ಏಪ್ರಿಲ್ 7, 2014

ಎಲ್ಲೂ ಸಲ್ಲದವರು[ವಿಜಯ next ಯುಗಾದಿ ಕಥಾಸ್ಪರ್ಧೆ ೨೦೧೪ ರಲ್ಲಿ ಮೊದಲ ಬಹುಮಾನ ಪಡೆದ ಕಥೆ. ವಿಜಯ next ಯುಗಾದಿ ವಿಶೇಷಾಂಕದಲ್ಲಿ ಪ್ರಕಟವಾಗಿದೆ ]


ಬೆಂಗಳೂರಿನ ಸಾಫ್ಟ್ ವೇರ್ ಕಂಪನಿಯೊಂದರ ಕ್ಯುಬಿಕಲ್ ಗೂ ಕಮ್ಮರಡಿ ಊರಿನ ನೆನಪುಗಳಿಗೂ ಗೂಗಲ್ ಮ್ಯಾಪ್ ಸೇತುವೆಯಾಗಿತ್ತು. ಗೂಗಲ್ ಮ್ಯಾಪಿನಲ್ಲಿ "ಕಮ್ಮರಡಿ, ಕರ್ನಾಟಕ" ಅಂತ ಸರ್ಚ್ ಮಾಡಿದ ವಿಶ್ವನಿಗೆ ಕಂಡಿದ್ದು, ತ್ರಿಕೋನದ ಕೇಂದ್ರ ಬಿಂದುವಿನಿಂದ ಮೂರೂ ದಿಕ್ಕುಗಳಿಗೆ ಎಳೆದಂತಹ ರೇಖೆಗಳು. ಕೆಲಸದ ರಾಶಿಯೇ ತನ್ನ ಮುಂದಿದ್ದರೂ ಮನಸ್ಸು ಊರಲ್ಲಿತ್ತು. ತೀರ್ಥಹಳ್ಳಿ, ಕೊಪ್ಪ, ಶೃಂಗೇರಿಯ ರಸ್ತೆಗಳ ಸಂಗಮ ಕಮ್ಮರಡಿ. ಊರಿನ ಈ ತುದಿಯಿಂದ ಆ ತುದಿಗೆ ಆರಾಮಾಗಿ ನಡೆಯಬಹುದಾದಷ್ಟು 
Go to your blog listವಿಸ್ತೀರ್ಣ. ಮೂರೂ ರಸ್ತೆಗಳ ಸರ್ಕಲ್ ನಲ್ಲಿ ಒಂದಿಷ್ಟು ಅಂಗಡಿಗಳು, ಅಡಿಗರ ಹೋಟೆಲ್, ರಾಯರ ರೈಸ್ ಮಿಲ್, ಹೊಸದಾಗಿ ಕಟ್ಟಿರುವ ಒಂದು ಕಾಂಪ್ಲೆಕ್ಸ್, ಸಂಜೆ ಹೊತ್ತಾದರೆ ಶಿವಣ್ಣನ ಗೋಬಿ ಗಾಡಿ, ಅಂಗಡಿಗಳನ್ನ ದಾಟಿದರೆ ಅಪ್ಪಟ ಮಲೆನಾಡಿನ ಹಂಚಿನ ಮನೆಗಳು, ತೀರ್ಥಹಳ್ಳಿ ರಸ್ತೆಯಲ್ಲೊಂದು ರಾಘವೇಂದ್ರ ಸ್ವಾಮಿ ಮಠ, ಶೃಂಗೇರಿ ರಸ್ತೆಯಲ್ಲೊಂದು ಗಣಪತಿ ದೇವಸ್ಥಾನ ಹೀಗೆ ಕಮ್ಮರಡಿ ಮ್ಯಾಪಿನಲ್ಲಿ ಜೀವಂತವಾದಂತೆ ಅವನಿಗೆ ಭಾಸವಾಗಿತ್ತು. ಮ್ಯಾನೇಜರ್ ನಿಂದ ಇನ್ನೊಂದು ಮೇಲ್ ಬಂದಾಗಲೇ ಮ್ಯಾಪ್ ಕ್ಲೋಸ್ ಆಗಿದ್ದು. ಮ್ಯಾಪ್ ಕ್ಲೋಸ್ ಆದರೂ ಕಣ್ಣ ಮುಂದೆ ಹರಿದಾಡುತ್ತಿರುವ ನೆನಪಿನ ದೃಶ್ಯಾವಳಿಗಳು ಮಾತ್ರ ನಿಲ್ಲಲಿಲ್ಲ. 


