ನವೆಂಬರ್ 17, 2013

ಪದ್ದಿ ಅಂಗಡಿ

                                                                  ಪದ್ದಿ ಅಂಗಡಿ 

[ಲೋಕದರ್ಶನ ದೀಪಾವಳಿ ವಿಶೇಷಾಂಕ ೨೦೧೩ರಲ್ಲಿ ಪ್ರಕಟವಾದ ಕಥೆ]

'ಇಟ್ಕೊಂಡಿರದು ಹೆಂಡದಂಗಡಿ, ಮಾಡ್ತಾ ಇರೋದು ಉಪದೇಶ.. ಸರಿ ಹೋಯ್ತು ' ಅವನಾಡಿದ ಮಾತು ಅವಳ ತಲೆಯಲ್ಲಿನ್ನೂ ಕೊರೆಯುತ್ತಿತ್ತು. ಇದಕ್ಕಿಂದ ಸಾವಿರ ಪಾಲು ಕೆಟ್ಟ ಬೈಗುಳ ಕೇಳಿದ ಅವಳಿಗೆ ಇದೇನು ಅಂತಹ ಬೈಗುಳ ಅಲ್ಲದಿದ್ದರೂ ಹೇಳಿದ್ದು ಅವನಾಗಿದ್ದರಿಂದ, ಕೇಳಿದ್ದು ನಿಜವಾಗಿದ್ದರಿಂದ ಆ ಮಾತು ಅವಳಲ್ಲಿ ನಾಟಿತ್ತು. ಅಲ್ಲಿಂದ ಎದ್ದು ಹೋಗಿ ಅಂಗಡಿಯ ಹಿಂಬದಿಯ ಕತ್ತಲಲ್ಲಿ ಕಳೆದುಹೊಗಿದ್ದಳು.

ಮಣ್ಣಿನ ಗೋಡೆಯ, ಹಂಚಿನ ಮಾಡಿನ ಸಣ್ಣದೊಂದು ಅಂಗಡಿ. ಪಕ್ಕದಲ್ಲೇ ಹಾದು ಹೋಗುವ ಹೈವೇ ನಲ್ಲಿ ಒಂದಾದರ ಮೇಲೊಂದು ಸಾಲಾಗಿ  ಹೋಗುತ್ತಿರುವ  ಟ್ರಕ್ಕುಗಳು  ಪ್ರತಿಬಾರಿ ಅಂಗಡಿ ದಾಟಿಕೊಂಡು ಹೋದಾಗಲೂ ಅಂಗಡಿಯ ಬಾಗಿಲಿಂದ ಇಣುಕುವ ಟ್ರಕ್ಕಿನ ಹೆಡ್ ಲೈಟ್  ಬೆಳಕು ಬಿಟ್ಟರೆ ಅಂಗಡಿಯೊಳಕ್ಕೆ ಪದ್ದಿ ನಿಲ್ಲುವಲ್ಲಿ ಮತ್ತು ಗಿರಾಕಿಗಳು ಕುಳಿತುಕೊಳ್ಳುವ ಎದುರುಗಡೆ ಬೆಂಚಿನ ಜಾಗದಲ್ಲಿ ಮಾತ್ರ ಎರಡು ಝೀರೋ ಕ್ಯಾಂಡಲ್ ಬಲ್ಬ್ ಗಳ ಕುರುಡು ಬೆಳಕು. ಅವಾಗವಾಗ ಟ್ರಕ್ಕುಗಳು ಬಂದು ನಿಂತಾಗ ಅದರಿಂದಿಳಿಯುವ ಹಿಂದಿ, ಪಂಜಾಬಿ ಮಾತನಾಡುವ ಡ್ರೈವರ್ ಗಳನ್ನ ಬಿಟ್ಟರೆ ಪಕ್ಕದೂರಿಂದ ಕೆಲವೇ ಜನ ಇಲ್ಲಿಗೆ ಬರುತ್ತಿದ್ದರು, ಊರವರ ಕಣ್ತಪ್ಪಿಸಿ ಕುಡಿಯಲು. ಪದ್ದಿಯ ಹಳೆಯ ಮಬ್ಬು ಸೀರೆಗೆ ಹೊಳಪು ಕೊಡುತ್ತಿರುವ ಕುರುಡು ಬಲ್ಬಿನಡಿಯಲ್ಲಿ ಅವಳು  ಕೆಲವರಿಗೆ ಹೆಂಡದ ಪ್ಯಾಕೆಟ್ಟನ್ನು ಕೊಡುತ್ತಿದ್ದರೆ, ಇದ್ದಿದ್ದರಲ್ಲೇ ಸ್ವಲ್ಪ ದುಡ್ಡಿರುವವರಿಗೆ, ರಮ್ಮಿನ ಸೇವೆ ಮಾಡುತ್ತಿದ್ದಳು. ಗಿರಾಕಿ ಕಳ್ಳಗಣ್ಣಲ್ಲಿ ಇವಳ ಸೊಂಟ ನೋಡುವುದರಲ್ಲಿ ಮಗ್ನನಾಗಿರುವಾಗ ಪದ್ದಿ ರಮ್ಮಿಗೆ ನೀರು ಬೆರೆಸಿ ಉಳಿದದ್ದರಲ್ಲಿ ಬರುವ ಲಾಭ ಎಣಿಸಿಕೊಂಡಿರುತ್ತಿದ್ದಳು. ಆ ಅಂಗಡಿ ಆ ಊರವರಿಗೆ ಮತ್ತು ಅವರಿವರಿಂದ ಕೇಳಿ ಬರುತ್ತಿದ್ದ ಟ್ರಕ್ ಡ್ರೈವರ್ ಗಳಿಗಷ್ಟೇ ಗೊತ್ತಿತ್ತೇ ಹೊರತು ಮತ್ಯಾರಿಗೂ ಅದು ಹೆಂಡದಂಗಡಿ ಅನ್ನೋ ಸುಳಿವೂ ಸಿಗುತ್ತಿರಲಿಲ್ಲ. ಎಲ್ಲಾ ಹೆಂಡದಂಗಡಿಯ ಮುಂದೆಯೂ ಇರುವಂತೆ ಇವಳ ಅಂಗಡಿಗೆ 'ಸಾರಾಯಿ ಅಂಗಡಿ' ಅನ್ನೋ ಬೋರ್ಡು ಇರಲಿಲ್ಲ. ಆದರೆ ಊರವರೆಲ್ಲಾ ಆ ಅಂಗಡಿಗೆ ನಾಮಕರಣ ಮಾಡಾಗಿತ್ತು. 'ಪದ್ದಿ ಅಂಗಡಿ' ಅಂತ.

ಮಂಗಳೂರಿನಿಂದ ಗೋವಾಕ್ಕೆ ಹೋಗುವ ಹೆದ್ದಾರಿಯಲ್ಲಿರುವ ಹೊನ್ನಾವರಕ್ಕೆ ತಾಕಿಕೊಂಡಿರುವ ಕಾಸರಕೋಡಿನಲ್ಲಿ ಪದ್ದಿಯ ಮನೆ. ಮನೆಯಿಂದ ಒಂದು ಮಾರು ನಡೆದರೆ, ಅರಬ್ಬೀ ಸಮುದ್ರ. ಕಡಲ ಶಬ್ದ ನಿರಂತರವಾಗಿ ಕೇಳುತ್ತಿತ್ತು. ಫ್ಯಾನ್ ಇಲ್ಲದೆ ಯಾರೂ ನಿದ್ದೆ ಮಾಡಲಾಗದ ಆ ಕರಾವಳಿಯ  ಸೆಕೆಯಲ್ಲಿ ಬೆಳಿಗ್ಗೆಯ ಸುಡುವ ಬಿಸಿಲಿನ ಹೊತ್ತು ಪದ್ದಿ ಮೈ ಮರೆತು ಮಲಗುತ್ತಿದ್ದಳು . ಅವಳ ಮನೆ,  ಅಂಗಡಿಗಿಂತಲೂ ಚಿಕ್ಕದಾದ ಒಂದು ಗುಡಿಸಲು. ಅದಕ್ಕೊಂದು ಗಿಡದ ಬೇಲಿ, ಬಾಗಿಲಿನ ಎದುರಿಗೆ ಸರಗೊಲಿನ ಗೇಟು, ಹಿಂಭಾಗದಲ್ಲೊಂದು ಸರ್ಕಾರದವರು ಕಟ್ಟಿಸಿಕೊಟ್ಟಿರೋ ಶೌಚಾಲಯ, ಅದರೆದುರಿಗೊಂದು ನೀರಿನ ಗುಂಡಿ ಇಷ್ಟು ಬಿಟ್ಟರೆ ಸಾವಿತ್ರಮ್ಮನ ಮನೆಯಲ್ಲಿ ನೋಡಿ ಇಷ್ಟಪಟ್ಟು ಕೇಳಿ ತಂದು ಮನೆಯ ಎದುರಿಗೆ ನೆಟ್ಟಿರೋ ಹಳದಿ ದಾಸವಾಳದ ಹೂವಿನ ಗಿಡ. ಪದ್ದಿ ಆ ಗಿಡದಲ್ಲಿ ಯಾವತ್ತೂ ಈಗಷ್ಟೆ ಅರಳಿರುವ ದಾಸವಾಳ ನೋಡಿಲ್ಲ. ರಾತ್ರಿ ಮೂರಕ್ಕೆ ಬಂದು ಮಲಗಿ ಮಧ್ಯಾನ್ಹ ಏಳುವ ಹೊತ್ತಲ್ಲಿ, ಅದಾಗಲೇ ದಾಸವಾಳ ಅರಳಿ ಇನ್ನೇನು ಬಾಡುವಂತಾಗಿರುತಿತ್ತು.

ಎದ್ದ ತಕ್ಷಣ ಮನೆಯಲ್ಲೇ ಕೋಡುಬಳೆ, ಚಕ್ಕಲಿ ತಯಾರಿ ಮಾಡಿಕೊಂಡು, ಮಾಡಿಟ್ಟ ಉಪ್ಪಿನಕಾಯನ್ನ ಒಂದು ಡಬ್ಬದಲ್ಲಿ ಹಾಕಿ ತನ್ನ ಅಂಗಡಿ ಸೇರುತ್ತಿದ್ದಳು. ಅವಳು ಮಾಡುವ ಉಪ್ಪಿನಕಾಯಿಯ ರುಚಿಗೋ ಅಥವಾ ಗಿರಾಕಿಗಳ ಬಳಿ ಚಕ್ಕಲಿ, ಕೊಡುಬಳೆಗೆ ದುಡ್ಡಿರುತ್ತಿರಲಿಲ್ಲವೋ, ಒಟ್ಟಿನಲ್ಲಿ ಉಪ್ಪಿನಕಾಯಿ, ಸಾರಾಯಿಯ ಜೊತೆ  ಭರ್ಜರಿಯಾಗಿ ವ್ಯಾಪಾರವಾಗುತ್ತಿತ್ತು.  ಅವಳು ಅಂಗಡಿಗೆ ಬರುವ ಸರಿಹೊತ್ತಲ್ಲಿ, ಹೊನ್ನಾವರದ ಬಾರೊಂದರಿಂದ ಸತ್ಯಣ್ಣ ರಮ್ಮಿನ ಬಾಟಲಿ, ಹೆಂಡದ ಪಾಕೆಟ್ ಎರಡನ್ನೂ ಒಂದು ರಿಕ್ಷಾ ದಲ್ಲಿ ಹಾಕಿಕೊಂಡು ತರುತ್ತಿದ್ದ.  ಅದನ್ನೆಲ್ಲಾ ಒಳಗೆ ರಾಶಿ ಹಾಕುತ್ತಿದ್ದಳು. ನಿನ್ನೆಯ ಗ್ಲಾಸುಗಳ ರಾಶಿಯಲ್ಲಿ ಒಂದಾದರೂ ಒಡೆದ ಗ್ಲಾಸು ಇರುತ್ತಿತ್ತು. ಒಡೆದ ಅನಾಮಿಕನಿಗೊಂದಿಷ್ಟು ಬೈಗುಳಗಳ ಸುರಿಮಳೆಯಾಗುತ್ತಿತ್ತು. ಬೆಂಚುಗಳು ಎಲ್ಲೆಂದರಲ್ಲಿ ಹೊರಳಿಕೊಂಡಿರುತ್ತಿತ್ತು. ನೆಲದ ತುಂಬಾ ಹೆಂಡದ ಕೊಟ್ಟೆಗಳ ರಾಶಿ. ಅಂಗಡಿಯ ಹೊರಗಡೆ ಯಾರೋ ಹೆಚ್ಚು ಕುಡಿದು ಮಾಡಿಕೊಂಡ ವಾಂತಿ, ಸಿಗರೇಟಿನ ತುಂಡುಗಳು, ಎಲ್ಲವನ್ನೂ ಒಂದು ಹಂತಕ್ಕೆ ತಲುಪಿಸಿ ಅಂಗಡಿ ಬಾಗಿಲು ತೆರೆಯುವುದರಲ್ಲಿ ಸುಮಾರು ಸಂಜೆ ಆರು ಗಂಟೆ. ಪದ್ದಿ ಅಂಗಡಿ ಕಡೆ ಮುಖ ಮಾಡುವವರಿಗೆ ಸುಮಹೂರ್ತ ಒದಗಿ ಬಂದಂತೆ. 

