ನವೆಂಬರ್ 17, 2013

ಪದ್ದಿ ಅಂಗಡಿ

                                                                  ಪದ್ದಿ ಅಂಗಡಿ 





[ಲೋಕದರ್ಶನ ದೀಪಾವಳಿ ವಿಶೇಷಾಂಕ ೨೦೧೩ರಲ್ಲಿ ಪ್ರಕಟವಾದ ಕಥೆ]

'ಇಟ್ಕೊಂಡಿರದು ಹೆಂಡದಂಗಡಿ, ಮಾಡ್ತಾ ಇರೋದು ಉಪದೇಶ.. ಸರಿ ಹೋಯ್ತು ' ಅವನಾಡಿದ ಮಾತು ಅವಳ ತಲೆಯಲ್ಲಿನ್ನೂ ಕೊರೆಯುತ್ತಿತ್ತು. ಇದಕ್ಕಿಂದ ಸಾವಿರ ಪಾಲು ಕೆಟ್ಟ ಬೈಗುಳ ಕೇಳಿದ ಅವಳಿಗೆ ಇದೇನು ಅಂತಹ ಬೈಗುಳ ಅಲ್ಲದಿದ್ದರೂ ಹೇಳಿದ್ದು ಅವನಾಗಿದ್ದರಿಂದ, ಕೇಳಿದ್ದು ನಿಜವಾಗಿದ್ದರಿಂದ ಆ ಮಾತು ಅವಳಲ್ಲಿ ನಾಟಿತ್ತು. ಅಲ್ಲಿಂದ ಎದ್ದು ಹೋಗಿ ಅಂಗಡಿಯ ಹಿಂಬದಿಯ ಕತ್ತಲಲ್ಲಿ ಕಳೆದುಹೊಗಿದ್ದಳು.

ಮಣ್ಣಿನ ಗೋಡೆಯ, ಹಂಚಿನ ಮಾಡಿನ ಸಣ್ಣದೊಂದು ಅಂಗಡಿ. ಪಕ್ಕದಲ್ಲೇ ಹಾದು ಹೋಗುವ ಹೈವೇ ನಲ್ಲಿ ಒಂದಾದರ ಮೇಲೊಂದು ಸಾಲಾಗಿ  ಹೋಗುತ್ತಿರುವ  ಟ್ರಕ್ಕುಗಳು  ಪ್ರತಿಬಾರಿ ಅಂಗಡಿ ದಾಟಿಕೊಂಡು ಹೋದಾಗಲೂ ಅಂಗಡಿಯ ಬಾಗಿಲಿಂದ ಇಣುಕುವ ಟ್ರಕ್ಕಿನ ಹೆಡ್ ಲೈಟ್  ಬೆಳಕು ಬಿಟ್ಟರೆ ಅಂಗಡಿಯೊಳಕ್ಕೆ ಪದ್ದಿ ನಿಲ್ಲುವಲ್ಲಿ ಮತ್ತು ಗಿರಾಕಿಗಳು ಕುಳಿತುಕೊಳ್ಳುವ ಎದುರುಗಡೆ ಬೆಂಚಿನ ಜಾಗದಲ್ಲಿ ಮಾತ್ರ ಎರಡು ಝೀರೋ ಕ್ಯಾಂಡಲ್ ಬಲ್ಬ್ ಗಳ ಕುರುಡು ಬೆಳಕು. ಅವಾಗವಾಗ ಟ್ರಕ್ಕುಗಳು ಬಂದು ನಿಂತಾಗ ಅದರಿಂದಿಳಿಯುವ ಹಿಂದಿ, ಪಂಜಾಬಿ ಮಾತನಾಡುವ ಡ್ರೈವರ್ ಗಳನ್ನ ಬಿಟ್ಟರೆ ಪಕ್ಕದೂರಿಂದ ಕೆಲವೇ ಜನ ಇಲ್ಲಿಗೆ ಬರುತ್ತಿದ್ದರು, ಊರವರ ಕಣ್ತಪ್ಪಿಸಿ ಕುಡಿಯಲು. ಪದ್ದಿಯ ಹಳೆಯ ಮಬ್ಬು ಸೀರೆಗೆ ಹೊಳಪು ಕೊಡುತ್ತಿರುವ ಕುರುಡು ಬಲ್ಬಿನಡಿಯಲ್ಲಿ ಅವಳು  ಕೆಲವರಿಗೆ ಹೆಂಡದ ಪ್ಯಾಕೆಟ್ಟನ್ನು ಕೊಡುತ್ತಿದ್ದರೆ, ಇದ್ದಿದ್ದರಲ್ಲೇ ಸ್ವಲ್ಪ ದುಡ್ಡಿರುವವರಿಗೆ, ರಮ್ಮಿನ ಸೇವೆ ಮಾಡುತ್ತಿದ್ದಳು. ಗಿರಾಕಿ ಕಳ್ಳಗಣ್ಣಲ್ಲಿ ಇವಳ ಸೊಂಟ ನೋಡುವುದರಲ್ಲಿ ಮಗ್ನನಾಗಿರುವಾಗ ಪದ್ದಿ ರಮ್ಮಿಗೆ ನೀರು ಬೆರೆಸಿ ಉಳಿದದ್ದರಲ್ಲಿ ಬರುವ ಲಾಭ ಎಣಿಸಿಕೊಂಡಿರುತ್ತಿದ್ದಳು. ಆ ಅಂಗಡಿ ಆ ಊರವರಿಗೆ ಮತ್ತು ಅವರಿವರಿಂದ ಕೇಳಿ ಬರುತ್ತಿದ್ದ ಟ್ರಕ್ ಡ್ರೈವರ್ ಗಳಿಗಷ್ಟೇ ಗೊತ್ತಿತ್ತೇ ಹೊರತು ಮತ್ಯಾರಿಗೂ ಅದು ಹೆಂಡದಂಗಡಿ ಅನ್ನೋ ಸುಳಿವೂ ಸಿಗುತ್ತಿರಲಿಲ್ಲ. ಎಲ್ಲಾ ಹೆಂಡದಂಗಡಿಯ ಮುಂದೆಯೂ ಇರುವಂತೆ ಇವಳ ಅಂಗಡಿಗೆ 'ಸಾರಾಯಿ ಅಂಗಡಿ' ಅನ್ನೋ ಬೋರ್ಡು ಇರಲಿಲ್ಲ. ಆದರೆ ಊರವರೆಲ್ಲಾ ಆ ಅಂಗಡಿಗೆ ನಾಮಕರಣ ಮಾಡಾಗಿತ್ತು. 'ಪದ್ದಿ ಅಂಗಡಿ' ಅಂತ.