ಬೆಂಗಳೂರಿನ ಮಹಾ ನಗರದಲ್ಲಿ ಹುಟ್ಟಿ, ಅಲ್ಲೇ ಓದಿ, ಅಲ್ಲೇ ಕೆಲಸ ಮಾಡುತ್ತಿರವ ವಿಶ್ವನಿಗೆ ತನ್ನ ಊರೆಂದರೆ ಸ್ವರ್ಗ. ದಿನವೆಲ್ಲಾ ಕೆಲಸ, ವೀಕೆಂಡ್ ಬಂದರೆ  ಬೆಂಗಳೂರಿನ ಶಾಪಿಂಗ್ ಮಾಲುಗಳು, ಪ್ರತಿ ಶನಿವಾರ ಬೆಳಿಗ್ಗೆ ದಿ ಕ್ಲಬ್ ನಲ್ಲಿ ಆಡುವ ಸ್ಕ್ವಾಷ್ ಆಟ, ಭಾನುವಾರದ ದರ್ಶಿನಿ ತಿಂಡಿ, ತಿಂಗಳಿಗೊಮ್ಮೆ ಗೆಳೆಯರ ಜೊತೆ  ಬ್ರಿವರಿಯಲ್ಲಿ ಕುಂತು ತಣ್ಣನೆ ಬಿಯರ್ ಕುಡಿದು ಹರಟಿದ್ದು ಇವೆಲ್ಲವೂ ಬೋರಾದಾಗ ಊರು ಅವನ ಪಾಲಿಗೆ ಏಕತಾನತೆಯಿಂದ ಹೊರಬರುವುದಕ್ಕೆ ಕಂಡುಕೊಂಡಿರುವ ಮಾರ್ಗ. ನೆಮ್ಮದಿಯನ್ನರಸಿ ಹೊರಡೋ ತಾಣ. 

ಊರಿಗೆ ಹೋದರೆ ಹೆಗಡೆಯವರ ಮೊಮ್ಮಗನಾ ಅಂತ ಕೇಳಿ ಎಲ್ಲರೂ ಮಾತಾಡಿಸುತ್ತಿದ್ದರು. ಕ್ಯಾಂಟೀನ್ ನ ಅಡಿಗರು, ಇವನು ಬಂದ ತಕ್ಷಣ 'ಏನೋ ಅಳಿಯಾ.... ಏನಂತಿದೆ ಬೆಂಗಳೂರು' ಅಂತ ಕೇಳಿ ಕುಶಲೋಪರಿ ನಡೆಸುತ್ತಿದ್ದರು. ಅವರಿಗೆ ಅವನನ್ನ ಚಿಕ್ಕವನಿದ್ದಾಗಿಂದಲೂ ಅಳಿಯಾ ಅಂತ ಕರೆದೇ ಅಭ್ಯಾಸ. ಅಡಿಗರ ಇಬ್ಬರು ಹೆಣ್ಣು ಮಕ್ಕಳಿಗೂ ಮದುವೆಯಾಗಿದ್ದರೂ ಇವನನ್ನ ಹಾಗೆ ಕರೆಯುವುದನ್ನ ಬಿಟ್ಟಿರಲಿಲ್ಲ. ಅಲ್ಲೊಂದಿಷ್ಟು ಹರಟಿ, ಖಾರ ಚಟ್ನಿಯ ಜೊತೆ ಎರಡು ಬನ್ಸ್ ತಿಂದು, ನಿಮ್ಮ ಬನ್ಸ್ ರುಚಿ ಬೆಂಗಳೂರಿನ ಯಾವ ಹೋಟೆಲ್ಲಲ್ಲೂ ಇಲ್ಲ ಅಡಿಗರೇ ಅಂತ ಅವರನ್ನಷ್ಟು ಖುಷಿಯಾಗಿಸಿ ಅಲ್ಲಿಂದ ಹೊರಡುತ್ತಿದ್ದ. ಅಲ್ಲಿಂದ ತೀರ್ಥಹಳ್ಳಿಯ ದಾರಿಯಲ್ಲಿ ಒಂದರ್ಧ ಕಿಲೋಮೀಟರು ನಡೆದರೆ ರಾಘವೇಂದ್ರ ಸ್ವಾಮಿ ಮಠ. ಮಠಕ್ಕೆ ಭೇಟಿ ಕೊಟ್ಟು ಅಲ್ಲೇ ಬಲಬದಿಗೆ ತಿರುಗಿದರೆ ಮಣ್ಣಿನ ರಸ್ತೆ. ಅಲ್ಲೇ ಅಜ್ಜನ ಮನೆ. ಬಸ್ ಸ್ಟ್ಯಾಂಡ್ ನಿಂದ ಮನೆಯ ತನಕವೂ ಅಜ್ಜನನ್ನ ಮಾತಾಡಿಸುವ ಜನ. ತಾನು ಸಾಫ್ಟ್ ವೇರ್ ಕಂಪನಿಯಲ್ಲಿ ಹೆಸರಿಗೆ Technical Lead ಆಗಿ ಲಕ್ಷ ಸಂಪಾದಿಸಿದರೂ ತನ್ನ ಪರಿಚಯ ತನ್ನ ಆಫೀಸಿನ ಒಂದಿಪ್ಪತ್ತು ಜನಕ್ಕೆ ಮಾತ್ರ. ಪಕ್ಕದ ರಸ್ತೆಯಲ್ಲಿ ತನ್ನ ಗುರುತಿಸುವುದಿರಲಿ, ಪಕ್ಕದ ಮನೆಯವರಿಗೇ ತನ್ನ ಪರಿಚಯವಿಲ್ಲ. ಅಜ್ಜನಿಗೆ ಸಿಗುತ್ತಿದ್ದ ಮರ್ಯಾದೆ, ವಿಚಾರಿಸುವ ಜನ ಇವೆಲ್ಲವನ್ನ ನೋಡಿದರೆ ಊರಿನಲ್ಲೇ ಇದ್ದು ಬಿಡುವ ಯೋಚನೆ ವಿಶ್ವನಿಗೆ. ಬೆಂಗಳೂರಿಗೆ ಬಂದು ಮನೆ ಮಾಡಿರುವ ಅಪ್ಪನಿಗೆ ಒಂದಿಷ್ಟು ಬೈದುಕೊಳ್ಳುತ್ತಿದ್ದ. 