ಪದ್ಮಾ ಅಂತ ಅವಳ ಹೆಸರನ್ನ ಪೂರ್ತಿ ಕೇಳಿದ್ದು ಯಾವತ್ತೂ ಇಲ್ಲ. ಸಣ್ಣ ವಯಸ್ಸಿನಲ್ಲೇ ಮನೆ ಕೆಲಸಕ್ಕೆ ಹೋಗುತ್ತಿದ್ದ ಅವಳನ್ನ ಎಲ್ಲರೂ ಪದ್ದಿ ಅಂತ ಕರೆದಿದ್ದೇ. ಇವತ್ತಿನ ತನಕ ಅವಳೆಷ್ಟೇ ದೊಡ್ಡವಳಾದರೂ ಅವಳ ಹೆಸರು ಮಾತ್ರ ಹಾಗೇ ಉಳಿದಿತ್ತು. ಮನೆ ಕೆಲಸ ಮಾಡುತ್ತಾ ಮಾಡುತ್ತಾ, ದೊಡ್ದವಳಾದಂತೆ ಊರಲ್ಲಿ ಯಾರದೇ ಮಗುವಾದರೂ ಬಾಣಂತನ ಮಾಡಿಸುವುದು ಅವಳ ಜವಾಬ್ದಾರಿಯಾಗಿಬಿಟ್ಟಿತ್ತು. ಮಗುವನ್ನ ಸ್ನಾನ ಮಾಡಿಸುವುದು ಅವಳಿಗೆ ಎಲ್ಲಿಲ್ಲದ ಖುಷಿ. ಮಗುವಿನ ದೇಹವನ್ನ, ತಲೆಯನ್ನ ತಿಕ್ಕಿ ತೀಡಿ ತಾನೇ ಆಕೃತಿ ಕೊಡುತ್ತಿರುವಂತೆ ಬೀಗುತ್ತಿದ್ದಳು. ಇಡೀ ಕೇರಿಯ ಎಲ್ಲಾ ಮಕ್ಕಳನ್ನೂ ತಾನೇ ದೊಡ್ಡ ಮಾಡಿದೆನೆಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಳು.

ಮದುವೆ ಮಾಡಿಕೊಂಡ ಒಂದೇ ವರ್ಷಕ್ಕೆ ಗಂಡ ಇವಳನ್ನ ಬಿಟ್ಟು ಹೇಳದೇ ಕೇಳದೆ ಮುಂಬೈ ಗೆ ಹೋಗಿದ್ದ. ಅದಾದ ಮೇಲೆ ಅವನ ಸುದ್ದಿಯಿರಲಿಲ್ಲ. ಅವಳೂ ತಲೆ ಕೆಡಿಸಿಕೊಂಡಿರಲಿಲ್ಲ. ಅದೊಂದು ವಿಷಯವೇ ಅಲ್ಲವೇನೋ ಅನ್ನುವಂತೆ ವರ್ಷಗಟ್ಟಲೇ ತನ್ನಷ್ಟಕ್ಕೆ ತಾನಿದ್ದ ಪದ್ದಿ, ಮಗಳು ಪಕ್ಕದ ಕೇರಿಯ ಸ್ಕೂಲ್ ಮಾಸ್ತರರ ಮಗನ ಜೊತೆ ಓಡಿ ಹೋಗಿದ್ದಾಳೆನ್ನುವ ಸುದ್ದಿ ತಿಳಿದಾಗ ಮಾತ್ರ ಕಂಗಾಲಾಗಿ ಕೂತಿದ್ದಳು. ಮಾಸ್ತರರ ಮನೆಯಲ್ಲಿ ಒಪ್ಪದ ಕಾರಣ ಇಬ್ಬರೂ ಫೋನ್ ನಂಬರ್, ವಿಳಾಸ ಕೊಡದಂತೆ ಬೆಂಗಳೂರಿಗೆ  ಹೋಗಿದ್ದರು. ಊರಿನ ಎಲ್ಲಾ ಕೇರಿಯ ಎಲ್ಲರ ಮನೆಯಲ್ಲೂ ಕೆಲಸ ಮಾಡಿಕೊಂಡು ಅವರೆಲ್ಲರ ಜೊತೆ ಖುಷಿಯಾಗಿದ್ದ ಪದ್ದಿಗೆ ಅವತ್ತು ಇದ್ದಕ್ಕಿದ್ದಂತೆ ಊರಿನಿಂದ ಬಹಿಷ್ಕಾರ ಹಾಕಿದಂತಿತ್ತು. ಊರಿಗೆ ಊರೇ ಅವಳೊಡನೆ ಮಾತಾಡುವುದನ್ನ ನಿಲ್ಲಿಸಿದಂತಿತ್ತು. ಮಾತನಾಡಿದರೂ ಮಗಳು ಓಡಿ ಹೋದಳಂತೆ ಅನ್ನುವುದರಿಂದಲೇ ಪ್ರಾರಂಭವಾಗುತ್ತಿದ್ದ ಮಾತು ಅವಳನ್ನ ಹಿಂಡಿ ಹಿಪ್ಪೆ ಮಾಡುತ್ತಿತ್ತು. ಮಾತನ್ನ ನಿಲ್ಲಿಸಿದ್ದಳು. ಅವಳೇ ದೊಡ್ಡ ಮಾಡಿದ ಮಕ್ಕಳು ಕೂಡ ಪದ್ದಿ ಮಗಳು ಓಡಿ ಹೋಗಿದಾಳಂತೆ ಅಂತ ರಸ್ತೆಯಲ್ಲಿ ಮಾತನಾಡಿಕೊಂಡು ತಿರುಗಾಡುವಾಗ ಅವಳಿಗೆ ಹೊರಗೆ ತಿರುಗಾಡುವ ಧೈರ್ಯವೂ ಇರಲಿಲ್ಲ. ಯಾರ ಮನೆಯಲ್ಲೂ ಕೆಲಸಕ್ಕೂ ಕರೆಯುತ್ತಿರಲಿಲ್ಲ. 

ಅಂತಹ ಸಮಯದಲ್ಲಿ ಅವಳ ಬೆಂಬಲಕ್ಕೆ ಅಂತ ನಿಂತಿದ್ದು ಸತ್ಯಣ್ಣ. ಸತ್ಯಣ್ಣ ಅವಳಿಗೆ ಹಳೆಯ ಪರಿಚಯ, ಹೆಂಡದಂಗಡಿ ನಡೆಸುತ್ತಿದ್ದ  ಸತ್ಯಣ್ಣ ಏನಾದರೂ ವ್ಯಾಪಾರ ಶುರು ಮಾಡಬೇಕೆಂದಿದ್ದ. ಇವಳ ಅಸಹಾಯಕ ಸ್ಥಿತಿ ನೋಡಿದ್ದೇ ಇವಳನ್ನ ಅಂಗಡಿ ನೋಡಿಕೊಳ್ಳಲು ಬಿಟ್ಟರೆ, ತಾನು ಬೇರೆ ಕೆಲಸ ಮಾಡಬಹುದೆಂದು, ಇವಳನ್ನ ಹೆಂಡದಂಗಡಿ ನೋಡಿಕೊಳ್ಳುವಂತೆ ಕೇಳಿದ್ದ. ಬರೀ ಗಂಡಸು ಗಿರಾಕಿಗಳಿಂದಲೇ ತುಂಬಿ ತುಳುಕುವ, ರಾತ್ರಿಯಿಡಿ ಅವರ ನಶೆಯಲ್ಲಿ ಅವರಿಗೆ ಹೆಂಡದ ಸೇವೆ ಮಾಡುವ ಕೆಲಸ ನೆನೆದು ಹೆದರಿದ್ದ ಅವಳಿಗೆ, ಅವಳ ಅಂಗಡಿಯಲ್ಲೇ ಸೀನನಿಗೆ ಇರಲು ಹೇಳಿ, ಯಾರಾದರೂ  ಕೆಟ್ಟದಾಗಿ ಮಾತನಾಡಿದರೆ, ಅತಿ ಸಲಿಗೆ ತೋರಿಸಿದರೆ, ಮುಟ್ಟಲು ಬಂದರೆ ತಕ್ಷಣ ಹೇಳುವಂತೆ ಹೇಳಿ ಅವಳಲ್ಲಿ ಕೆಲಸ ಮಾಡುವಂತೆ ಒಪ್ಪಿಸಿದ್ದ. ಪದ್ದಿ ಅಂಗಡಿ ನೋಡಿಕೊಳ್ಳಲು ಶುರು ಮಾಡಿದ ಮೇಲೆ ಗಿರಾಕಿಗಳೂ ಹೆಚ್ಚಾದರು. ಮೊದಮೊದಲಂತೂ ಸತ್ಯಣ್ಣನಿಗೆ ದಿನವೂ ಫೋನ್ ಬರುತ್ತಿತ್ತು. ಅವನೊಂದು ಗುಂಪು ಕಟ್ಟಿಕೊಂಡು ಬಂದು ಅವರಿವರಿಗೆ ಬಡಿದು ಹೋಗುತ್ತಿದ್ದ. ಒಂದು ತಿಂಗಳಾಗುವಷ್ಟರಲ್ಲಿ ಅವಳಿಗೆ ಸತ್ಯಣ್ಣನ ಬೆಂಬಲವಿದೆ ಎಂದು ತಿಳಿದ ಮೇಲೆ ಯಾರೂ ಅವಳ ಸುದ್ದಿಗೆ ಹೋಗುತ್ತಿರಲಿಲ್ಲ. ಅವರವರ ಕುಡಿತದಲ್ಲಿ, ಅವರವರ ಚಿಂತೆಯಲ್ಲಿ ಮುಳುಗಿರುತ್ತಿದ್ದರು. ಹೊರಗಿಂದ ಬರುತ್ತಿದ್ದವರಾರೂ ಗೊತ್ತಿಲ್ಲದ ಜಾಗದಲ್ಲಿ ಅವಳನ್ನ ರೇಗಿಸಿ ಇಕ್ಕಟ್ಟಿಗೆ ಸಿಲುಕಿಕೊಳ್ಳಲು ಇಷ್ಟ ಪಡುತ್ತಿರಲಿಲ್ಲ. ಆದರೂ ದೂರದಿಂದಲೇ ನೋಡಿ ಆ ವಯಸ್ಸಲ್ಲೂ ಮೂವತ್ತರ ಹಾಗಷ್ಟೇ ಕಾಣಿಸುವ ಅವಳ ಮೈಕಟ್ಟನ್ನ ನೋಡಿ ಜೊಲ್ಲು ಸುರಿಸುವವರೇನು ಕಮ್ಮಿ ಇರಲಿಲ್ಲ. ಹೀಗೆ ಬರುತ್ತಾ ಬರುತ್ತಾ ಸತ್ಯಣ್ಣನ ಹೆಂಡದಂಗಡಿ, ಬಾಯಿಂದ ಬಾಯಿಗೆ ಪದ್ದಿ ಅಂಗಡಿ ಆಗಿ ಹರಿದಾಡಿತ್ತು.

ಅವಳಿಗೆ ಮೊದಮೊದಲು ಈ ಕೆಲಸ ಇಷ್ಟವಾಗುತ್ತಿರಲಿಲ್ಲ. ಎದುರಿಗೆ ಕೆಟ್ಟದಾಗಿ ಮಾತನಾಡದಿದ್ದರೂ ಹಿಂದಿಂದ ಜನ ಕೆಟ್ಟದಾಗಿ ಮಾತನಾಡುತ್ತಾರೆಂದು ಹೊಸತಾಗಿ ಹೇಳಬೇಕಿರಲಿಲ್ಲ. ದುರುಗುಟ್ಟಿ ನೋಡುತ್ತಿದ್ದರು, ಮುಜುಗರವಾಗುತ್ತಿತ್ತು. ಅಸಹ್ಯ ಬೈಗುಳಗಳೆಲ್ಲ ಕೇಳಬೇಕಾಗಿತ್ತು. ನಿಧಾನವಾಗಿ ಪ್ರಾರಂಭವಾಗುತ್ತಿದ್ದ ಚರ್ಚೆಗಳು, ಮಾತು ಕಥೆಗಳು ಜಗಳಗಳಾಗಿ ಪರಿವರ್ತನೆಯಾಗುತ್ತಿತ್ತು, ಹೊಡೆದಾಟವಾಗಿ ಮುಗಿಯುತ್ತಿತ್ತು. ಊರಿನವರಾರೂ ಮಾತನಾಡಿಸದೇ ಹೋದರೂ, ಊರಿನ ಕಥೆಯಷ್ಟೂ ಇಲ್ಲಿ ಚರ್ಚೆಗೊಳ್ಳುತ್ತಿತ್ತು. ಗೊತ್ತಿದ್ದವರ ಬಗ್ಗೆ ತಿಳಿದುಕೊಳ್ಳುವ ಕುತೂಹಲವಿದ್ದರೂ ಅದನ್ನ ತೋರಿಸುತ್ತಿರಲಿಲ್ಲ. ಎಷ್ಟು ಗೊತ್ತಾಗುತ್ತದೋ ಅಷ್ಟೇ. ಮಕ್ಕಳ ಮೈ ತಿಕ್ಕಿ ಧೂಪ ಹಚ್ಚಿ ನಿದ್ದೆ ಮಾಡಿಸುತ್ತಿದ್ದ ಪದ್ದಿ, ಈಗ ಜನರಿಗೆ ನಶೆ ಹತ್ತಿಸಿ ನಿದ್ದೆ ಮಾಡಿಸುತ್ತಿದ್ದಳು. ಅಸಹ್ಯದ ಕೆಲಸ ಎನ್ನಿಸಿದರೂ ಹೊಟ್ಟೆ ಪಾಡು ಸಾಗಲೇ ಬೇಕಿತ್ತು.  ಬರಬರುತ್ತಾ ಪ್ರತಿ ದಿನವೂ ಮತ್ತೆ ಹಿಂದಿನ ದಿನದ ಪುನರಾವರ್ತನೆಯಷ್ಟೇ ಎಂದೆನಿಸಿ ಕೆಲಸ ಅಭ್ಯಾಸ ಮಾಡಿಕೊಂಡಳು.

ಕಾಸರಕೋಡಿನ ಐಸ್ ಫ್ಯಾಕ್ಟರಿ ಶ್ರೀನಿವಾಸರಾಯರ ಮಗ ಅವತ್ತು ಅಲ್ಲಿಗೆ ಬಂದಿದ್ದ. ಪದ್ದಿ ಅಂಗಡಿಗೆ. ಹೊನ್ನಾವರದಲ್ಲೋ, ಕುಮಟಾದಲ್ಲೋ ಬಾರಿಗೆ ಹೋದರೆ ಮಾರನೆಯ ದಿನವೇ ಸುದ್ದಿ ಅಪ್ಪನಿಗೆ ಗೊತ್ತಾಗಿ ರಂಪಾಟವೇ ಅಗಿಬಿಡುತ್ತೆಂದು ಅವನಿಗೆ ಗೊತ್ತಿತ್ತು. ಅದಕ್ಕೆಂದೇ ತನ್ನ ಪರಿಚಯದವರಾರೂ ಇಲ್ಲಿ ಬರಲಿಕ್ಕಿಲ್ಲ ಅಂತ ಪದ್ದಿ ಅಂಗಡಿಗೆ ಬಂದಿದ್ದ. ಪದ್ದಿಯ ಕೌಂಟರ್ ಬಳಿ ಬಂದು ತನಗೆ ತನ್ನ ಗೆಳೆಯರಿಗೆ ರಮ್ಮಿನ ಆರ್ಡರ್ ಕೊಟ್ಟಿದ್ದ. ಶ್ರೀನಿವಾಸರಾಯರ ಮಗ ತನ್ನ ಅಂಗಡಿಗೆ ಬಂದದ್ದು ನೋಡಿ ಒಂದು ಕ್ಷಣ ಏನೂ ತೋಚದವಳಂತೆ ನಿಂತಿದ್ದಳು ಪದ್ದಿ.

