ ಹಿಂಜರಿಕೆ

ಓಡಿ ಹೋದ ಆಸೆಕಂಗಳ ಅಕ್ಕ
ಒಡಗೂಡಿ ಆಡಿದ ಚನ್ನೇಮಣೆ ಹತ್ತಿದ ಗೇರುಮರ
ಕಳೆದುಹೋದದ್ದೆಲ್ಲಾ ಇಲ್ಲಿ ಮಾರಾಟಕ್ಕೆ ಲಭ್ಯ
ಗುಜರಿಪೇಟೆಯಲ್ಲೂ
ಒಂದರ ಜೊತೆ ಇನ್ನೊಂದು ಉಚಿತ
ಒಂದಕ್ಕೊಂದು ಬೆಸೆದಂತೆ ನೆನಪುಗಳ ಕೊಂಡಿ

ಇಲ್ಲೇ ಕಳೆದು ಹೋಗುತ್ತೇನೆ
ಹೊರಪ್ರಪಂಚದ ದಾರಿ ಬೇಕಿಲ್ಲ
ಹೊರಬಂದರೆ ಬದುಕುವ ಭಯ
ಕೃತಕ ನಗೆಯ ನಾಗಾಲೋಟದಲ್ಲಿ
ಹಿಂದೆ ಬೀಳುವ ಭಯ
ಗುಂಪಿನಲ್ಲಿ ಕಳೆದುಹೋಗುವ ಭಯ

ನೆನಪುಗಳ ಸರಕಿನ
ಹಿಂಬದಿಯ
ಮೂಲೆಯಲ್ಲಿ ಸಾಕು
ನನಗೊಂದು ಸಣ್ಣ ಜಾಗ
ನಾನೂ ಒಂದು ಹಳೆಯ
ಬಣ್ಣ ಮಾಸಿದ  ಸವಕಲಾದ
ಸರಕು ಅಷ್ಟೇ!!

-
ಅಕ್ಷಯ ಪಂಡಿತ್, ಸಾಗರ11 ಕಾಮೆಂಟ್‌ಗಳು:

 1. ಗುಜರಿಪೇಟೆಗಳ ಸರಕುಗಳ ನೆನಪುಗಳು ತುಂಬಾ ಚೆನ್ನಾಗಿದೆ, ಕೊನೆಗೆ ನಾನೂ ಒಂದು ಸವಕಲು ಸರಕು ಎನ್ನುವ ಮಾತಿನಲ್ಲಿ ನಿರೂಪಕನ ಜೀವನದ ವಿಷಾದ ಸಂಗತಿಗಳು ಚೆನ್ನಾಗಿ ವ್ಯಕ್ತವಾಗಿವೆ. ಆರಂಭದಲ್ಲಿ ಬಾಲ್ಯದ ನೆನಪುಗಳು ಉಲ್ಲಾಸದಾಯಕವಾಗಿ ಕಂಡರೂ ನಂತರ ಒಮ್ಮೆಲೇ ಸಂಗತಿಗಳು ಗಂಭೀರವಾಗುವುದು ಅನಿರೀಕ್ಷಿತ. ಕವನ ಓದುತ್ತಾ ಹೋದಂತೆ ಬಿಡಿ ಬಿಡಿ ಸಾಲುಗಳಲ್ಲಿ ಬಾವನೆಗಳು, ಒಂದಕ್ಕೊಂದು ಸೇರ್ಪಡೆಯಾಗಿ ಕೊನೆಗೆ ದುಃಖ ವಾತಾವರಣವಾಗುತ್ತದೆ. ಒಟ್ಟಿನಲ್ಲಿ ತುಂಬಾ ಒಳ್ಳೆಯ ಕವನ ಅಕ್ಷಯ್..keep it up :)

  ಪ್ರತ್ಯುತ್ತರಅಳಿಸಿ
 2. ಎಲ್ಲಾ ಕವನನೂ ಓದಿ ಪ್ರೋತ್ಸಾಹ ಕೊಡ್ತಾ ಇದೀಯ... ಧನ್ಯವಾದ ಉಮೇಶ್....

  ಪ್ರತ್ಯುತ್ತರಅಳಿಸಿ
 3. ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

  ಪ್ರತ್ಯುತ್ತರಅಳಿಸಿ
 4. kavite tumba chennagide :-) innondishtu sanagathigaLu savakalaada sarakugaLa jote irabaraditte antanisitu..

  ಪ್ರತ್ಯುತ್ತರಅಳಿಸಿ
 5. Thanks sunil... hmm neen helidmele nangu hange anstide... ello shuru agi eno taleli itkondu baredmele inneno madbahudittala anta ansatte.. idara version 2.0 li changes madtini :)

  ಪ್ರತ್ಯುತ್ತರಅಳಿಸಿ