ಊರಿನಲ್ಲಿ ಎರಡಂತಸ್ತಿನ ವಿಶಾಲವಾದ ಮನೆ, ಮನೆಯ ನಾಲ್ಕೂ ಸುತ್ತಲಿನ ನಡುವೆ ಅಡಿಕೆ ಹರವಲು ವಿಶಾಲ ನಡುಮನೆ,  ಅಚಾನಕ್ಕಾಗಿ ಸುರಿವ ಮಳೆಯಿಂದ ಒಣಗಿಸಿದ ಅಡಿಕೆ ಒದ್ದೆಯಾಗಿ ಬರುವ ಮುಗ್ಗಲು ವಾಸನೆ, ಕಿಟಕಿಗಳಿಲ್ಲದ ದೇವರ ಮನೆಯೊಳಗಿನ ಕತ್ತಲು, ಹಂಡೆಯಲ್ಲಿ ಬಿಸಿ ಬಿಸಿ ಕುದಿಯುವ ನೀರು, ಮನೆಯ ಮುಂದೆ ಅಂಗಳದಲ್ಲಿ ತೆಂಗಿನ ಗರಿಯ ಚಪ್ಪರ, ಅಂಗಳದ ಮುಂದಿನ ಅಡಿಕೆ ತೋಟ, ಅಡಿಕೆ ತೋಟದಲ್ಲಿ ಹಾದುಹೋಗುವ ನೀರಿನ ಸಣ್ಣ ನಾಲೆ, ನಾಲೆಗೊಂದು ಸಂಕ, ಸಂಕ ದಾಟಿ ಅತ್ತ ಹೋದರೆ ವೆನಿಲಾ ಪರಿಮಳ, ವೆನಿಲಾ ಗಿಡಗಳ ರಾಶಿ, ಮದ್ಯೆ ಒಂದಿಷ್ಟು ಬಾಳೆಮರ, ಅಲ್ಲಲ್ಲಿ ಬಾಳೆ ಗೊಂಚಲು, ಅಡಿಕೆ ಮರಕ್ಕೆ ಹಬ್ಬಿಸಿದ ವೀಳ್ಯದೆಲೆ ಬಳ್ಳಿ, ಬೇಸಿಗೆಯಲ್ಲಿ ಸ್ಪ್ರಿಂಕ್ಲರ್ ಜೆಟ್ ನಿಂದ ತೋಟಕ್ಕೆಲ್ಲಾ ಮಳೆಯ ಸಿಂಚನ, ಮಧ್ಯೆ ಎಲ್ಲೋ ಒಂದು ಪೇರಲೆ ಗಿಡದಲ್ಲಿ ಈಗ ತಾನೇ ಚಿಗುರಿದ ಪೇರಲೆ ಕಾಯಿ, ಮಳೆಗಾಲದಲ್ಲಿ ಒಂದೇ ಸಮನೆ ಧೋ ಅಂತ ಸುರಿಯೋ ಮಳೆ, ಕರೆಂಟು ಹೋದಾಗಿನ ಸೀಮೆ ಎಣ್ಣೆ ಬಿರಡೆಯ ಕುರುಡು ಬೆಳಕು, ರಸ್ತೆಗಳಲ್ಲಿ ಬೀದಿ ದೀಪಗಳಿಲ್ಲದೆ ಆವರಿಸುವ ಗಾಡಾಂಧಕಾರ, ರಾತ್ರಿ ಮಲಗಿದ ಮೇಲೆ ಎಷ್ಟೋ ಹೊತ್ತು ಕೇಳಿಸುವ ಗುಯ್ಗುಡುವ ಜೀರುಂಡೆ ಸದ್ದು.. ಹೀಗೆ ಬೆಂಗಳೂರಿನ ಏಕತಾನತೆಯಿಂದ ಬೋರಾದ ಮನಸ್ಸನ್ನ ರಿಚಾರ್ಜ್ ಮಾಡಲು ವಿಶ್ವನಿಗೆ ಇಷ್ಟು ಸಾಕಾಗಿತ್ತು. 


