ನವೆಂಬರ್ 15, 2012

ಗುಜರಿ ಪೇಟೆ

ನೆನಪಿನ ಓಣಿಯ ಕದ ತೆಗೆದು
ಒಳಹೊಕ್ಕರೆ, ಇಕ್ಕಟ್ಟಿನ
ಗುಜರಿಪೇಟೆ
ಬಣ್ಣ ಮಾಸಿ ಸವಕಲಾಗಿ
ತೂಕಕ್ಕೆ ಹರಾಜಿಗಿಟ್ಟಿರೋ
ಹಚ್ಚ ಹಳೆ ನೆನಪುಗಳ ಸಂತೆ

ಕೆಲಸಕ್ಕೆ ಬಾರದ  ಟ್ರಿಗನಾಮೆಟ್ರಿ,
ಐನ್ಸ್ಟೈನ್ನ ಸಿದ್ಧಾಂತ
ಬೆಪ್ಪುತಕ್ಕಡಿ ಎಂಬ ಬೈಗುಳದ ಜೊತೆ
ಬೆತ್ತದೇಟು ಖಚಿತ
ಬಾಲ್ಯದ ನೆನಪಿಗೆ ಅದರದ್ದೇ ತೂಕ
ಹರಾಜಿನಲ್ಲೂ ಮತ್ತೆ ಕೊಂಡುಕೊಳ್ಳಲಾಗದ ಬೆಲೆ

ಕೆಂಪು ಸ್ಕೂಟೀಯ
ಪಕ್ಕದ್ಮನೆ ಹುಡುಗಿ ನಕ್ಕಾಗ
ಅವಳ ಕೆನ್ನೆ ಅಷ್ಟೇ ಕೆಂಪು
ಪ್ರೀತಿ ಯಾಚನೆಗೆ
ತಡೆಯಾದ ಮುಜುಗರ
ತನ್ನಿನ್ತಾನೆ ತೂಕ ಕಳೆದುಕೊಂಡ ವಿರಹ

ದೊಗಲು ಜುಬ್ಬಾ, ಕನ್ನಡಕ  ಏರಿಸಿ
ಅಪ್ಪ ಮಾತಾಡಿದರೆ
ಧಿಕ್ಕರಿಸಲಾರದಷ್ಟು ಗಾಂಭೀರ್ಯ
ಅಮ್ಮನ ಜೊತೆಗಿನ ಜಗಳಕ್ಕೆ
ಎದುರು ಮಾತಿಗೆ ಬೀಳುವ ಅಣ್ಣನ  ಪೆಟ್ಟಿಗೆ
ತೂಕ ಕೇಳಲು ಸಿಕ್ಕಾಪಟ್ಟೆ ಹಿಂಜರಿಕೆ

ಓಡಿ ಹೋದ ಆಸೆಕಂಗಳ ಅಕ್ಕ
ಒಡಗೂಡಿ ಆಡಿದ ಚನ್ನೇಮಣೆ ಹತ್ತಿದ ಗೇರುಮರ
ಕಳೆದುಹೋದದ್ದೆಲ್ಲಾ ಇಲ್ಲಿ ಮಾರಾಟಕ್ಕೆ ಲಭ್ಯ
ಗುಜರಿಪೇಟೆಯಲ್ಲೂ
ಒಂದರ ಜೊತೆ ಇನ್ನೊಂದು ಉಚಿತ
ಒಂದಕ್ಕೊಂದು ಬೆಸೆದಂತೆ ನೆನಪುಗಳ ಕೊಂಡಿ

ಇಲ್ಲೇ ಕಳೆದು ಹೋಗುತ್ತೇನೆ
ಹೊರಪ್ರಪಂಚದ ದಾರಿ ಬೇಕಿಲ್ಲ
ಹೊರಬಂದರೆ ಬದುಕುವ ಭಯ
ಕೃತಕ ನಗೆಯ ನಾಗಾಲೋಟದಲ್ಲಿ
ಹಿಂದೆ ಬೀಳುವ ಭಯ
ಗುಂಪಿನಲ್ಲಿ ಕಳೆದುಹೋಗುವ ಭಯ

ನೆನಪುಗಳ ಸರಕಿನ
ಹಿಂಬದಿಯ
ಮೂಲೆಯಲ್ಲಿ ಸಾಕು
ನನಗೊಂದು ಸಣ್ಣ ಜಾಗ
ನಾನೂ ಒಂದು ಹಳೆಯ
ಬಣ್ಣ ಮಾಸಿದ  ಸವಕಲಾದ
ಸರಕು ಅಷ್ಟೇ!!

-
ಅಕ್ಷಯ ಪಂಡಿತ್, ಸಾಗರ