ಅವನ ಮುಖ ಅವಳಿಗೆ ಹೊಸತಲ್ಲ. ಸುಮಾರು ಇಪ್ಪತ್ತು ವರ್ಷದ ಹಿಂದೆ ಅವಳು ಅವನನ್ನ ಮೊದಲು ನೋಡಿದಾಗ ಅವನ ಕಣ್ಣುಗಳಲ್ಲಿ ಅಪರಿಚಿತವಾದ ಹೊಸತನ್ನೇನೋ ನೋಡುವ ಗಾಬರಿ, ಅಗಲ ಹಣೆ, ಅಮ್ಮನನ್ನೇ ಹೋಲುವ ಚಪ್ಪಟೆ ಮೂಗು, ಮೃದು ಗಲ್ಲದಲ್ಲಿ ಇನ್ನೂ ಕೆಂಪು ಹಾಗೇ ಇತ್ತು. ಆಗ ಅವಳಿಗಿನ್ನೂ ಇಪ್ಪತೈದು. ಹಲ್ಲಿಲ್ಲದ ಬೊಚ್ಚ ಬಾಯಲ್ಲಿ ಇವಳನ್ನ ನೋಡಿ ಮುಗುಳ್ನಗೆ ಬೀರಿದ್ದ ಪ್ರಶಾಂತ. ಅವನ ಕೈ ಮುಷ್ಠಿ ಬಿಡಿಸಿ ಅದರಲ್ಲಿ ಹತ್ತು ರುಪಾಯಿ ನೋಟನ್ನಿಟ್ಟು ಮುಷ್ಠಿ ಮತ್ತೆ ಕಟ್ಟಿಸಿದ್ದಳು. ರಾಯರ ಹೆಂಡತಿ ಶಾರದಮ್ಮ ಬಾದಾಮಪುರಿ ಕೊಟ್ಟು, ನಾಳೆಯಿಂದ ಮನೆ ಕೆಲಸದ ಜೊತೆ ಮಗು ಮೀಸಲಿಕ್ಕೂ ನೀನೇ ಬಂದುಬಿಡು, ಐನೂರು ಹೆಚ್ಚು ತಗೋ ಅಂದಿದ್ದರು. ಅದಾದ ಮಾರನೆಯ ದಿನ ಬೆಳಿಗ್ಗೆ ಪದ್ದಿ ಅಲ್ಲಿ ಹಾಜರಾಗಿದ್ದಳು.

ಮಗುವನ್ನ ಬಚ್ಚಲ ಮನೆಗೆ ಎತ್ತಿಕೊಂಡು ಹೋಗಿ ತೊಡೆ ಮೇಲೆ ಕೂರಿಸಿಕೊಂಡು ಮೈಗೆಲ್ಲಾ ಎಣ್ಣೆ ಹಚ್ಚಿದಳು. ಬಿಸಿ ಬಿಸಿ ನೀರನ್ನ ಸ್ವಲ್ಪ ಸ್ವಲ್ಪವೇ ಸುರಿದು, ಕೈ ಕಾಲನ್ನ ತೀಡಿದಳು. ಮಗು ಜೋರಾಗಿ ಅಳುತ್ತಿತ್ತು. ಅಳು ಕೇಳಿಸಿಕೊಳ್ಳದಂತೆ ಪದ್ದಿ ಸ್ನಾನ ಮಾಡಿಸುವುದರಲ್ಲಿ ನಿರತಳಾಗಿದ್ದಳು. ಸ್ನಾನವಾದ ನಂತರ ಒಪ್ಪವಾಗಿ ಒರೆಸಿ,  ಪೌಡರ್ ಹಚ್ಚಿ ತೊಟ್ಟಿಲಲ್ಲಿ ಮಲಗಿಸಿ ಕೆಳಗಡೆಯಿಂದ ಸಣ್ಣಗೆ ಧೂಪ ಹಚ್ಚಿದಳು. ಮಗು ಪ್ರಶಾಂತವಾಗಿ ನಿದ್ದೆ ಮಾಡಿತ್ತು. ಅದಾದ ಮೇಲೆ ನಾಲ್ಕು ತಿಂಗಳು ಇದು ಅವಳಿಗೆ ನಿತ್ಯ ದಿನಚರಿ. ಆ ಹೊತ್ತಿಗೆ ಪದ್ದಿ ಗರ್ಬಿಣಿ. ಇಲ್ಲಿನ್ನು ಕೆಲಸಕ್ಕೆ ಬರಲಾರೆ ಅಂದ ದಿನ ಶಾರದಮ್ಮ ಅವಳಿಗೊಂದು ಸೀರೆ, ಖರ್ಚಿಗೆಂದು ಮೂರೂ ಸಾವಿರ ಕೊಟ್ಟಿದ್ದರು. ಪದ್ದಿ ಒಂದೇ ಸಲಕ್ಕೆ ಅಷ್ಟು ದುಡ್ಡು ಅವಳ ಕೈಯಲ್ಲಿ ನೋಡಿದ್ದು ಅವತ್ತೇ. ಶ್ರೀನಿವಾಸರಾಯರಿಗೆ, ಶಾರದಮ್ಮನಿಗೆ ಕೈ ಮುಗಿದು ಪ್ರಶಾಂತನನ್ನೊಮ್ಮೆ ನೋಡಿ ಕಣ್ತುಂಬಿಕೊಂಡಳು. ಪ್ರಶಾಂತ ಮುಗ್ದ ನಗೆ ನಕ್ಕಿದ್ದ. ಅವನಿಗೊಂದು ಮುತ್ತು ಕೊಟ್ಟು ಹೊರಟಿದ್ದಳು ಅಲ್ಲಿಂದ. ಆಮೇಲೆ ಪ್ರಶಾಂತ ದೊಡ್ದವನಾಗುತ್ತಿದ್ದಂತೆ ಅವನ ದುಂಡು ಮುಖ ನೋಡಿ ಬೀಗುತ್ತಿದ್ದಳು. ಅವನು ಸಣ್ಣವನಿದ್ದಾಗ ಅವನ ತಲೆ ತೀಡಿದ್ದರಿಂದಲೇ ಇಷ್ಟು ಚಂದ ಕಾಣುತ್ತಿದ್ದಾನೆಂದು ಅವಳ ಬಲವಾದ ನಂಬಿಕೆ. ಪ್ರಶಾಂತ ಮಾತ್ರ ಇವಳನ್ನ ಕಂಡೊಡನೆ ನಾಚಿಕೆಯಿಂದ ದೂರ ಓಡುತ್ತಿದ್ದ.

ಇನ್ನೂ ಪ್ರಶಾಂತನನ್ನ ನೋಡುತ್ತಾ ಏನೂ ತೋಚದವಳಂತೆ ನಿಂತಿದ್ದ ಪದ್ದಿಗೆ ಮತ್ತೊಮ್ಮೆ ಜೋರಾಗಿ ಆರ್ಡರ್ ಹೇಳಿದ್ದ. 'ಎರಡು ಕ್ವಾರ್ಟರ್ xxx ರಮ್' ಅಂತ. ಒಂದಿಪ್ಪತ್ತು ವರ್ಷ ಹಿಂದೆ ಸಮಯ ಪ್ರಯಾಣ ಮಾಡಿ ಮತ್ತೆ ವರ್ತಮಾನಕ್ಕಿಳಿದ ಪದ್ದಿ, 'ಖಾಲಿಯಾಗಿದೆ' ಅಂತಷ್ಟೇ ಹೇಳಿ ಮುಖ ತಿರುಗಿಸಿದಳು. ಅಲ್ಲೇ ಇದ್ದ ಬಾಟಲಿ ತೋರಿಸಿ, 'ಅದೇನದು' ಅಂದ. 'ಅದು ನಿನ್ನಂತವರಿಗೆ ನಶೆ ಹತ್ಸೋದಕ್ಕಲ್ಲ, ಸುಮ್ಮನೆ ಹೊರಡು, ಇಲ್ಲಾಂದ್ರೆ ನಿಮ್ಮಪ್ಪನಿಗೆ ಹೇಳ್ತೆ' ಅಂದ ಪದ್ದಿ ಅವನನ್ನೊಮ್ಮೆ ದುರುಗುಟ್ಟಿ ನೋಡಿದಳು. ಗೆಳೆಯರ ಮುಂದೆ ಅವನಿಗೆ ಅವಮಾನವಾದಂತೆನಿಸಿ 'ಇಟ್ಕೊಂಡಿರದು ಹೆಂಡದಂಗಡಿ, ಮಾಡ್ತಾ ಇರೋದು ಉಪದೇಶ.. ಸರಿ ಹೋಯ್ತು ' ಅಂತ ಹೇಳಿ ಅಲ್ಲಿಂದ ತಕ್ಷಣ ಹೊರಟ. ಪದ್ದಿ ಕಣ್ಣಂಚಲ್ಲಿದ್ದ ನೀರು ಕುರುಡು ಬೆಳಕಿನಲ್ಲಿ ನಶೆ ಹತ್ತಿದ್ದವರ ಕಣ್ಣಿಗೆ ಕಾಣಲಿಲ್ಲ.

ತಕ್ಷಣವೇ ಹೋಗಿ ಶ್ರೀನಿವಾಸರಾಯರಿಗೆ ಸುದ್ದಿ ತಿಳಿಸಿಬಿಡಲಾ, ಅಂದುಕೊಂಡಳು. ರಾಯರು, ಶಾರದಮ್ಮ ಇಬ್ಬರೂ ನನ್ನ ಕಂಡರೆ ಮುಖ ತಿರುಗಿಸುತ್ತಾರೆ. ಹೆಂಡದಂಗಡಿಯ ಪದ್ದಿ ಜೊತೆ ಅವರಿಗೇನು ಮಾತು. ಮೊದಲು ಕಂಡಾಗೆಲ್ಲಾ ಚೆನ್ನಾಗಿ ಮಾತಾಡಿಸುತ್ತಿದ್ದ ಅವರು, ನನ್ನ ಮಗಳು ಓಡಿ ಹೋದಮೇಲಿಂದ ಎಷ್ಟು ಬೇಕೋ ಅಷ್ಟೇ ಮಾತು. ಆಮೇಲೆ ನಾನು ಹೆಂಡದಂಗಡಿ ನಡೆಸುತ್ತಿದ್ದೇನೆ ಅಂತ ಗೊತ್ತಾದ ಮೇಲಂತೂ ಎದುರಿಗೆ ಕಂಡರೂ ಕಾಣದಂತೆ ಹೋಗಿದ್ದಾರೆ ಎಷ್ಟೋ ಸಲ. ಈಗ ಹೋಗಿ ನಿಮ್ಮ ಮಗ ನನ್ನಂಗಡಿಗೆ ಬಂದಿದ್ದ ಅಂತ ಯಾವ ಮುಖ ಇಟ್ಟುಕೊಂಡು ಹೇಳಲಿ, ಅಷ್ಟಕ್ಕೂ ಅವನು ಹೇಳಿದ್ದರಲ್ಲಿ ತಪ್ಪೇನಿಲ್ಲ, ನಾನ್ಯಾರು ಉಪದೇಶ ಕೊಡೋದಕ್ಕೆ. ಅವನೊಬ್ಬ ಗಿರಾಕಿ, ಸುಮ್ಮನಿರುವ ಬದಲು ನಾನ್ಯಾಕೆ ಹಾಗೇ ಹೇಳಿದೆ. ಪದ್ದಿಯ ಯೋಚನಾ ಲಹರಿ ನಿಂತಿರಲಿಲ್ಲ. ಅವನು ನಾನು ಬೆಳೆಸಿದ ಹುಡುಗ, ನಾಲ್ಕೇ ತಿಂಗಳಾದರೇನು, ಅವನನ್ನ ಅಕ್ಕರೆಯಿಂದ ನೋಡಿಕೊಳ್ಳುವಾಗ ನನ್ನ ಮಗಳಿನ್ನೂ ಹುಟ್ಟಿರಲಿಲ್ಲ. ನಾನು ನೋಡಿಕೊಂಡ ಮೊದಲನೇ ಮಗು ಅದು. ಅಷ್ಟಲ್ಲದೇ ರಾಯರು ಮತ್ತು ಶಾರದಮ್ಮ ಇದನ್ನ ಖಂಡಿತ ಸಹಿಸುವುದಿಲ್ಲ. ರಾಯರ ಮನೆ ಊಟ ಮಾಡಿದ ನನಗೆ, ದಾರಿ ತಪ್ಪುತ್ತಿರೋ ಅವರ ಮಗನನ್ನ ಸರಿದಾರಿಗೆ ತರುವಂತೆ ಮಾಡುವುದು ನನ್ನ ಕರ್ತವ್ಯ, ಅವರಿಗೆ ಹೇಳದಿದ್ದರೆ ಅದು ತಪ್ಪು. ಹೀಗೆ ಯೋಚನೆಗಳು ದ್ವಂದ್ವದೊಳಗೆ ಅತ್ತಿಂದಿತ್ತ ಇತ್ತಿಂದತ್ತ ಹೊರಳಾಡುತಿತ್ತು. ಸರಿ ತಪ್ಪು ಯಾವುದೆಂದು ಸರಿ ನಿರ್ಧಾರಕ್ಕೆ ಬರಲಾಗದಿದ್ದರೂ ರಾಯರಿಗೆ ವಿಚಾರ ತಿಳಿಸುವುದೇ ಹೆಚ್ಚು ಸರಿ ಇರಬಹುದೆಂದು ನಿರ್ಧರಿಸಿದಳು ಪದ್ದಿ.