ಮನೆಯ ಅಂಗಳದಲ್ಲಿರುವ ಕಪ್ಪೆ ಗುಂಡಿ ಅವನಿಗೆ ಮುಗಿಯದ ಕುತೂಹಲ. ಯಾವ ಕಾಲದಿಂದ ಇದೆಯೋ ಏನೋ, ಅಂಗಳದ ಜಗಲಿ ಕಟ್ಟೆಯ ತುದಿಯಲ್ಲಿ ಅದಕ್ಕೊಂದು ಗೂಡು. ಕಪ್ಪೆಗಳಿಗೆ ಅದು ತಮಗೆಂದೇ ಮಾಡಿಟ್ಟ ಗುಂಡಿಯೆಂದು ಗೊತ್ತಿದೆಯೋ ಇಲ್ಲವೋ ಗೊತ್ತಿಲ್ಲ, ಆದರೆ ಮಳೆಗಾಲದಲ್ಲಿ ಎಷ್ಟೊತ್ತಿಗೆ ನೋಡಿದರೂ ಕನಿಷ್ಠ ೩೦ ೪೦ ಕಪ್ಪೆಗಳು ಅಲ್ಲಿರುತ್ತಿತ್ತು. ಕಪ್ಪೆಗಳನ್ನ ಹುಡುಕಿಕೊಂಡು ಅವಾಗವಾಗ ಕೇರೆ ಹಾವು ಬಂದಾಗ ಒಂದೋ ಎರಡೋ ಕಪ್ಪೆಗಳ ಸಂಖ್ಯೆ ಕಡಿಮೆಯಾಗುತ್ತಿತ್ತು. ಅದು ವಿಶ್ವನ S L R ಕ್ಯಾಮೆರಾದಲ್ಲಿ ಸೆರೆಯಾಗುತ್ತಿತ್ತು. ತಕ್ಷಣವೇ ಫೇಸ್ಬುಕ್ ನ ಗೋಡೆಯ ಮೇಲೆ ಅಪ್ ಲೋಡ್ ಆಗುತ್ತಿತ್ತು.  


ಗಟ್ಟಿಮುಟ್ಟಾಗಿದ್ದಂತೆ ಕಾಣುತ್ತಿದ್ದ ಅಜ್ಜ ಅಚಾನಕ್ಕಾಗಿ ತೀರಿಕೊಂಡು ವರ್ಷವಾಗಿತ್ತು. ಅಜ್ಜಿಗೆ ಮೊದಲಿನ ಹುಮ್ಮಸ್ಸಿಲ್ಲ. ಊರಲ್ಲಿ ಕೆಲಸದ ಆಳು ಮಕ್ಕಳಿಗೂ ಕೊರತೆ. ವಿಶ್ವನ ಅಪ್ಪ ಶಂಕರ ಹೆಗಡೆ ಒಂದು ನಿರ್ಧಾರಕ್ಕೆ ಬಂದಾಗಿತ್ತು. ಮನೆ, ತೋಟ ಮಾರಿಬಿಡೋಣ, ಅಮ್ಮ ಬಂದು ನಮ್ಮ ಜೊತೆ ಬೆಂಗಳೂರಿನಲ್ಲಿ ಇರಲಿ ಅನ್ನೋದು ಅವರ ಅಭಿಪ್ರಾಯ. ಅಜ್ಜಿ ಆ ನಿರ್ಧಾರಕ್ಕೆ ಒಪ್ಪಿ ಅಂಕಿತ ಹಾಕಾಗಿತ್ತು. 


