ಸೆಪ್ಟೆಂಬರ್ 14, 2012

Software Engineer ನ ಖಾಸ್‌ಬಾತ್
ವಾರದ ೫  ದಿನ ನಿರಂತರ ಜೀತ !
ಸೋಮವಾರ ಬೆಳಗಾದರೆ ಸಾಕು,
ಶುಕ್ರವಾರ ಸಂಜೆ ಯಾವಾಗಾಗುವುದೋ
ಅನ್ನೋ ಚಿಂತೆ.. 
ದಿನಕ್ಕೆ ಹತ್ತು ಗಂಟೆ office ನಲ್ಲಿ..
ಆಮೇಲೆ office ಏ ಬರುತ್ತೆ ಮನೆಗೆ
laptop ರೂಪದಲ್ಲಿ.. 
ಕಿನ್ನರಿ ವೇಷ ಧರಿಸಿ ಬರುವ ಮಾಯಾವಿ
ರಕ್ಕಸನಂತೆ!

ಅಮ್ಮ ಹೇಳ್ತಾ ಇರ್ತಾಳೆ
ಈಗಿನ ಕಾಲದ ಹುಡುಗರಿಗೆ ಜನ ಬಳಕೆ ಕಡಿಮೆ... 
ನನ್ನದೇನಿದೆ ತಪ್ಪು..  
ಬಳಕೆಯಲ್ಲಿರುವುದೇ ಅಷ್ಟು ಜನ... 
ಸೈಟು, ಅಪಾರ್ಟ್‌ಮೆಂಟು, ಕಾರು
ಬೇರೆ ಏನೂ ಬೇಕಿಲ್ಲ... 
ಅವರಿಗೆ ಅವರದ್ದೇ ಒಂದು ಲೋಕ
client ಕೆಲಸವೇ ಕೈಲಾಸ...

ಅಮೇರಿಕ ದಲ್ಲಿರುವ ಕ್ಲೈಂಟ್ ಗೆ ಬೆಳಕು ಹರಿದರೆ
ನಮಗದು ಸುಪ್ರಭಾತ.. 
ಮುಖವನ್ನೇ ನೋಡದೇ ಇಷ್ಟು ದಿನ 
ಅವನೊಡನೆ ಮಾತುಕತೆ...
ಕಡೆಯ ತನಕ ಮುಖ ತೋರಿಸದೇ 
ಮರೆಯಲ್ಲಿ ನಿಂತು ಮಾತನಾಡುವ ಹಳೆ ಕಾಲದ
ಪಿಕ್ಚರ್ನ ಕೇಡಿಯೊಬ್ಬ ನೆನಪಾಗುತ್ತಾನೆ!
ಪಿಕ್ಚರ್ ನ  climax ನಲ್ಲಿ ಆಗುವಂತೆ 
ಯಾರಾದರೂ ಬಂದು ಅವನನ್ನ 
ಚಚ್ಚಿ ಹಾಕಬಾರದೇ  ಎಂದುಕೊಳ್ಳುತ್ತೇನೆ!

ಎಲ್ಲಾ ಮುಗಿಸಿ ಮಲಗೋಣವೆನ್ನುವಷ್ಟರಲ್ಲಿ
ಬಾಸ್ ನ ಫೋನ್ "ಸ್ಟೇಟಸ್ ಏನಾಯ್ತು?"
ಬೆಳಿಗ್ಗೆ ಯಾರದೋ facebook status ನೋಡಿದ ನೆನಪು
"ಕನ್ನಡಿಗ ನೀನು ಗರ್ವದಿಂದ ಘರ್ಜಿಸು!"
ದಿನಾ ರಾತ್ರಿ ಕೇಳುವುದು ಮಾತ್ರ ತಮಿಳು ಬಾಸಿನ ಘರ್ಜನೆ !

ಹಾಗೋ ಹೀಗೋ ಶುಕ್ರವಾರ ಅಂತ್ಯವಾದರೆ
weekend ಮಾಡಬೇಕಿರುವ ಕೆಲಸಗಳದೊಂದು 
ಬೃಹತ್ ಪಟ್ಟಿ...