ಮಂಗಳೂರಿನಿಂದ ಗೋವಾಕ್ಕೆ ಹೋಗುವ ಹೆದ್ದಾರಿಯಲ್ಲಿರುವ ಹೊನ್ನಾವರಕ್ಕೆ ತಾಕಿಕೊಂಡಿರುವ ಕಾಸರಕೋಡಿನಲ್ಲಿ ಪದ್ದಿಯ ಮನೆ. ಮನೆಯಿಂದ ಒಂದು ಮಾರು ನಡೆದರೆ, ಅರಬ್ಬೀ ಸಮುದ್ರ. ಕಡಲ ಶಬ್ದ ನಿರಂತರವಾಗಿ ಕೇಳುತ್ತಿತ್ತು. ಫ್ಯಾನ್ ಇಲ್ಲದೆ ಯಾರೂ ನಿದ್ದೆ ಮಾಡಲಾಗದ ಆ ಕರಾವಳಿಯ  ಸೆಕೆಯಲ್ಲಿ ಬೆಳಿಗ್ಗೆಯ ಸುಡುವ ಬಿಸಿಲಿನ ಹೊತ್ತು ಪದ್ದಿ ಮೈ ಮರೆತು ಮಲಗುತ್ತಿದ್ದಳು . ಅವಳ ಮನೆ,  ಅಂಗಡಿಗಿಂತಲೂ ಚಿಕ್ಕದಾದ ಒಂದು ಗುಡಿಸಲು. ಅದಕ್ಕೊಂದು ಗಿಡದ ಬೇಲಿ, ಬಾಗಿಲಿನ ಎದುರಿಗೆ ಸರಗೊಲಿನ ಗೇಟು, ಹಿಂಭಾಗದಲ್ಲೊಂದು ಸರ್ಕಾರದವರು ಕಟ್ಟಿಸಿಕೊಟ್ಟಿರೋ ಶೌಚಾಲಯ, ಅದರೆದುರಿಗೊಂದು ನೀರಿನ ಗುಂಡಿ ಇಷ್ಟು ಬಿಟ್ಟರೆ ಸಾವಿತ್ರಮ್ಮನ ಮನೆಯಲ್ಲಿ ನೋಡಿ ಇಷ್ಟಪಟ್ಟು ಕೇಳಿ ತಂದು ಮನೆಯ ಎದುರಿಗೆ ನೆಟ್ಟಿರೋ ಹಳದಿ ದಾಸವಾಳದ ಹೂವಿನ ಗಿಡ. ಪದ್ದಿ ಆ ಗಿಡದಲ್ಲಿ ಯಾವತ್ತೂ ಈಗಷ್ಟೆ ಅರಳಿರುವ ದಾಸವಾಳ ನೋಡಿಲ್ಲ. ರಾತ್ರಿ ಮೂರಕ್ಕೆ ಬಂದು ಮಲಗಿ ಮಧ್ಯಾನ್ಹ ಏಳುವ ಹೊತ್ತಲ್ಲಿ, ಅದಾಗಲೇ ದಾಸವಾಳ ಅರಳಿ ಇನ್ನೇನು ಬಾಡುವಂತಾಗಿರುತಿತ್ತು.