ಆ ರಾತ್ರಿಯಿಡೀ ಅವಳಿಗೆ ನಿದ್ದೆ ಬರಲಿಲ್ಲ. ಬೆಳಕು ಹರಿಯುವುದಕ್ಕೂ ಮುಂಚೆಯೇ ಎದ್ದು ಮನೆಯಂಗಳದಲ್ಲಿ ಬಂದು ಕೂತಳು.
ಹಳದಿ ದಾಸವಾಳದ ಮೊಗ್ಗು ಸಮಯ ಕಳೆದಂತೆ ಬಿರಿಯುತ್ತಾ ಹೋದಂತೆ ಶ್ರೀನಿವಾಸರಾಯರಿಗೆ ವಿಷಯ ತಿಳಿಸುವ ನಿರ್ಧಾರವೂ ಗಟ್ಟಿಯಾಗತೊಡಗಿತು.

ಅಪರೂಪಕ್ಕೆ ಮನೆಯ ಕಡೆ ಬಂದ ಪದ್ದಿಯನ್ನ ನೋಡಿ ಶಾರದಮ್ಮನಿಗೆ ಆಶ್ಚರ್ಯವಾದರೂ ಹೊರಗಡೆ ತೋರಿಸಿಕೊಳ್ಳಲಿಲ್ಲ. 'ಆರಾಮಾ ಶಾರದಮ್ಮಾ... ' ಅಂತ ಪದ್ದಿ ಕೇಳುತ್ತಿದ್ದಂತೆಯೇ 'ಏನೇ ಪದ್ದಿ, ಸುಮಾರು ದಿನ ಆದ್ಮೇಲೆ ಮನೆ ಕಡೆ ಬಂದಿದಿಯ... ಹೆಂಡದಂಗಡಿ ಇಟ್ತಿದಿಯನ್ತಲ್ಲೇ, ಬೇರೆ ಯಾವುದಾದ್ರು ಕೆಲಸ ಮಾಡೊದಲ್ವಾ, ಅದೇ ಬೇಕಿತ್ತಾ, ಇಡೀ ಊರು ನಿನ್ನ ಬಗ್ಗೆ ಕೆಟ್ಟದಾಗಿ ಮಾತಾಡ್ತಾ ಇದೆ'  ಅಂತ ಹೇಳಿ ಮುಗಿಸಿದ್ದಳು. ಹಳೆಯದನ್ನ ವಿವರಿಸೋ ತಾಳ್ಮೆ ಅವಳಿಗಿರಲಿಲ್ಲ. ನಿನ್ನೆ ನಡೆದಿದ್ದನ್ನ ವಿವರಿಸೋಕೆ ಧೈರ್ಯ ಸಾಲಲಿಲ್ಲ. ' ಏನು ಮಾಡದಮ್ಮಾ .. ಹೊಟ್ಟೆ ಪಾಡು ' ಅಂತಷ್ಟೇ ಹೇಳಿ ಅಲ್ಲಿಂದ ತಕ್ಷಣ ಹೊರಟಳು. ಅಚಾನಕ್ಕಾಗಿ ತಿರುಗಿ ಹೋರಾಟ ಪದ್ದಿಯ ಬೆನ್ನಿಗೆ 'ಊರ ಜನಾನ ಹಾಳು ಮಾಡೋಕೆ ಇವಳೊಬ್ಬಳೆ ಸಾಕು' ಅಂತ ಮಾತು ಬಂದಿತ್ತು. ಪದ್ದಿ ನಡಿಗೆಯ ವೇಗ ಜಾಸ್ತಿ ಮಾಡಿಕೊಂಡಳು. ಮತ್ಯಾವುದೇ ಮಾತು ಕೇಳದಿರಲೆಂದು.

ಮತ್ತೆ ಸಂಜೆ ಪ್ರಶಾಂತ ಅವಳಂಗಡಿಗೆ ಬಂದಿದ್ದ. ಹೊಸ ಗುಂಪಿನ ಜೊತೆ. ರಮ್ಮಿನ ಆರ್ಡರ್ ಗೆ ಪದ್ದಿ ಇಲ್ಲವೆಂದಳು . ಅವನ ಗೆಳೆಯನೊಬ್ಬ ಅಲ್ಲಿದ್ದ ಬಾಟಲಿ ಒಂದನ್ನ ಒಡೆದ. ಇನ್ನೊಬ್ಬ ಅಲ್ಲಿದ್ದ ಬೆಂಚನ್ನ ಎತ್ತಿ ಹಾಕಿದ. ಅವನಿಗೊಮ್ಮೆ ಕಪಾಳಕ್ಕೆ ಬಿಗಿಯಬೇಕೆನ್ನುವಷ್ಟು ಕೋಪ ಬಂದಿತ್ತು ಅವಳಿಗೆ. ಅವಳು ಅವತ್ತು ಅವನಿಗೆ ಹೊಡೆಯದಂತೆ ತಡೆದಿದ್ದೆಂದರೆ ಅವನು ಮಗುವಾಗಿದ್ದಾಗ ಅವಳ ತೊಡೆಯ ಮೇಲೆ ಮಲಗಿ ನಿದ್ದೆ ಹೋಗಿದ್ದ ಅವನ ಅಮಾಯಕ ಮುಖ. ಗೆಳೆಯರ ಧಾಂದಲೆ ನೋಡಿ ವಿಕೃತ ನಗೆ ನಕ್ಕಿದ್ದ. ಸತ್ಯಣ್ಣನಿಗೆ ಫೋನು ಮಾಡಲು ತಡೆದಿದ್ದು ಅವಳ ಮನಸ್ಸಲ್ಲಿ ಅಚ್ಚೊತ್ತಿದ್ದ ಅವನ ಮುಗ್ದ ಬೊಚ್ಚ ಬಾಯಿ ನಗು. ಅವಳು ಮತ್ತೆ ಉಪದೇಶ ಕೊಡುವ ಉಸಾಬರಿಗೆ ಹೋಗಲಿಲ್ಲ. ಅಲ್ಲಿಂದ ಸುಮ್ಮನೆ ಹೊರಗೆ ನಡೆದಳು. ಸೀನ ರಮ್ಮಿನ ಬಾಟಲಿ ತಂದಿಟ್ಟ. ಅವಳು ಮತ್ತೆ ಕತ್ತಲಲ್ಲಿ ಕರಗಿದಳು. ಅಂಗಡಿಯ ಕಡೆ ಮತ್ತೆ ಮುಖ ಮಾಡಲಿಲ್ಲ.

ಒಂದೇ ಹೊರಬಾಗಿಲಿನ ಸುರಂಗದೊಳಗಿನ ಕತ್ತಲಲ್ಲಿ, ಸರಿ ದಾರಿ ಹುಡುಕುವ ಗೊಂದಲದಲ್ಲಿದ್ದವಳಿಗೆ ಅಚಾನಕ್ಕಾಗಿ ದೂರದಲ್ಲೆಲ್ಲೋ ಬೆಳಕು ಕಂಡಿತ್ತು. ಅಂಗಡಿಯ ಹಿಂಬದಿಯ ಕತ್ತಲಲ್ಲಿ ಒಬ್ಬಳೇ ಬಿಕ್ಕಳಿಸುತ್ತಿದ್ದ ಅವಳಿಗೆ ಫೋನ್ ಬಂದಿತ್ತು. ಸತ್ಯಣ್ಣನಲ್ಲದೆ ಬೇರೆ ಯಾರ ಫೋನು ಬಂದಿದ್ದಿಲ್ಲ ಇಷ್ಟು ದಿನ. ಈಗ ಬೇರೆ ನಂಬರ್ ನಿಂದ ಫೋನ್ ಬಂದಿತ್ತು. ಹೆದರಿಸಲು ಯಾರೋ ಕರೆ ಮಾಡಿರಬಹುದೆಂದು ಅಂದಾಜು ಮಾಡುತ್ತಿದ್ದ ಅವಳಿಗೆ ಆಕಡೆಯಿಂದ ಬಂದಿದ್ದು 'ಆಯೀ...' ಅನ್ನೋ ಧ್ವನಿ. ವರ್ಷಗಳ ನಂತರ ಕೇಳಿದ ಮಗಳ ದ್ವನಿ ಹೆಂಡದಂಗಡಿಯ ಆಚೆಗಿನ ಪ್ರಪಂಚದ ತೆರೆ ಸರಿಸಿತ್ತು. ಉಭಯ ಕುಶಲೋಪರಿಯ ನಂತರ ಅವಳು ಹೇಳಿದ ವಿಚಾರ ತನ್ನ ಬದುಕು  ಮತ್ತೆ ಸರಿದಾರಿಗೆ ಬರುತ್ತದೆಯೆಂಬ ಭರವಸೆ ಕೊಟ್ಟಿತು.  ಮಗಳು ನಾಳೆ ಮನೆಯಲ್ಲಿರುತ್ತಾಳೆ ಗಂಡನ ಜೊತೆ, ಅವಳಿಗೀಗ ಏಳು ತಿಂಗಳು, ಇನ್ನೆರಡು ತಿಂಗಳಲ್ಲಿ ತನಗೊಬ್ಬ ಮೊಮ್ಮಗ ಬರಲಿದ್ದಾನೆಂಬ ಸುದ್ದಿ ಯಾರಿಗಾದರೂ ಹೇಳಿಕೊಳ್ಳಬೇಕೆನಿಸಿತು. ಯಾರಿಗೆಂದು ಗೊತ್ತಾಗಲಿಲ್ಲ. ಆ ಖುಷಿಯಲ್ಲಿ ಪ್ರಶಾಂತ ಮತ್ತವನ ಗೆಳೆಯರ ಪುಂಡಾಟಿಕೆ, ಶಾರದಮ್ಮ ಬೆನ್ನ ಹಿಂದೆ ಆಡಿದ ಮಾತು, ಹೆಂಡದಂಗಡಿಯ ಕತ್ತಲಲ್ಲಿ ವಾರೆನೋಟದಲ್ಲಿ ನೋಡುವ , ಅಸಹ್ಯ ಬೈಗುಳ ಬಯ್ಯುವ ಜನ ಎಲ್ಲಾ ಒಂದೇ ಸಲಕ್ಕೆ ಅವಳ ಲೋಕದಿಂದ ಮರೆಯಾಗಿದ್ದರು.

ಮಾರನೆಯ ದಿನ ಸಂಜೆ ಆರಕ್ಕೆ ಪದ್ದಿಯ ಅಂಗಡಿ ಬಾಗಿಲು ತೆರೆಯದಿರುವುದನ್ನ ನೋಡಿ ಸತ್ಯಣ್ಣ ಅವಳಿಗೆ ಫೋನ್ ಮಾಡಿದ. ಇನ್ಮುಂದೆ ತಾನು ಅಂಗಡಿಗೆ ಬರುವುದಿಲ್ಲವಾಗಿ ಹೇಳಿದಳು. ವರ್ಷಗಳ ನಂತರ ಆ ಮನೆಯಲ್ಲಿ ಸಂಜೆಯ ಹೊತ್ತಿಗೆ ಬಲ್ಬಿನ ಬೆಳಕು ಹತ್ತಿಕೊಂಡಿತ್ತು. ಪ್ರತಿ ದಿನದಂತೆ ಚಕ್ಕಲಿ ಕೊಡುಬಳೆಯ ಬದಲು ಮೊದಲ ಬಾರಿಗೆ ಬರಲಿರುವ ಮಗಳು ಅಳಿಯನಿಗೆ ರವೆ ಉಂಡೆ ಮಾಡಿದಳು. ಅಂಗಳದ ಹೊರಗಿನ ಖಾಲಿ ಸೈಟಿನಲ್ಲಿ ಹುಡುಗರ ಗುಂಪಿನ ಕ್ರಿಕೆಟ್ ನಡೆಯುತ್ತಿತ್ತು. ದಿನವೂ ಹೆಂಡದಂಗಡಿಯ ಗಲಾಟೆ ಕೇಳಿ ಕೇಳಿ ಅಭ್ಯಾಸವಾಗಿದ್ದ ಅವಳಿಗೆ ಹುಡುಗರ ಆಟದ ಜಗಳ ಮಜವೆನಿಸಿತು. ಮನೆಯೊಳಗಡೆ ಸಣ್ಣಗೆ ಧೂಪ ಹಚ್ಚಿದಳು. ದಿನವೂ ಬರುತ್ತಿದ್ದ ಹೆಂಡದ ವಾಸನೆಯ ಎದುರು ಧೂಪದ ಘಮ ಸುಖವೆನಿಸಿತು. ಬರಲಿರುವ ಮೊಮ್ಮಗನನ್ನ, ಅವನಿಗೋಸ್ಕರ ಮತ್ತೆ ಶುರುವಾಗಲಿರುವ ಮೀಸುವ ಕೆಲಸ ನೆನೆದು ಸಂಭ್ರಮಿಸಿದಳು. ಮಗಳನ್ನ ನೋಡದೆ ಎರಡು ವರ್ಷ. ಹೆಂಡದಂಗಡಿಯ ಕೆಲಸ ಮಾಡುತ್ತಾ ಎರಡು ವರ್ಷ. ಎರಡು ವರ್ಷಗಳ ಅಜ್ಞಾತ ವಾಸಕ್ಕೊಂದು ಅಂತ್ಯ ಹೇಳುವ ಸಮಯ ಮನಸ್ಸಿಗೆ ಸಂಪೂರ್ಣವಾಗಿ ನೆಮ್ಮದಿ ಕೊಟ್ಟಿತ್ತು.