ವಿಶ್ವನಿಗೆ ತಕ್ಷಣಕ್ಕಾಗಿದ್ದು ಒಂದೇ ಚಿಂತೆ, ಇನ್ನು ಮುಂದೆ ತನ್ನ ಪಾಲಿಗೆ ಊರು ಇರುವುದಿಲ್ಲ. ಊರಲ್ಲೆ ಜೀವನ ಕಳೆಯೋದು ಸದ್ಯಕ್ಕೆ ಆಗದ ಕೆಲಸ. ಆದರೆ ಮನೆ ಮಾರಿದರೆ ಮತ್ತೆ  ಊರಿಗೆ ಹೋಗಲು ಕಾರಣಗಳಿಲ್ಲ. ಹೋದರೂ ಉಳಿದುಕೊಳ್ಳಲು ಸ್ವಂತದ್ದೊಂದು ಜಾಗವಿಲ್ಲ. ಪ್ರತಿ ಬಾರಿ ಊರಿಗೆ ಹೋದಾಗ ಸಿಗುತ್ತಿದ್ದ ಹೊಸ ಅನುಭವಗಳು ಇನ್ನು ಮುಂದೆ ನೆನಪುಗಳು ಮಾತ್ರ. ಅಲ್ಲಿನ ಜನ ಜಾಗಗಳಿನ್ನು ಕೇವಲ ತನ್ನ ಡೈರಿ ಪುಟಗಳಲ್ಲಿ. ಮನೆ, ತೋಟ ಮಾರಿಬಿಡುವ ನಿರ್ಧಾರ ಒಪ್ಪಲಾಗಲಿಲ್ಲ, ಹಾಗೆಯೇ ನೋಡಿಕೊಳ್ಳಲು ಕೂಡ ಸಾಧ್ಯವಿಲ್ಲ. ತೀರ್ಮಾನವನ್ನು ವಿರೊಧಿಸಲೂ ಆಗದೆ, ಸಮರ್ಥಿಸಲೂ ಆಗದೆ ಸುಮ್ಮನಿದ್ದುಬಿಟ್ಟ. ಆದರೆ ಊರಿನ ಜೊತೆ ಸಖ್ಯವನ್ನ ಮುಂದುವರಿಸಲು ಕಾರಣ ಹುಡುಕಲು ಶುರು ಮಾಡಿದ. ವರ್ಷಕ್ಕೊಮ್ಮೆ ಊರಿನಲ್ಲಿ ಅದ್ದೂರಿಯಾಗಿ ನಡೆಯುವ ಆರಾಧನಾ ಮಹೋತ್ಸವ ನೆನಪಾಗಿ ಅಲ್ಲಿನ ರಾಘವೇಂದ್ರ ಸ್ವಾಮಿ ಮಠಕ್ಕೆ ಹತ್ತು ಸಾವಿರ ದೇಣಿಗೆ ನೀಡಿದ, ಮುಂದಿನ ಆರಾಧನಾ ಮಹೋತ್ಸವಕ್ಕೆ ತನ್ನನ್ನೂ ಕರೆಯಲೆಂದು, ಅಲ್ಲಿಗೆ ಹೋಗಲೊಂದು ನೆಪವಿರಲೆಂದು. 