ಮತ್ತೆ ಸೋಮವಾರ ಬೆಳಿಗ್ಗೆ...
ಹೊಸ ತೆಲುಗು ಪಿಕ್ಚರ್ ನೋಡಿ ಬಂದವನ
ಮುಖದಲ್ಲಿ ಏನೋ ಸಾಧಿಸಿದ ಖುಷಿ.. 
ಕೇಳುತ್ತಾನೆ. "how was your weekend man"

ಏನು ಮಾಡಿದೆನೋ, ಬಿಟ್ಟೆನೋ ಗೊತ್ತಿಲ್ಲ... 
ಒಟ್ಟಿನಲ್ಲಿ,  ಹೊಸ ವಾರದ ಜೀತಕ್ಕೆ 
fresh ಆಗಿ ready!!


-
ಅಕ್ಷಯ ಪಂಡಿತ್ಸಾಗರ


ನದಿ ಮತ್ತು ಬದುಕುನದಿ ಚೆಲುವೆ!
ಮೈ ಮರೆಯುತ್ತಾ
ತನ್ನಿಷ್ಟದಂತೆ ಕುಣಿಯುತ್ತಾ
ಒಮ್ಮೆ ಹುಚ್ಚು ಪ್ರವಾಹ ಎಬ್ಬಿಸುತ್ತಾ
ಮಗದೊಮ್ಮೆ ತಣ್ಣಗಾಗುತ್ತಾ
ನೋಡಿದಷ್ಟೂ ನೋಡಬೇಕೆನ್ನಿಸುವ ಸೊಗಸು
ಸಾಗರನ ಸೇರುವ ಕಾತುರತೆ
ಸೇರಿದೊಡನೆ ಒಂದು ಬಿಸಿ ಅಪ್ಪುಗೆ !!


ನದಿ ವಿರಹಿ!
ತನ್ನ ಸಖ ಮಳೆ ಸುರಿಸದೇ ದಿನವೆಷ್ಟಾಯ್ತೋ!
ಅವನಿಗಾಗಿ ಕಾದು ಕಾದು ಸೊರಗಿ ಹೋಗಿದ್ದರೂ
ಬಂದೆ ಬರುತ್ತಾನೆನ್ನೋ ಭರವಸೆ
ಕಡೆಗೂ ಅವನೊಂದು ದಿನ
ಪ್ರೀತಿ ಮಳೆ ಸುರಿಸಿದಾಗ
ನದಿ ಉತ್ಸಾಹದ ಚಿಲುಮೆ
ಪಾರವಿಲ್ಲ ಅವಳ ಪ್ರೀತಿ ರಭಸಕ್ಕೆ !!


ನದಿ ಹೆಣ್ಣು !
ಪ್ರತಿದಿನವೂ ಹೊಸದಾರಿ
ಹಾದಿಯುದ್ದಕ್ಕೂ ಸಂಘರ್ಷ
ಆದರೂ ಮಮತೆ ಮರೆತಿಲ್ಲ
ಉಪಕಾರ ಪಡೆದವರ ಲೆಕ್ಕವಿಲ್ಲ
ಸಾಗರ ಸೇರುವಾಗಲೂ ನೋವು ನಿಂತಿಲ್ಲ
ಅಲೆಗಳೊಂದಿಗೆ ತಾಕಾಟ, ಅಲ್ಲೂ ಹೋರಾಟ
ಸಂಘರ್ಷದಿಂದ ಬಿಡುಗಡೆಯಿಲ್ಲ !!


ನದಿ ಯೋಗಿ !
ಹುಟ್ಟಿದ ಊರಿನ ಹಂಗಿಲ್ಲ 
ನಿಂತ ನೆಲೆಯ ಋಣ ಇಲ್ಲ
ನಡೆದದ್ದೇ ದಾರಿ
ಗಮ್ಯದ ಹುಡುಕಾಟ
ಪಯಣ ಮಾತ್ರ ನಿರಂತರ 
ಸಾಗರ ಸೇರಿ ಪ್ರಶಾಂತವಾದ ನಂತರ
ಅದೊಂದು ಸಾರ್ಥಕ ಕ್ಷಣ! ಮುಕ್ತಿ ಭಾವ !


ನದಿ ನಿತ್ಯ ನೂತನ!
ವೈವಿಧ್ಯಗಳ ಅನಾವರಣ
ನಮ್ಮದೇ ಪ್ರತಿಬಿಂಬ
ಬದುಕಿನ ನಿಲುವುಗನ್ನಡಿ
ಪ್ರತಿ ಜೀವವೂ
ಒಂದೊಂದು ರೀತಿ
ಬಾಳುವ ಬಗೆಗೆ
ನದಿ ಸ್ಪೂರ್ತಿ !!-
ಅಕ್ಷಯ ಪಂಡಿತ್, ಸಾಗರ