ಮಾರನೆಯ ದಿನ ಅರಳಿದ ಹಳದಿ ದಾಸವಾಳ ಪದ್ದಿಯ ಮಗಳಿಗೆ ಸ್ವಾಗತ ಹೇಳಿತ್ತು. ಆ ದಿನ ಸಂಜೆ ಪದ್ದಿಯಂಗಡಿಯ ಕೌಂಟರ್ ನ ಝೀರೋ ಕ್ಯಾಂಡಲ್ ಬಲ್ಬಿನ ಅಡಿಯಲ್ಲಿ ಅವಳ ಸೀರೆಯ ಹೊಳಪಿರಲಿಲ್ಲ. ಮಗಳನ್ನ ಕಂಡ ಖುಷಿಯಲ್ಲಿ ಪದ್ದಿಯ ಮುಖ ಅರಳಿತ್ತು.
ಸೆಪ್ಟೆಂಬರ್ 14, 2013

ನೀಲಿ ನಕ್ಷತ್ರ
[ತರಂಗ ವಾರಪತ್ರಿಕೆಯಲ್ಲಿ ಪ್ರಕಟವಾದ ಕಥೆ - ೨ ಮೇ ೨೦೧೩]


ಬೆಳಗಿನ ಜಾವ ಬೀದಿ ದೀಪಗಳು ಸೂರ್ಯನ ಜೊತೆ ಸುಖಾಸುಮ್ಮನೆ ಜಟಾಪಟಿಗೆ ಇಳಿದಿದ್ದರೆ, ಇತ್ತ ರಮಾಕಾಂತನ ಅಲಾರ್ಮ್ ಇಡೀ ವಠಾರಕ್ಕೆ ಕೇಳಿಸುವಂತೆ ಕೂಗಿಕೊಂಡಿತ್ತು. ಅವನ ಮನೆಯ ಗೋಡೆಗೆ ತಾಕಿಕೊಂಡಿರುವ ಪಕ್ಕದ ಮನೆಯ ಜೋರು ಬಾಯಿಯ ಹೆಂಗಸು  ಶಾಂತಮ್ಮ 'ಪ್ರಳಯ ಆದ್ರೂ ಇವನ ಅಲಾರ್ಮ್ ಮಾತ್ರ ದಿನಾ ಹೊಡೆದುಕೊಳ್ಳೋದು ನಿಲ್ಲಲ್ಲ.. ಥೂ ಇವನ..." ಅಂತ ಬೆಳ್ಳಂಬೆಳಗ್ಗೆ ಸುಪ್ರಭಾತ ಹಾಡಿದ್ದಳು. ಮನಸ್ಸಿಲ್ಲದ ಮನಸ್ಸಲ್ಲಿ ಎದ್ದು, ಅಲಾರ್ಮ್ ಆಫ್ ಮಾಡಿ ಬಿ ಕಾಮ್ ಓದುತ್ತಿರುವ ಮಗ ಇವತ್ತಾದರೂ ಬೇಗ ಎದ್ದು ಓದಬಹುದೆಂಬ ಆಶಾವಾದದಿಂದ ಅವನನ್ನ ಎಬ್ಬಿಸಿದ. 'ಹತ್ತು ನಿಮಿಷ ಇರು.. ಎದ್ದೆಳ್ತಿನಿ.. ಕಿರುಚಿಕೊಬೇಡ... ' ಅಂತ ಮಗ ಕಿರುಚಿ ಮತ್ತೆ ಮಲಗಿದ. ಅಪ್ಪನೆದುರು ರೇಗುವುದು ತನ್ನ ಆಜನ್ಮ ಸಿದ್ಧ ಹಕ್ಕು ಎಂಬಂತೆ ರಮಾಕಾಂತ ಏನು ಮಾತಾಡಿದರೂ ಗಟ್ಟಿ ದನಿಯಲ್ಲಿ ಉತ್ತರಿಸುವುದು ಅವನ ಅಭ್ಯಾಸವಾಗಿತ್ತು. ಇನ್ನೊಮ್ಮೆ ಮಗನೆದುರು ಏನಾದರು ಕೇಳಬೇಕೆಂದರೆ ಎಲ್ಲಿ ತನ್ನ ಮೇಲೆ ರೇಗುತ್ತಾನೋ  ಎಂದು ಯಾವುದನ್ನೂ ಎರಡನೇ ಬಾರಿ ಅವನ ಬಳಿ ಹೇಳುತ್ತಿರಲಿಲ್ಲ, ಕೇಳುತ್ತಿರಲಿಲ್ಲ. ಹತ್ತು ನಿಮಿಷವಾದ ಬಳಿಕವೂ ಮಗ ಎದ್ದೇಳುವ ಯಾವ ಸೂಚನೆಯೂ ಕಾಣದಾದಾಗ ಮತ್ತೆ ಅವನನ್ನ ಎಬ್ಬಿಸಬೇಕೆನಿಸಲಿಲ್ಲ. ಅಥವಾ ಧೈರ್ಯ ಸಾಲಲಿಲ್ಲ.  

ನಿನ್ನೆ ಮಾಡಿದ ಚಿತ್ರಾನ್ನವನ್ನ ಡಬ್ಬಕ್ಕೆ ಹಾಕಿಕೊಂಡು ಮಗನಿಗೊಂದಿಷ್ಟು ಇಟ್ಟ, ಈ ಚಳಿಯಲ್ಲಿ ಸ್ನಾನ ಮಾಡುವುದು ಒಳ್ಳೆಯದಲ್ಲ, ಬಂದು ಮಾಡಿದರಾಯ್ತು ಎಂದು ತನಗೆ ತಾನೇ ನೆಪ ಹೇಳಿಕೊಂಡ. ಒಳಗಿನ ಕೋಣೆಯ ಕಿಟಕಿಗೆ ನೇತು ಹಾಕಿರುವ ಶರ್ಟು ತೊಳೆಯದೇ ೫ ದಿನ  ಆಗಿರುವುದು ನೆನಪಾಯಿತು. ಅದನ್ನೇ ಇನ್ನೊಂದು ದಿನ ಹಾಕಿ ಇವತ್ತು ಸಂಜೆ ಮನೆಗೆ ಬಂದವನೇ ಅದನ್ನ ತೊಳೆದುಹಾಕಬೇಕೆಂದು ನಿರ್ಧರಿಸಿದ. ಪ್ಯಾಂಟು ಮುದ್ದೆಯಾಗಿತ್ತು. ಅದರ ಮೇಲೆ ಕೈಯಿಂದ ಇಸ್ತ್ರಿ  ಮಾಡಿ  ಇವತ್ತಿಗೆ ಇಷ್ಟು  ಸಾಕೆಂಬಂತೆ ತನ್ನ ಸೊಂಟಕ್ಕೆ ನೇತುಹಾಕಿಕೊಂಡ. ಇರುವ ಎರಡು ಸಾಕ್ಸ್ ಜೊತೆ, ಒಂದು ತೊಳೆಯಲು ಹಾಕಿದ್ದು ಅಲ್ಲೇ ಇದೆಯೆಂದು ನೆನಪಾಗಿ ಮತ್ತೊಂದು ಸಾಕ್ಸ್ ವಾಸನೆ ಹೊಡೆಯುತ್ತಿಲ್ಲವೆಂದು ಎರಡು ಬಾರಿ ಮೂಸಿ ನೋಡಿ ಖಚಿತಪಡಿಸಿಕೊಂಡು, 'ರಮೇಶ... ಎದ್ದು ಬಾಗಿಲು ಹಾಕ್ಕೋ... ' ಎಂದು  ಇನ್ನೂ  ಮಲಗಿರುವ ಮಗನಿಗೆ ಹೇಳಿ ವಠಾರ ದಾಟಿ ಮೇನ್ ರೋಡ್ ಗೆ ಬಂದು ಬಸ್ ಗೆ  ಕಾದು ನಿಂತ. 

ಚಳಿಗಾಲದ ಬೆಳಗಿನ ಶಿಫ್ಟ್ ಅವನಿಗಿಷ್ಟ. ಎದ್ದ ಕೂಡಲೇ ಚಳಿ ಎನಿಸಿದರೂ ಏಳು ಎಂಟು ಗಂಟೆಯಾಗುತ್ತಿದಂತೆ, ಸೂರ್ಯ ಕಿರಣಗಳು ತಂಪು ಗಾಳಿಯ ಜೊತೆ ಬೆರೆತು ಮೈಗೆ ಹಿತ ಎನಿಸುತ್ತಿತ್ತು. ರಾತ್ರಿ ಕೊರೆಯುವ ಚಳಿಯಲ್ಲಿ ಕೂರುವುದಕ್ಕಿಂತ ಬೆಳಗಿನ ಚಳಿ ಮಜವೆನಿಸುತ್ತಿತ್ತು.  ಸಮಯಕ್ಕೆ ಸರಿಯಾಗಿ ITPL ಕಡೆ  ಹೋಗುವ ಬಸ್ ಬರುತ್ತಿದ್ದಂತೆ, ತನ್ನ ಇವತ್ತಿನ ದಿನ ಚೆನ್ನಾಗಿದೆಯೆಂದು  ಎಣಿಸಿ ಕಂಪನಿಯ ಒಳಹೊಕ್ಕ. ಎಂದಿನಂತೆ  ಎಲ್ಲಾ ಮಹಡಿಯ, ಎಲ್ಲಾ ಕೋಣೆಯ ಅನವಶ್ಯಕ ದೀಪಗಳನ್ನಾರಿಸಿ ಬೇಸ್‌ಮೆಂಟ್ನಲ್ಲಿ ನಡೆಯುವ ಮೀಟಿಂಗ್ ಗೆ ಬಂದು ಸಾಲಲ್ಲಿ ನಿಂತ. ತನ್ನ ತಿಳಿನೀಲಿ ಯೂನಿಫಾರ್ಮ್ನ ಇನ್ಶರ್ಟ್ ಒಮ್ಮೆ ಸರಿ ಮಾಡಿಕೊಂಡು, ಐ ಡಿ ಕಾರ್ಡ್ ನಲ್ಲಿ ಬರೆದಿದ್ದ 'ರಮಾಕಾಂತ ಗೌಡ.. ಬ್ಲೂ ಸ್ಟಾರ್ ಸೆಕ್ಯೂರಿಟೀ...' ಹೆಸರನ್ನ  ದಿನಚರಿಯಂತೆ ಮತ್ತೊಮ್ಮೆ ಓದಿದ. ತನ್ನ ತಿಳಿ ನೀಲಿಯ ಅಂಗಿಯ ಜೇಬಿನ ಮೇಲಿದ್ದ ಘಾಡ ನೀಲಿ ಬಣ್ಣದ  ನಕ್ಷತ್ರದ ಚಿಹ್ನೆ ಎಂದಿನಂತೆ ಉತ್ಸಾಹ ತುಂಬಿತು. ಅದನ್ನೊಮ್ಮೆ ನೋಡಿ ಸೆಕ್ಯುರಿಟಿ ಕೆಲಸ, ಯಾವುದೇ ಪೋಲೀಸ್ ಕೆಲಸದವನಿಗೂ ತಾನೆನೂ ಕಮ್ಮಿಯಿಲ್ಲ ಅಂದುಕೊಂಡು ಪೂರ್ತಿ ದಿನ ನಿಂತು ಮಾಡಬೇಕಾದ ಕೆಲಸಕ್ಕೆ ಸ್ಪೂರ್ತಿ ತಂದುಕೊಂಡ. 

ಈ ಕಂಪನಿಗೆ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುವ ಮೊದಲು ಎ ಟಿ ಎಂ ಒಂದರಲ್ಲಿ ಕೆಲಸ ಮಾಡುತ್ತಿದ್ದ ರಮಾಕಾಂತ. ಎ ಟಿ ಎಂ ಕೆಲಸ ಮೊದಮೊದಲು ಅವನಿಗೆ ವಿಚಿತ್ರ ಅನ್ನಿಸತೊಡಗಿತ್ತು. ಬೆಳಿಗ್ಗೆಯಿಂದ ರಾತ್ರಿಯವರೆಗೆ ಸುಮ್ಮನೇ ತನ್ನ ಪಾಡಿಗೆ ತಾನು ಕೂತಿರುತಿದ್ದ. ಜನ ಅವರ ಪಾಡಿಗೆ ಅವರು ದುಡ್ಡು ತೆಗೆದುಕೊಂಡು ಹೋಗುತ್ತಿದ್ದರು. ಪಕ್ಕದಲ್ಲಿದ್ದ ದರ್ಶಿನಿಯಲ್ಲಿ ಹೊತ್ತುಹೊತ್ತಿಗೆ ಚಾ ಕುಡಿಯುವುದು, ದಿನಕ್ಕೆರಡು ಬಾರಿ ಕಸ ಗುಡಿಸುವುದು  ಬಿಟ್ಟರೆ ವಾರದಲ್ಲೆರಡು ದಿನ ಎ ಟಿ ಎಂ ನಲ್ಲಿ ದುಡ್ಡಿಲ್ಲ, ಹಾಳಾಗಿದೆ ಎಂದು ಜನರನ್ನ ವಾಪಸ್ ಕಳಿಸುವುದೇ ಅವನ ಮುಖ್ಯ ಕೆಲಸವಾಗಿತ್ತು. ದುಡ್ಡಿಲ್ಲದ ಸಿಟ್ಟಿಗೆ ಜನ ಬಾಂಕ್ ಗೆ, ಇವನಿಗೆ ಹಿಡಿಶಾಪ ಹಾಕಿ ಗೊಣಗುತ್ತಾ  ಹೋಗುತ್ತಿದ್ದರು. ಹೀಗೆ ಒಂದು ದಿನ ಕಸ ಗುಡಿಸುತ್ತಿದ್ದವ ಅಲ್ಲಿ ಬಿದ್ದಿರುವ ಮಿನಿ ಸ್ಟೇಟ್ಮೆಂಟ್ ಕೈಗೆತ್ತಿಕೊಂಡ. ಸಮಯ ಹೇಗೂ ಕಳೆಯುತ್ತಿರಲಿಲ್ಲ. ಕುತೂಹಲಕ್ಕಾಗಿ ಎಲ್ಲವನ್ನೂ ನೋಡುತ್ತಾ ಹೋದ. ಐನೂರು, ಸಾವಿರ, ನಲವತ್ತು ಸಾವಿರ, ಎರಡು ಸಾವಿರ,  ನಾಲ್ಕು ಲಕ್ಷ ಹೀಗೆ ದುಡ್ಡೇ ಇಲ್ಲದ ಅಕೌಂಟ್ನಿಂದ ಹಿಡಿದು ಲಕ್ಷಗಟ್ಟಲೇ ದುಡ್ಡಿರುವ ಸ್ಲಿಪ್ಗಳು ಕಣ್ಣಿಗೆ ಬೀಳುತ್ತಿತ್ತು. ಏನಾದರೂ ಮಾಡಿ ತಾನೂ ಇಷ್ಟೆಲ್ಲಾ ಸಂಪಾದಿಸಲು ಸಾಧ್ಯವಾ ಅಂತ ಆಲೋಚನೆಯಲ್ಲಿ ಮುಳುಗಿಹೋಗಿರುತ್ತಿದ್ದ.