ಕಮ್ಮರಡಿ ಕಾಡುತ್ತಿತ್ತು. ಅಲ್ಲಿನ ನೆನಪುಗಳ ರಾಶಿಯ ಮುಂದೆ ಕೆಲಸದ ರಾಶಿ ಸರದಿಯಲ್ಲಿ ನಿಂತಿತ್ತು. ಮತ್ತೆ ಊರಿಗೆ ಹೋಗಲು ಆರಾಧನಾ ಮಹೋತ್ಸವದ ತನಕ ಕಾಯಲಾರೆ ಅನ್ನಿಸಿರಬೇಕು, ಸರದಿಯಲ್ಲಿ ನಿಂತವರನ್ನ ಲೆಕ್ಕಿಸದೆ ಗಂಟೆ ಒಂದಾಗುತ್ತಿದ್ದಂತೆ ಮಧ್ಯಾಹ್ನ ಊಟಕ್ಕೆ ಹೊರಟು ಲಂಚ್ ಬ್ರೇಕ್ ನ ಬೋರ್ಡನ್ನ ಕೌಂಟರ್ನಲ್ಲಿರಿಸಿ ಹೊರಡುವ ಸರ್ಕಾರಿ ಕೆಲಸದವರಂತೆ, ಬೆಳಿಗ್ಗೆ ಬೆಳಿಗ್ಗೆಯೇ ಕೆಲಸಗಳ ರಾಶಿಯನ್ನ ಬದಿಗೆ ಸರಿಸಿ, ಪರ್ಸನಲ್ ಎಮರ್ಜೆನ್ಸಿ, ತಕ್ಷಣ ಹೊರಡುತ್ತಿದ್ದೇನೆಂದು ಮ್ಯಾನೇಜರ್ ಗೆ ತಿಳಿಸಿ ಮನೆಯ ಕಡೆ ಹೊರಟ. 


ತೋಟ ಮಾರಿ ಬಂದ ದುಡ್ಡಿನಲ್ಲಿ Investment purpose ಗೆ ಇರಲಿ ಅಂತ ಮನೆಯ ನೆಂಟರೆಲ್ಲಾ ಒತ್ತಾಯ ಮಾಡಿ ಕೊಡಿಸಿದ ಎರಡು ರೂಮಿನ ಸಾವಿರ ಚದರಡಿಯ ಮನೆ. ಹತ್ತಂತಸ್ತಿನ ಮೂರು ಕಟ್ಟಡಗಳ ಪೈಕಿ ಒಂದರಲ್ಲಿ ನಾಲ್ಕನೇ ಅಂತಸ್ತಿನಲ್ಲಿ ಮನೆ. Apt 4E. ಲಿಫ್ಟ್ ನಲ್ಲಿ ದಿನಾ ಅದೇ ಮುಖಗಳನ್ನ ನೋಡಿದರೂ ಎಲ್ಲರೂ ಅಪರಿಚಿತರೇ. ಮನೆಯ ಒಳಗೊಂದು ಚಿಕ್ಕ ಬಾಲ್ಕನಿ. ಬಾಲ್ಕನಿಯಿಂದ ಆಚೆ ನೋಡಿದರೆ ಅದೇ ಅಪಾರ್ಟ್ಮೆಂಟಿನ ಮತ್ತೊಂದಿಷ್ಟು ಮನೆಗಳ ರಾಶಿ, ಬಾಲ್ಕನಿಯ ತುಂಬಾ ಒಣಗಿಸಲು ಹಾಕಿದ ಬಟ್ಟೆಯ ರಾಶಿ. ಎರಡು ದಿನದ ಮಟ್ಟಿಗೆ ತನ್ನ ಬಟ್ಟೆ ಪ್ಯಾಕ್ ಮಾಡಿ ಅಲ್ಲಿಂದ ಹೊರಟ. ಕಾರು ಕಮ್ಮರಡಿಯ ಕಡೆ ಮುಖ ಮಾಡಿತ್ತು. 


ಕಮ್ಮರಡಿಗೆ ಬಂದು ತಲುಪಿದಾಗ ಸಂಜೆ. ಸುಮಾರು ತಿಂಗಳುಗಳ ನಂತರ ಊರಿಗೆ ಬಂದ ಖುಷಿ. ಅಡಿಗರ ಕ್ಯಾಂಟೀನ್ ನ ಮುಂದೆ ಕಾರು ನಿಲ್ಲಿಸಿದ. ಹೋಟೆಲ್ಲಿನಲ್ಲಿ ಅಡಿಗರಿರಲಿಲ್ಲ. ಎರಡು ವರ್ಷದಿಂದ ಅಮೇರಿಕಾದಲ್ಲಿರುವ ಮಗಳ ಮನೆಗೆ ಮೂರು ತಿಂಗಳ ಮಟ್ಟಿಗೆ ಹೋಗಿದ್ದಾರಂತೆ. ಅಳಿಯನನ್ನ ಕೇಳುವವರಿರಲಿಲ್ಲ. ಎಂದಿನಂತೆ ಎರಡು ಬನ್ಸ್ ಆರ್ಡರ್ ಮಾಡಿದ. ಅಡಿಗರ ನಗು ಮುಖ ಅಲ್ಲಿರದೇ ಯಾವತ್ತಿನ ರುಚಿ ಎನಿಸಲಿಲ್ಲ. ರಾಘವೇಂದ್ರ ಸ್ವಾಮೀ ಮಠಕ್ಕೆ ಹೋಗಿ ಹತ್ತು ನಿಮಿಷ ಕುಳಿತ. ಮನಸ್ಸಿಗೆ ತಂಪೆನಿಸಿತು. ಅಜ್ಜನ ಜೊತೆಗೆ ಬಂದಾಗ ಚೆನ್ನಾಗಿ ಮಾತಾಡಿಸುತ್ತಿದ್ದ ಅರ್ಚಕರಿಗೆ ಅವನ ಪರಿಚಯ ಸಿಗಲಿಲ್ಲವೇನೋ, ಅವರಾಗೇ ಮಾತಾಡಿಸಲಿಲ್ಲ. ತಾನಾಗೇ ಮಾತಾಡಿಸಲು ಹೊದ. ಹೆಗಡೆಯವರ ಮೊಮ್ಮಗ ಅಂತ ಹೇಳಿದ ಮೇಲೆ ಒಂದೆರಡು ಮಾತಾಡಿದರಷ್ಟೇ. ಬಸು ಟೈಲರ್ ಅಂಗಡಿಯಲ್ಲೂ ಅದೇ ಕಥೆ, ಮನೆ ನೋಡಿ ಬರೋಣವೆಂದು ಮನೆಯ ಕಡೆ ಹೊರಟ. ಮನೆಯ ಅಂಗಳದ ಕಪ್ಪೆ ಗುಂಡಿ ಮುಚ್ಚಲಾಗಿತ್ತು. ಮನೆ ಕೊಂಡುಕೊಂಡಿದ್ದ ಗೌಡರಿಗೆ ಪರಿಚಯ ಹೇಳಿದ. ಒಂದು ಲೋಟ ಕಾಫಿ ಕುಡಿದು ಮನೆಯ ಬಗ್ಗೆ ಹರಟಿದರು. ತೋಟ ನೋಡಿ ಬರುತ್ತೇನೆಂದ. ಕತ್ತಲಾದ್ದರಿಂದ ಗೌಡರು ಟಾರ್ಚ್ ಕೊಟ್ಟರು. ಟಾರ್ಚ್ ನ ಬೆಳಕಿನಲ್ಲಿ ಸಂಕ ದಾಟಿ ಇಡೀ ತೋಟವನ್ನೊಂದು ಸುತ್ತು ಹೊಡೆದು, ಕೊನೆಯ ಬಾರಿಗೆಂಬಂತೆ ಕಣ್ ತುಂಬಿಸಿಕೊಂಡ. ಮನಸ್ಸು ಈ ಜಾಗವನ್ನ ಬಿಟ್ಟು ಹೋಗಲು ಬಿಡುತ್ತಿರಲಿಲ್ಲ. 


ರಾತ್ರಿ ಒಂಬತ್ತಾಗಿತ್ತು. ಅವನಿಗೆ ಯಾಕೋ ಈ ಊರಿಗೆ ಹೊಸಬನಂತೆ ಕಾಣುತ್ತಿದ್ದೇನೆ ಎಂದೆನಿಸಿತು. ಅಜ್ಜ ಹೋಗಿ ಒಂದೇ ವರ್ಷಕ್ಕೆ ಅಪರಿಚಿತನಾಗಿಬಿಟ್ಟೆ ಎಂದೆನಿಸಿತು. ಉಳಿಯುವುದೆಲ್ಲಿ ಎಂದು ಗೊತ್ತಾಗಲಿಲ್ಲ. ತನಗೂ ಊರಿಗೂ ಮಧ್ಯೆ ಇದ್ದ ಕೊಂಡಿ ಕಳಚಿ ಹೋಗಿದ್ದರ ಅರಿವಾಗಿತ್ತು. 