ಒಂದು ದಿನ ಅಚಾನಕ್ಕಾಗಿ ಅದೇ ಏರಿಯಾದಲ್ಲಿದ್ದ ಸಿನಿಮಾ ನಟಿಯೊಬ್ಬಳು  ಅಲ್ಲಿ ದುಡ್ಡು ತೆಗೆಯಲು ಬಂದಾಗ ಅಚ್ಚರಿ ಕಣ್ಣುಗಳಲ್ಲಿ ಅವಳನ್ನ ನೋಡಿದ್ದ. ಅವನಿಗೆ ತಕ್ಷಣಕ್ಕೆ ಹೇಗೆ ಪ್ರತಿಕ್ರಿಯಿಸಬೇಕೆಂದು ತೋಚಲಿಲ್ಲ.  ಒಂದು ಸಲ್ಯೂಟ್ ಹೊಡೆದು,  'ಮೇಡಂ .. ನಿಮ್ಮನ್ನ ನೋಡಿದ್ದು ನನ್ನ ಅದೃಷ್ಟ ಮೇಡಂ ..' ಎಂದವನೇ ಸೆಕ್ಯೂರಿಟೀ ಹಾಜರಿ ಪುಸ್ತಕದ ಕೊನೆಯ ಹಾಳೆ ತೆಗೆದು 'ಏನಾರ ಒಂದು ಲೈನ್ ಬರೆದು, ಆಟೋಗ್ರಾಫ್ ಹಾಕಿ ಮೇಡಂ.."  ಎಂದು ಹೇಳಿ ಅವಳ ಮುಂದಿಟ್ಟಿದ್ದ. ಆ ನಟಿಮಣಿ ಅಲ್ಲೊಂದು ಗೆರೆ ಗೀಚಿ ಸಾಕೆನಪ್ಪ ಇಷ್ಟು ಉದ್ದದ ಲೈನ್ ಅಂತ ಹೇಳಿ ನಕ್ಕಿದ್ದಳು. "ಮೇಡಂ .. ತಮಾಷಿ ಮಾಡಬ್ಯಾಡಿ  ಒಂದು ಸಾಲು.. ಏನಾರ ಬರೀರಿ..  "  ಅಂತ ಅಂಗಲಾಚಿದ್ದ. ಕೊನೆಗೂ 'ಒಲವು..' ಅವಳ ಮೊದಲ ಸಿನೆಮಾದ ಹೆಸರನ್ನಷ್ಟೇ ಬರೆದು ಸಹಿ ಹಾಕಿದ್ದಳು ಆ ಸಿನೆಮಾ ನಟಿ.  ಅವಳನ್ನ ಭೇಟಿಯಾಗಿದ್ದು  ಅವನಿಗೆ ಹೇಳತೀರದ ಸಂಭ್ರಮವಾಗಿತ್ತು. ಅದರಲ್ಲೂ ಏನೋ 'ಲವ್ವು' ಅಂತ ಬರೆದಿರುವುದು  ಓದಿ ಅವತ್ತು ಅವನಿಗೆ ವಿಚಿತ್ರ ಸಂಭ್ರಮ. ಮನೆಗೆ ಹೋಗಿ ತನ್ನ ಮಗನಿಗೆ, ವಠಾರದವರಿಗೆ ಇದನ್ನ ವಿವರಿಸುವ ತನಕ ವಿರಮಿಸುವ ವ್ಯವಧಾನವಿರಲಿಲ್ಲ. ಕೊಂಚ ಹೊತ್ತು ಆಕಾಶದಲ್ಲಿ ತೇಲಾಡಿ ಭೂಮಿಗೆ ಮರಳಿದವನೇ ಅವಳ  ಅಕೌಂಚ್ನಲಿ ಎಷ್ಟು ದುಡ್ಡಿರಬಹುದು ಎಂಬ ಕುತೂಹಲ ತಡೆಯದಾದ. ಅವನನ್ನು ನೋಡಿದ ಸಂಭ್ರಮದಲ್ಲಿ ಮಿನಿ ಸ್ಟೇಟ್ಮೆಂಟ್ ಅಲ್ಲೇ ಎಸೆದಳೋ, ಹರಿದು ಹಾಕಿದಳೋ  ತಿಳಿಯದೇ ಅದರ ಹುಡುಕಾಟಕ್ಕೆ ಬಿದ್ದಿದ್ದ. ಕೊನೆಗೂ ಅದ್ಯಾವುದೆಂದು ಗೊತ್ತಾಗದೇ, ಇಪ್ಪತ್ತು ಲಕ್ಷ ಇದ್ದ ಒಂದು ಸ್ಲಿಪ್ ನೋಡಿ ಅದೇ ಅವಳದಿರಬೆಕೆನ್ದು ಊಹಿಸಿ  ಆ ಸಿನಿಮಾ ನಟಿಯ  ಬಳಿ ಎಷ್ಟು ದುಡ್ಡಿದೆ ಎಂಬುದು ತನಗೆ ಗೊತ್ತಿದೆ ಎಂದು ಸಿಕ್ಕಿದವರ ಮುಂದೆ ಕೊಚ್ಚಿಕೊಳ್ಳತೊಡಗಿದ. ತನ್ನ ಐದು ಸಾವಿರ ಸಂಬಳ ಎಷ್ಟು ವರ್ಷ ದುಡಿದರೆ ಇಷ್ಟಾಗಬಹುದೆಂದು ಲೆಕ್ಕ ಹಾಕಿ ತನ್ನ ಸ್ಥಿತಿಗೆ ಮರುಗುತ್ತಿದ್ದ. 

ಕೊನೆಕೊನೆಗೆ ಈ ಸ್ಟೇಟ್ಮೆಂಟ್  ನೋಡುವ ಅವನ ಖಯಾಲಿ  ಎಲ್ಲಿ ತನಕ ಬಂತೆಂದರೆ, ಯಾರಾದರೂ ಬರುತ್ತಿದ್ದಂತೆ ಅವರ ಚಹರೆ, ಡ್ರೆಸ್ಸು, ಸ್ಟೈಲು ನೋಡಿ ಅವರು ಎಷ್ಟು ದುಡ್ಡಿಟ್ಟಿರಬಹುದೆಂದು ಊಹೆ ಮಾಡುತ್ತಿದ್ದ. ಅವರು ಹೋಗುತ್ತಿದ್ದಂತೆ, ಡಸ್ಟ್‌ಬಿನ್ನಿಂದ ತೆಗೆದ ಸ್ಲಿಪ್ ನೋಡಿ, ತನ್ನ ಊಹೆ ಸರಿಯಿದ್ದರೆ ಮನಸಲ್ಲೇ ಬೀಗುತ್ತಿದ್ದ. ಹೀಗೆ  ಬರಬರುತ್ತಾ  ರಾತ್ರಿ ಮಲಗಿದರೆ ಸಾಕು, ದುಡ್ಡಿನ ಕಟ್ಟು ಮನೆಯಲ್ಲಿ ಯಾರೋ ತಂದು ಇಟ್ಟನ್ತೆ, ಎ ಟಿ ಎಂ ಕಳುವು ತಾನೇ ಮಾಡಿದಂತೆ, ಯಾರನ್ನೋ ದೋಚಿದಂತೆ ಕನಸು ಬೀಳಲಾರಂಭಿಸಿದವು. ಬೆಳಿಗ್ಗೆ ಹೊತ್ತಲ್ಲಿ ತಾನು ಕೆಟ್ಟ ಯೋಚನೆ ಮಾಡುತ್ತಿರುವುದರಿಂದಲೇ ಈ ರೀತಿ ಕನಸು ಬೀಳುತ್ತಿದೆ ಎಂದೆನಿಸಿ ತನ್ನ ಯೋಚನೆ ಧಾಟಿಯೇ ಅಸಹ್ಯವೆನಿಸಿ, ಈ ದುಡ್ಡಿನ ಪ್ರಪಂಚದಿಂದ ಹೇಗಾದರೂ ಹೊರಬಂದರೆ ಸಾಕೆಂದು ತನ್ನ ಕೆಲಸದ ಜಾಗ ಬದಲಾಯಿಸಿ ಎಂದು ಸೂಪರ್‌ವೈಸರ್ ಬಳಿ ಗೋಗರೆದಿದ್ದ. ಅಂತೂ ಇಂತೂ ಆರು ತಿಂಗಳಾದ ನಂತರ ಸಾಫ್ಟ್‌ವೇರ್ ಕಂಪನಿಗೆ ಸೆಕ್ಯೂರಿಟೀ ಗಾರ್ಡ್ ಆಗಿ ಅವನಿಗೆ ವರ್ಗವಾಗಿತ್ತು.   

 ಅದಕ್ಕೂ ಮುಂಚೆ ರಮಾಕಾಂತ ಏನು  ಮಾಡುತ್ತಿದ್ದ ಎನ್ನುವುದು ಯಾರಿಗೂ ಸರಿಯಾಗಿ ಗೊತ್ತಿರಲಿಲ್ಲ. ಸಿಕ್ಕಾಪಟ್ಟೆ ಕುಡಿಯುತ್ತಿದ್ದ, ಅವನ ಹೆಂಡತಿ ಅವನ ಕುಡಿತ ತಾಳಲಾರದೆ ಕಂಡಕ್ಟರ್ ಒಬ್ಬನ ಜೊತೆ ಓಡಿ ಹೋದಳು ಅನ್ನೋ ಸುದ್ದಿ ಹಬ್ಬಿತ್ತು. ಯಾರಾದರೂ ಅದರ ಬಗ್ಗೆ ಕೇಳಿದರೆ ಅವನಿಗೆ ವಿಪರೀತ ಸಿಟ್ಟು ಬರುತ್ತಿತ್ತು. ಆದರೆ ಸಿಟ್ಟನ್ನ ತೋರಿಸದೆ ಅಲ್ಲಿಂದ ಜಾಗ ಖಾಲಿ ಮಾಡುತ್ತಿದ್ದ. ಇವನ ಮಗನೂ ಇವನೆದುರಿಗೆ ಕುಡಿಯಲು ಪ್ರಾರಂಬಿಸಿದ್ದನಂತೆ. ಅದನ್ನು ನೋಡಿ ಅವಮಾನವಾಗಿ ಮಗನಿಗೂ ಬೈದು ತಾನೂ ಕುಡಿತ ಬಿಟ್ಟು ಈ ಕೆಲಸಕ್ಕೆ ಸೇರಿಕೊಂಡಿದ್ದ ಅನ್ನೋ ಸುದ್ದಿ ಅಲ್ಲಲ್ಲಿ ಹರಿದಾಡುತ್ತಿತ್ತು. ಹೇಗೆ ಬಿಟ್ಟ, ಯಾಕೆ ಬಿಟ್ಟ ಅನ್ನುವ ಬಗ್ಗೆ ವದಂತಿಗಳಿದ್ದರೂ ಅವನು ಕುಡಿತ ಬಿಟ್ಟಿದ್ದು ಮಾತ್ರ ಅವನ ವಠಾರದವರಿಗೆಲ್ಲ ಆಶ್ಚರ್ಯವಾಗಿತ್ತು. ಇದೆಷ್ಟು ದಿನದ ಆಟವೋ  ಇದನ್ನೂ ನೋಡೇಬಿಡೋಣ ಅಂದುಕೊಂಡಿದ್ದರು ಒಂದಿಷ್ಟು ಜನ. ತನ್ನ ಗಂಡನಿಗೂ ಹೀಗೆ ಸಾಕ್ಷಾತ್ಕಾರವಾದಲ್ಲಿ ತನಗೆ ದಿನಾ ಒದೆ ಬೀಳುವುದು ತಪ್ಪಬಹುದು ಅಂತ ಶಾಂತಮ್ಮ ಗಂಡನಿಗೆ ಬೆಳಗೆಲ್ಲಾ ಉಪದೇಶ ಮಾಡುತ್ತಿದ್ದಳು. ಆ ಸಿಟ್ಟಿಗೆ ಅವಳ ಗಂಡ ಮತ್ತೊಂದಿಷ್ಟು ಕುಡಿದು ಬರುತ್ತಿದ್ದ. ಉಪದೇಶ ಕೊಟ್ಟಷ್ಟು ಜಾಸ್ತಿ ಒದೆ ಬೀಳುತ್ತಿತ್ತು.