ಮತ್ತೆ ಬೆಂಗಳೂರಿಗೆ ಹೋದರಾಯ್ತು ಅಂತ ಹೊರಟ. ಕಮ್ಮರಡಿಯಿಂದ ಹೊರಟು ಒಂದಿಪ್ಪತ್ತು ಕಿಲೋಮೀಟರ್ ಬರುತ್ತಿದ್ದಂತೆ, ಎಡಗಡೆ ರಸ್ತೆಯಲ್ಲಿ ಒಂದು ಬೋರ್ಡ್ ಕಂಡಿತು. "ಹೊನ್ನೇರಮನೆ ಹೋಂ ಸ್ಟೇ... ನಿಮ್ಮ ಮನೆ ಎಂದೆನಿಸುವ ವಿಶೇಷ ಅನುಭವ.. ತೋಟ, ಗುಡ್ಡದ ಮನೆ, ಮನೆ ಊಟ.." ತಕ್ಷಣ ಅಲ್ಲಿದ್ದ ಫೋನ್ ನಂಬರಿಗೆ ಕಾಲ್ ಮಾಡಿದ. ಅಡ್ರೆಸ್ ಕೇಳಿಕೊಂಡ. ಅಲ್ಲಿಗೆ ಕಾರು ತಿರುಗಿಸಿದ. ಊರಲ್ಲಿದ್ದ ಮನೆಯನ್ನ ಮಾರಿ ಬೆಂಗಳೂರಲ್ಲಿ ಒಂದು ಫ್ಲಾಟ್ ಖರೀದಿಸಿ, ಊರಿನ ಅನುಭವಕ್ಕೆಂದು ಕೃತಕ ಊರಿನ ಮನೆಗೆ ಬಂದ ತನ್ನ ಬಗ್ಗೆ ಅವನಿಗೆ ನಗು ಬಂತು. ಪಕ್ಕದ ರೂಮಿಗೆ ಬಂದ ಜನ ಮತ್ತೆ ಅಪರಿಚಿತರು. ನೋಡಿ ಮುಗುಳ್ನಕ್ಕ, ಆ ಕಡೆಯಿಂದ ನಗು ವಾಪಸ್ ಬರಲಿಲ್ಲ.  ಊರಿನ ಅನುಭವವೆಂದರೆ ಬರಿ ಹಂಚಿನ ಮನೆ, ಮನೆ ಊಟ ಅಲ್ಲ ಅಂತ ಕೂಗಿ ಹೇಳಬೇಕೆಂದೆನಿಸಿತು. ಊರು, ಊರಿನ ಮನೆ ಕಳೆದುಕೊಂಡಿದ್ದಕ್ಕೆ ಮರುಗಿದ. ಹೋಂ ಸ್ಟೇ ಯ ರೂಂ ಒಂದರಲ್ಲಿ ಮೆತ್ತನೆಯ ಹಾಸಿಗೆಯ ಮೇಲೆ ಮಲಗಿದ. 


ಅವನಿಗೆ ವಿಚಿತ್ರ ಕನಸು ಕಂಡಿತ್ತು. ಕನಸಿನಲ್ಲಿ, ತನ್ನ ಅಪಾರ್ಟ್ಮೆಂಟ್ ಯಾರೋ ನಿರ್ಮಿಸಿದ ಕಪ್ಪೆಯ ಗುಂಡಿಯಂತೆ ಕಂಡಿತ್ತು. ಅಪಾರ್ಟ್ಮೆಂಟ್ ತುಂಬಾ ಕಪ್ಪೆಗಳ ರಾಶಿ, ಎಲ್ಲವೂ ವಟರುಗುಡುತ್ತಿದ್ದವು. ಎತ್ತರೆತ್ತರಕ್ಕೆ ಜಿಗಿಯುತ್ತಿದ್ದವು. ಹಾವಿಂದ ತಪ್ಪಿಸಿಕೊಂಡು ಓಡುತ್ತಿದ್ದವು. ಕನಸು ಬೇಗ ಎಬ್ಬಿಸಿತು. ಎದ್ದವನೇ ಕಾರ್ ಹತ್ತಿದ. ಊರು ಇಷ್ಟವಾದರೂ ಇರಲಾಗುವುದಿಲ್ಲ, ಬೆಂಗಳೂರು ಕೈ ಬೀಸಿ ಕರೆದರೂ ಇಷ್ಟವಾಗುವುದಿಲ್ಲ. ಕೊನೆಗೂ ಅನಿವಾರ್ಯತೆ ಎಂಬಂತೆ ಬೆಂಗಳೂರಿನ ರಸ್ತೆಯಲ್ಲಿ ಸಾಗತೊಡಗಿದ. 


-- 
ಅಕ್ಷಯ ಪಂಡಿತ್, ಸಾಗರ 
೮ - ೨ - ೨೦೧೪ ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