                      ಬೆಳಗಿನ ಮೀಟಿಂಗ್ ಮುಗಿಯುತ್ತಿದ್ದಂತೆ ಎಲ್ಲರೂ ಅವರವರ ಕೆಲಸದ ಜಾಗಕ್ಕೆ ಹೊರಡಲಾರಂಬಿಸಿದರು.  ಕಂಪನಿಗೆ ಬರುವ ಎಲ್ಲಾ ಕಾರುಗಳ ಕೆಳಗೆ ಕನ್ನಡಿಯಿಟ್ಟು ನೋಡುವುದು, ಡಿಕ್ಕಿ ತೆಗೆದು ಪರೀಕ್ಷಿಸುವುದು, ಪಾರ್ಕಿಂಗ್ ಸ್ಥಳದಲ್ಲಿ ಬೈಕ್, ಕಾರ್ ನಿಲ್ಲಿಸುವವರಿಗೆ ವಿಶಲ್ ಹೊಡೆಯುತ್ತಾ ದಾರಿ ತೋರಿಸುವುದು, ಪ್ರಾಜೆಕ್ಟ್ ನಡೆಯುವ ಮಹಡಿಗಳಲ್ಲಿ ಬಾಗಿಲು ಕಾಯುವುದು ಹೀಗೆ ಒಂದಿಲ್ಲೊಂದು ಕೆಲಸವಹಿಸಲಾಗುತ್ತಿತ್ತು. ಆದರೆ ಅವನಿಗಿಷ್ಟವಾದ ಕೆಲಸವೆಂದರೆ ರಿಸೆಪ್ಷನ್ ಡೆಸ್ಕ್ ನ ಬಳಿ ನಿಂತು ಕೆಲಸಕ್ಕೆ ಬರುವ ಎಲ್ಲರ ಐ ಡಿ ಕಾರ್ಡ್ ಮತ್ತು ಬಾಗ್ ಚೆಕ್ ಮಾಡುವುದು. ಕಾರು ಬೈಕುಗಳಲ್ಲದೇ ಮನುಷ್ಯರು ಅಂತ ಓಡಾಡುವ ಜಾಗ ಅದೊಂದೇ. ಅದಕ್ಕೂ ಮುಖ್ಯವಾದ ಕಾರಣ ಇನ್ನೊಂದಿತ್ತು. ಮೊಣಕಾಲು ತನಕ ಮಾತ್ರ ಮುಚ್ಚುತ್ತಿದ್ದ ಕಪ್ಪು ಸ್ಕರ್ಟ್ ಮೇಲೊಂದು ಬಿಳಿ ಷರ್ಟು ಕಪ್ಪು ಬ್ಲೇಸರ್ ಹಾಕಿ ತಲೆಗೂದಲನ್ನ ಮಟ್ಟಸವಾಗಿ ಬಾಚಿ ರಿಸೆಪ್ಶನ್ ಡೆಸ್ಕ್ನಲ್ಲಿ ಕೂತಿರುತ್ತಿದ್ದ ಮೇರಿ. ಅವಳ ನಸುಗೆಂಪು ಬಣ್ಣ ಅವನನ್ನ ಆಕರ್ಷಿಸುತ್ತಿತ್ತು. ಹಣೆಯ ಮೇಲಿನ ದೊಡ್ಡ ಮಚ್ಚೆಯನ್ನ ತನ್ನ ಕೂದಲಿಂದ ಮುಚ್ಚಿರುತ್ತಿದ್ದಳು. ಅದು ಮಚ್ಚೆಯೋ ಅಥವಾ ಹಾಗೆ ಅಗಲ ಬಿಂದಿ ಹೊಸ ಸ್ಟೈಲೋ ಎಂಬುದು ತಿಳಿಯದೆ ಹತ್ತಿರದಿಂದ ನೋಡಿ ತೀರ್ಮಾನಕ್ಕೆ ಬರಬೇಕೆಂದು ಅವಕಾಶಕ್ಕೆ ಕಾಯುತ್ತಿರುತ್ತಿದ್ದ. ಅವಳು ಬರುವಾಗ ಹೋಗುವಾಗ ಅವಳ ಕಾಲನ್ನೇ ನೋಡುವುದರಲ್ಲಿ ನಿರತನಾಗುತ್ತಿದ್ದ. ಅವಳನ್ನೊಮ್ಮೆ ಹೇಗಾದರೂ ಮಾತಾಡಿಸಬೇಕೆಂದು ದಾರಿ ಹುಡುಕುತ್ತಿರುತ್ತಿದ್ದವನಿಗೆ ಅವತ್ತು  ಐ ಡಿ ಕಾರ್ಡ್ ಮರೆತು ಬಂದ ಎಂಪ್ಲಾಯಿ ಒಬ್ಬನನ್ನ  ಇವಳೆದುರಿಗೆ ಕರೆದುಕೊಂಡು ಬರುವುದು ನೆಪವಾಗಿತ್ತು. ಅವಳನ್ನ  ನೋಡಿ  ಸುಮ್ಮನೇ ಹಲ್ಲು ಕಿರಿದ. ಎಂಪ್ಲಾಯಿ  ಬಳಿ ನಗುತ್ತಾ ಹೆಸರು, ಪ್ರಾಜೆಕ್ಟ್ ಕೇಳಿದ  ಅವಳು ಎಂದಿನಂತೆ ರಮಾಕಾಂತನನ್ನೊಮ್ಮೆ  ದುರುಗುಟ್ಟಿ ನೋಡಿದಳು. ಇವಳ ಅಂದಕ್ಕೂ ದುರುಗುಟ್ಟುವ ನೋಟಕ್ಕೂ ಸಂಬಂದವೇ ಇಲ್ಲವೆಂದು  ಬೈದು ತನ್ನ ಕೆಲಸ ಮುಂದುವರೆಸಿದ.

ಎ ಟಿ ಎಂ ಕೆಲಸ ಬಿಟ್ಟಾಗಿನಿಂದ ರಮಾಕಾಂತನಿಗೆ  ನೆಮ್ಮದಿ ಎನಿಸುತಿತ್ತು. ಸಮಯ ಮೊದಲಿನಷ್ಟು ದಂಡಿಯಾಗಿ ಬಿದ್ದಿರುತ್ತಿರಲಿಲ್ಲ. ಪರಿಣಾಮವಾಗಿ ಕೆಟ್ಟ ಆಲೋಚನೆಗಳು ಮೂಡುತ್ತಿರಲಿಲ್ಲ. ದುಡ್ಡಿನ ಭ್ರಮೆ ತೊಲಗಿ  ಭಯಾನಕ ಕನಸುಗಳು ಬೀಳುವುದು ನಿಂತು ಹೋಗಿತ್ತು. ಆದರೆ ಇತ್ತೀಚಿಗೆ ಅವನಿಗೆ  ಹಗಲುಗನಸೊಂದು ಶುರು ಆಗಿತ್ತು. ಆಫೀಸ್ ಗೆ ಬರುವ ಹೋಗುವವರನ್ನ ನೋಡುತ್ತಾ ತನ್ನ ಮಗನಿಗೂ ಇಲ್ಲೇ ಕೆಲಸ ಸಿಕ್ಕರೆ ಹೇಗಿರುತ್ತೆಂದು ಆಲೋಚಿಸತೊಡಗಿದ್ದ. ಈ ವರ್ಷ ಹೇಗಿದ್ದರೂ ಅವನ ಡಿಗ್ರಿ ಮುಗಿಯುತ್ತದೆ, ಯಾರನ್ನಾದರೂ ಪರಿಚಯ ಮಾಡಿಕೊಂಡು ಅವನಿಗೊಂದು ಕೆಲಸ ಕೊಡಿಸಬೇಕೆಂದು ಅನ್ನಿಸುತ್ತಿದ್ದಾದರೂ ಯಾರನ್ನು ಕೇಳುವುದು ಎಂದು ತೋಚದೆ ಸುಮ್ಮನಾಗುತ್ತಿದ್ದ. ಮಗ ಇಲ್ಲಿ ಶೂ ಟೈ ಹಾಕಿಕೊಂಡು ಓಡಾಡಿದಂತೆಯೂ, ಒಳಗಿನ ಚಂದದ ಕ್ಯೂಬಿಕಲ್ ನಲ್ಲಿ ಕಂಪ್ಯೂಟರ್ ಮುಂದೆ ಕುಳಿತುಕೊಂಡಂತೆಯೂ, ಕ್ಯಾಂಟೀನ್ನಲ್ಲಿ ಚಂದದ ಹುಡುಗಿಯರ ಜೊತೆ ಹರಟೆ ಹೊಡೆಯುತ್ತಾ  ಪಿಜ್ಜಾ ತರಿಸಿಕೊಂಡು ತಿಂದಂತೆಯೂ, ತಾನು ಈ ಕೆಲಸ ಬಿಟ್ಟು ಸುಖವಾಗಿ ಮನೆಯಲ್ಲಿ ಕೂತು ನಿವೃತ್ತಿ ಜೀವನ ಸಾಗಿಸಿದಂತೆಯೂ  ಭಾಸವಾಗುತ್ತಿತ್ತು. ಅವನಿಗೆ ಕೆಲಸ ಸಿಗಬೇಕೆಂದು ತಾನು ಬಯಸುತ್ತಿರುವುದು ತನ್ನ ಸ್ವಾರ್ಥವೋ ಅಥವಾ ಮಗನ ಪ್ರೀತಿಗೋ .. ಕೇಳಿಕೊಂಡ ಪ್ರಶ್ನೆಗೆ ಉತ್ತರ ಸಿಗಲಿಲ್ಲ.

ಮಧ್ಯಾಹ್ನ ಆಗುತ್ತಿದ್ದಂತೆ ಒಂದೇ ಸಮನೆ ಮಾಡಿದ್ದೇ ಕೆಲಸ ಮಾಡಿ ಮಾಡಿ ಬೋರಾಗಲಾರಂಭಿಸಿತ್ತು. ಕಂಪನಿಗೆ ಬರುವವರ, ಹೋಗುವವರ ಸಂಖ್ಯೆಯೂ ಕಡಿಮೆಯಾಗಿತ್ತು. ಕೆಲಸದ ವೇಳೆಯಲ್ಲಿ ಕೆಲಸವಿಲ್ಲದಿದ್ದರೂ ಕೂರುವ ಹಾಗಿಲ್ಲ. ಅಲ್ಲೇ ಅತ್ತಿಂದಿತ್ತ ಸುತ್ತಾಡುತ್ತಾ ತಾನು ಇನ್ನೆಷ್ಟು ವರ್ಷ ಹೀಗೆ ಹುಚ್ಚು ಕೆಲಸ ಮಾಡುತ್ತಿರಬೇಕೋ ಅಂತ ತನಗೆ ತಾನೇ ಕೇಳಿಕೊಂಡ. ಊಟ ಮಾಡಿ ಆಗ ತಾನೇ ಬಂದು ಕೂತ  ಮೇರಿಯನ್ನ  ಇವತ್ತು ಹೇಗಾದರೂ ಮಾಡಿ ಮಾತಾಡಿಸಬೇಕೆಂದು ನಿರ್ಧರಿಸಿದ. ಅವಳೊಬ್ಬಳೇ ರಿಸೆಪ್ಶನ್ ಡೆಸ್ಕ್ ಬಳಿ ಇರುವುದನ್ನ ನೋಡಿ ಧೈರ್ಯ ಮಾಡಿ ಅವಳಲ್ಲಿಗೆ ಹೋದ. ತನ್ನ ಮಗನ ಕೆಲಸದ  ಬಗ್ಗೆಯೂ ಕೇಳಿದಂತೆ ಆಯಿತು, ಇತ್ತ ಅವಳೊಡನೆ ಮಾತಾಡಿದಂತೆಯೂ ಆಯಿತು ಅನ್ನುವುದು ಇವನ ಲೆಕ್ಕಾಚಾರ. 'ಊಟ ಆಯ್ತಾ ಮೇಡಂ ... ಈ ಕಂಪನೀಲಿ ಕೆಲ್ಸ ಮಾಡಕ್ಕೆ ಏನು ಓದಿರ್ಬೇಕು ಮೇಡಂ' ಅಂತ ಒಂದೇ ಉಸಿರಲ್ಲಿ, ಅವಳು ದುರುಗುಟ್ಟಿ ನೋಡುವುದಕ್ಕೆ ಮುಂಚೆಯೇ ಕೇಳಿ ಮುಗಿಸಿದ. "ಸೆಕ್ಯೂರಿಟೀ ಕೆಲಸ ಮಾಡೋಕೆ ಓದೋಕೆ ಬರಿಯೋಕೆ ಅಷ್ಟು ಬಂದರೆ ಸಾಕು" ಉಡಾಫೆಯಿಂದ ಉತ್ತರಿಸಿ ನಕ್ಕಳು. ಇಷ್ಟು ಹತ್ತಿರದಿಂದ ಅವಳ ನಗುವನ್ನ ಮೊದಲ ಬಾರಿಗೆ ನೋಡಿದ್ದ. ತನ್ನೆದುರಿಗೇ ನಕ್ಕಾಗ ಇನ್ನೂ ಚಂದ ಕಂಡಳಾದರೂ ಮರುಕ್ಷಣ ಅವಮಾನವಾಯಿತೆಂದೆನಿಸಿ ಅವಳ ಮುಖ ಮತ್ತೆ ನೋಡಲಾಗದೇ ವಾಪಸು ಬಂದಿದ್ದ. ಹಣೆಯ ಮೇಲಿನದು ಮಚ್ಚೆಯೋ ಅಥವಾ ಬಿಂದಿಯೋ ಅವನ  ಅನುಮಾನ ಹಾಗೆಯೇ ಉಳಿಯಿತು. 

ಅವತ್ತು ಎಂದಿಗಿಂತ ಬೇಗ ಮನೆಗೆ ಬಂದಿದ್ದ ರಮಾಕಾಂತ ಗೌಡ. ಗಡಿಬಿಡಿಯಲ್ಲಿ ಬಂದವನೇ ಮನೆ ತಲುಪುವ ಮೊದಲೇ 'ರಮೇಶ.. ರಮೇಶ...' ಅಂತ ಕೂಗುತ್ತಾ ಮನೆ ಬಾಗಿಲು ಇನ್ನೂ ಹಾಕಿರುವುದನ್ನ ನೋಡಿ ಮಗ ಬರುವ ಸಮಯ ಇನ್ನೂ ಆಗಿಲ್ಲವೆಂದು ನೆನೆದು  ತನ್ನ ಬಳಿ ಇದ್ದ ಮತ್ತೊಂದು ಕೀ ಇಂದ ಮನೆ ಬೀಗ ತೆರೆದ. ಮೇರಿಯ ಮಾತು ಅವನನ್ನು ಚುಚ್ಚುತ್ತಿತ್ತು. ಮಗನ ಮಾರ್ಕ್ಸ್ ಕಾರ್ಡ್ ತೆಗೆದು ಅವಳ  ಮುಂದಿಟ್ಟು ಇಷ್ಟು ಓದಿದ್ರೆ ಸಾಕಾ ಅಂತ ಕೇಳಿ ತಿರುಗೇಟು ಕೊಡಬೇಕು ಎಂದು ತೀರ್ಮಾನ ಮಾಡಿದ್ದ. ಒಳಕೋಣೆ ಹೊಕ್ಕು ಮೇಲಿದ್ದ ಮಗನ ಟ್ರಂಕನ್ನ ತೆಗೆದು ಕೆಳಗಿಟ್ಟ. ಟ್ರಂಕಿನ  ಒಳಗಿದ್ದ ಹಸಿರು ರಟ್ಟಿನ ಫೈಲ್ ತೆರೆದವನಿಗೆ ಅದರಲ್ಲಿ P U C ಯ ಎರಡು ಮಾರ್ಕ್ಸ್ ಕಾರ್ಡ್ ಸಿಕ್ಕವು. ಎರಡರಲ್ಲೂ ಇವನದೇ ಹೆಸರು.   ಮೊದಲೊಮ್ಮೆ ಫೇಲ್ ಆಗಿದ್ದು ಮರೆಮಾಚಿದನಾ. ಪಾಸಾಗಿದ್ದೆನೆಂದು  ಸುಳ್ಳು ಬೊಗಳಿದನಾ. ಅವನು ಬರುತ್ತಿದಂತೆ ಎರಡು ಎರಡು ಬಾರಿಸಿ ಕೇಳಬೇಕು ಎಂದು ನಿರ್ಧರಿಸಿದ. ಮತ್ತೆ ಟ್ರಂಕಿನ ತುಂಬಾ ತಡಕಾಡಿದ. ಡಿಗ್ರಿ ಮೊದಲ ಸೆಮಿಸ್ಟರ್  ಮಾರ್ಕ್ಸ್ ಕಾರ್ಡ್ ಬಟ್ಟೆಗಳ ಮಧ್ಯೆ ಅನಾಥವಾಗಿ ಬಿದ್ದುಕೊಂಡಿತ್ತು. ದಪ್ಪ ಅಕ್ಷರಗಳಲ್ಲಿ  FAIL ಎಂದು ಬರೆದಿತ್ತು. ವಿಷಯ ನೋಡುತ್ತಾ ಬಂದ. ಕನ್ನಡ ಒಂದು ಬಿಟ್ಟರೆ ಮತ್ತೆಲ್ಲಾ ಫೇಲ್. ಉಳಿದ ಸೆಮಿಸ್ಟರ್ ನ ಯಾವ ಮಾರ್ಕ್ಸ್ ಕಾರ್ಡ್  ಕೂಡ ಅಲ್ಲಿರಲಿಲ್ಲ. ಇಷ್ಟು ದಿನ ತನಗೆ ಮೋಸ  ಮಾಡಿದ ಬೋಸುಡಿ ಮಗ ಎಂದುಕೊಂಡ ಅವನ ಕೋಪ ತಾರಕಕ್ಕೇರಿತ್ತು. 

ಮತ್ತೆ ಟ್ರಂಕ್ ತಡಕಾಡಿದ ಅವನಿಗೆ ಟ್ರಂಕಿನ ತಳದಲ್ಲಿ ಹಾಸಿದ ಪೇಪರ್ ನ ಕೆಳಗೆ ಕಂಡಿದ್ದು, ಅವನ ಹೆಂಡತಿಯ ಫೋಟೋ. ಅವಳು ಓಡಿ ಹೋಗಿ ಇನ್ನೊಂದು ತಿಂಗಳಿಗೆ ೧೦ ವರ್ಷ. ಅವಳ ಮುಖವೇ ಮರೆತು ಹೋಗಿತ್ತು. ಅವಳು ಬಿಟ್ಟು ಹೋದ ದಿನದಿಂದ ಅವಳ ಫೋಟೋ ನೋಡುವುದಿರಲಿ ಅವಳ ಬಗ್ಗೆ ಒಂದೇ ಒಂದು ಮಾತನ್ನಾಡಿರಲಿಲ್ಲ. ಅವಳ ಕಂಡಕ್ಟರ್ ಮೇಲಿನ ಪ್ರೀತಿಗಾಗಿ ಅವನ  ಕುಡಿತದ ಕಾರಣ ಹೇಳಿ ಬಿಟ್ಟು ಹೋದ ಅವಳು ಹೋಗುವ ಮುಂಚೆ ವಠಾರದಲ್ಲಿ, ನೆಂಟರಲ್ಲಿ ಎಲ್ಲರಿಗೂ ಇವನ ಬಗ್ಗೆ ಸಾಕಷ್ಟು ಹೇಳಿ  ಇನ್ನಿವನ ಜೊತೆ ಇರಲಾರೆ ಎಂದು ಹೋದವಳು, ಬಿಟ್ಟು ಹೋದ ಒಂದೇ ತಿಂಗಳಿಗೆ ಆ ಕಂಡಕ್ಟರ್ ಜೊತೆ ಮದುವೆಯಾಗಿದ್ದಳು. ಮಗ ಅವಾಗ ಏಳನೇ ಕ್ಲಾಸ್ ನಲ್ಲಿ ಓದುತ್ತಿದ್ದ. ಮನೆಗೆ ಬಂದವನೇ ಅಮ್ಮ ಎಲ್ಲಿ ಕಾಣ್ತಿಲ್ಲ, ಅಂತ ಕೇಳಿದರೆ ಅವನು  ಉತ್ತರಿಸಿರಲಿಲ್ಲ. ಪಕ್ಕದ ಮನೆಯ ಶಾಂತಮ್ಮ ಅವನಿಗೆ ವಿವರಿಸಿದ್ದಳು. "ನಿಮ್ಮಮ್ಮ ಒಡೊಗಯ್ತೆ  ಕಣೋ .. ನಿನ್ನ ಅಪ್ಪನ್ನ ಜೊತೆ ಏಗಕ್ಕಾಗಲ್ವನ್ತೆ ಅವಳಿಗೆ... ".  ಅವತ್ತಿಂದ ರಮಾಕಾಂತನ ಕುಡಿತ ಇನ್ನೂ ಹೆಚ್ಚಿತ್ತು. ಮಗನಿಗೆ ಅಡಿಗೆ ಮಾಡಿಟ್ಟು ಕುಡಿಯಲು ಹೋದರೆ ಮನೆಗೆ ಬರುವಾಗ ಮದ್ಯರಾತ್ರಿ. ರಮೇಶ ಮನೆಯಲ್ಲಿ ಮಾತನ್ನೇ ಆಡದೆ ಎಷ್ಟೋ ವರ್ಷಗಳಾಗಿತ್ತು. ಅಪ್ಪ ಮಾಡಿದ ಅಡಿಗೆ ಸೇರುತ್ತಿರಲಿಲ್ಲ. ಅಮ್ಮನ ಹಾಡಿರುತ್ತಿರಲಿಲ್ಲ. ಜಗಳ ಮಾಡಲೂ ಜೊತೆಯಿರಲಿಲ್ಲ. ಕಾಲೇಜಿಗೆ ಸೇರಿದ ಮೇಲೆ ಮನೆಗೆ ಲೇಟಾಗಿ ಬರಲು ಶುರು ಮಾಡಿದ. ತನ್ನ ಗೆಳೆಯರ ಜೊತೆ ಕೂತು ಹರಟೆ ಹೊಡೆಯುತ್ತಿದ್ದರೆ ಮನೆಗೆ ಬರಬೇಕೆಂದಿನಿಸುತ್ತಿರಲಿಲ್ಲ. ಹೀಗೆ ಗೆಳೆಯರ ಜೊತೆ ಕೂತು ಕುಡಿಯುವುದು ಕೂಡ ಅಭ್ಯಾಸವಾಯಿತು. ಒಂದಿನ ಕುಡಿದ ಮೇಲೆ ಉಳಿದದ್ದೊಂದಷ್ಟನ್ನ ನಶೆಯಲ್ಲಿ ಮನೆಗೆ ತಂದು ಕುಡಿಯಲಾರಂಭಿಸಿದ್ದ. ರಮಾಕಾಂತನಿಗೆ ಅದೇನೆನ್ನಿಸಿತೋ ಏನೋ ಅವತ್ತಿಂದ ಕುಡಿತ ಬಿಟ್ಟವನು ಕೆಲಸಕ್ಕಾಗಿ ಅಲೆಯಲು ಶುರು ಮಾಡಿದ್ದ. ಹೆಂಡತಿಯ ಫೋಟೋ ನೋಡುತ್ತಿದಂತೆ ಎಲ್ಲವೂ ಒಮ್ಮೆಲೇ ಕಣ್ಣ ಮುಂದೆ ಸುಳಿದು ಹೋಯಿತು. ಎಲ್ಲಾ ಸರಿ ಇದ್ದಿದ್ದರೆ ಮಗನೂ ಸರಿ ಇರುತ್ತಿದ್ದ ಅನಿಸಲು ಆರಂಭವಾಯಿತು. ಹೆಂಡತಿಯ ಮೇಲಿನ ಕೋಪ ಹೆಚ್ಚಾಗುತ್ತಿದ್ದಂತೆ ಮಗನ ಮೇಲೆ ಕನಿಕರ ಹೆಚ್ಚಾಗಿ ಅವನ ಮೇಲಿನ ಕೋಪ ಶಾಂತವಾಯಿತು. ಮಗ ಮನೆಗೆ ಬಂದವನೇ ಅವನಿಗೆ ಕೇಳಿದ "ಕಾಲೇಜ್ ಗೆ ಹೋಗೋದು ನಿಲ್ಸಿದಿಯಾ... " ಎರಡು ವರ್ಷ ಆಯಿತು ಅಂತ ಗಟ್ಟಿ ದನಿಯಲ್ಲಿ ಆ ಕಡೆಯಿಂದ ಬಂದ ಉತ್ತರಕ್ಕೆ ಮತ್ತೆ ಪ್ರಶ್ನೆ ಹಾಕುವ ಮನಸ್ಸು ಬರಲಿಲ್ಲ ಅಥವಾ ಧೈರ್ಯ ಸಾಲಲಿಲ್ಲ. 

"ಎದ್ದವನೇ ITPL  ಬಸ್ ಹತ್ತಿ ನಾನು ಕೆಲಸ ಮಾಡೋ ಜಾಗಕ್ಕೆ ಬಾ.. ಅಡ್ರೆಸ್ ದಿಂಬಿನ ಕೆಳಗೆ ಇಟ್ಟಿದಿನಿ.." ಎಂದು ರಮೇಶನಿಗೆ ಹೇಳಿ ಮತ್ತದೇ ಶರ್ಟು, ಪ್ಯಾಂಟು, ಸಾಕ್ಸ್ ಮತ್ತೊಂದು ದಿನಕ್ಕೆ ವಿಸ್ತರಿಸಿ ಕಂಪನಿ ಒಳ ಸೇರಿದ. ಸುಮಾರು ಹತ್ತು ಗಂಟೆಯ ಹೊತ್ತಿಗೆ ರಮೇಶ ಅಲ್ಲಿಗೆ ಬಂದ. ಅವನನ್ನ ಸೂಪರ್ವೈಸರ್ ಬಳಿ ಕರೆದುಕೊಂಡು ಹೋಗಿ "ಇವನು ನನ್ನ ಮಗ... PUC  ಓದಿದಾನೆ... ಇಲ್ಲೇ ಒಂದು ಕೆಲಸ ಕೊಡ್ಸಿ" ಅಂಗಲಾಚಿದ. ಮಾರನೆಯ ದಿನದಿಂದಲೇ ಕೆಲಸಕ್ಕೆ ಸೇರಿಕೊಳ್ಳಲಿ ಅಂದಿದ್ದ ಸೂಪರ್ವೈಸರ್. 

ಮಾರನೆಯ ದಿನ ರಿಸೆಪ್ಶನ್ ಡೆಸ್ಕ್ ಬಳಿ ಹೋಗಿ ಮಗನಿಗೆ ಟೆಂಪರರಿ I D ಕಾರ್ಡ್ ಮಾಡಿಸಲು ಮೇರಿಯ ಮುಂದೆ ಬಂದು ನಿಂತ. ಮೊನ್ನೆ ತಾನು ನಕ್ಕಿದ್ದು  ರಮಾಕಾಂತನಿಗೆ ಬೇಜಾರಾಯಿತೆಂದು ತಿಳಿದು ತಪ್ಪು ಭಾವಿಸದಿರಲಿ ಎಂದು ಮೊದಲ ಬಾರಿಗೆ "ಏನ್ರಿ ರಮಾಕಾಂತ್... ಆಯ್ತಾ ತಿಂಡಿ... ಇವನು ನಿಮ್ಮ ಮಗನಾ... ನಿಮಗೆ ಇಷ್ಟು ದೊಡ್ಡ ಮಗ ಇದಾನೆ ಅಂತ ಗೊತ್ತೇ ಆಗಲ್ಲ ನೋಡಿ.. "  ಅವನನ್ನ ಮಾತಾಡಿಸಿದ್ದಳು. ಮಾತಾಡುವ ಉತ್ಸಾಹ ಇವನಿಗಿರಲಿಲ್ಲ. ಹ್ಮ್ ಎಂದಷ್ಟೇ ಹೇಳಿ ಸುಮ್ಮನಾದ. ಅವಳ ನಗು ಮತ್ತೆ ಇವನನ್ನ ಅಣಕಿಸಿದಂತಾಯಿತು. ಮತ್ತೆ ಮುಖ ಎತ್ತಿ ಅವಳನ್ನ ನೋಡುವ ಉತ್ಸಾಹವಿರಲಿಲ್ಲ. ಮಚ್ಚೆಯೋ ಬಿಂದಿಯೋ ಕುತೂಹಲ ಅಲ್ಲಿಗೇ ಮುಗಿದು ಹೋಗಿತ್ತು. ಮಗನಿಗೆ  ರಿಸೆಪ್ಶನ್ ಡೆಸ್ಕ್ ಬಳಿ ಐ  ಡಿ ಕಾರ್ಡ್, ಬಾಗ್ ಪರೀಕ್ಷಿಸುವ ಕೆಲಸ ವಿವರಿಸಿದ. ಮಗನ ಹೊಸ ಯುನಿಫಾರ್ಮ್ ನ ನೀಲಿ ನಕ್ಷತ್ರದ ಚಿಹ್ನೆ ನೋಡಿ ಕಣ್ಣಿಗೆ ಮಂಪರು ಹತ್ತಿದಂತಾಯಿತು. ಎಲ್ಲೋ ಇದ್ದ  ಮೋಡವೊಂದು ತೇಲಿ ಬಂದು ಆಕಾಶದಲ್ಲಿ ನಕ್ಷತ್ರ ಕರಗಿ ಹೋಗುವಂತೆ ನೀಲಿ ನಕ್ಷತ್ರದ ಚಿಹ್ನೆ ಮಸುಕು ಮಸುಕಾಯಿತು. ತಕ್ಷಣ ಅಲ್ಲಿಂದ ಹೊರಟು ಬೇಸ್ಮೆಂಟ್ ಗೆ ತೆರಳಿ  ಮತ್ತೊಂದು ಹೊಸ ಕನಸೊಂದಕ್ಕೆ ತೆರೆದುಕೊಳ್ಳಲು ಕಾಯುತ್ತಾ ಕೂತ.