ಎದ್ದ ತಕ್ಷಣ ಮನೆಯಲ್ಲೇ ಕೋಡುಬಳೆ, ಚಕ್ಕಲಿ ತಯಾರಿ ಮಾಡಿಕೊಂಡು, ಮಾಡಿಟ್ಟ ಉಪ್ಪಿನಕಾಯನ್ನ ಒಂದು ಡಬ್ಬದಲ್ಲಿ ಹಾಕಿ ತನ್ನ ಅಂಗಡಿ ಸೇರುತ್ತಿದ್ದಳು. ಅವಳು ಮಾಡುವ ಉಪ್ಪಿನಕಾಯಿಯ ರುಚಿಗೋ ಅಥವಾ ಗಿರಾಕಿಗಳ ಬಳಿ ಚಕ್ಕಲಿ, ಕೊಡುಬಳೆಗೆ ದುಡ್ಡಿರುತ್ತಿರಲಿಲ್ಲವೋ, ಒಟ್ಟಿನಲ್ಲಿ ಉಪ್ಪಿನಕಾಯಿ, ಸಾರಾಯಿಯ ಜೊತೆ  ಭರ್ಜರಿಯಾಗಿ ವ್ಯಾಪಾರವಾಗುತ್ತಿತ್ತು.  ಅವಳು ಅಂಗಡಿಗೆ ಬರುವ ಸರಿಹೊತ್ತಲ್ಲಿ, ಹೊನ್ನಾವರದ ಬಾರೊಂದರಿಂದ ಸತ್ಯಣ್ಣ ರಮ್ಮಿನ ಬಾಟಲಿ, ಹೆಂಡದ ಪಾಕೆಟ್ ಎರಡನ್ನೂ ಒಂದು ರಿಕ್ಷಾ ದಲ್ಲಿ ಹಾಕಿಕೊಂಡು ತರುತ್ತಿದ್ದ.  ಅದನ್ನೆಲ್ಲಾ ಒಳಗೆ ರಾಶಿ ಹಾಕುತ್ತಿದ್ದಳು. ನಿನ್ನೆಯ ಗ್ಲಾಸುಗಳ ರಾಶಿಯಲ್ಲಿ ಒಂದಾದರೂ ಒಡೆದ ಗ್ಲಾಸು ಇರುತ್ತಿತ್ತು. ಒಡೆದ ಅನಾಮಿಕನಿಗೊಂದಿಷ್ಟು ಬೈಗುಳಗಳ ಸುರಿಮಳೆಯಾಗುತ್ತಿತ್ತು. ಬೆಂಚುಗಳು ಎಲ್ಲೆಂದರಲ್ಲಿ ಹೊರಳಿಕೊಂಡಿರುತ್ತಿತ್ತು. ನೆಲದ ತುಂಬಾ ಹೆಂಡದ ಕೊಟ್ಟೆಗಳ ರಾಶಿ. ಅಂಗಡಿಯ ಹೊರಗಡೆ ಯಾರೋ ಹೆಚ್ಚು ಕುಡಿದು ಮಾಡಿಕೊಂಡ ವಾಂತಿ, ಸಿಗರೇಟಿನ ತುಂಡುಗಳು, ಎಲ್ಲವನ್ನೂ ಒಂದು ಹಂತಕ್ಕೆ ತಲುಪಿಸಿ ಅಂಗಡಿ ಬಾಗಿಲು ತೆರೆಯುವುದರಲ್ಲಿ ಸುಮಾರು ಸಂಜೆ ಆರು ಗಂಟೆ. ಪದ್ದಿ ಅಂಗಡಿ ಕಡೆ ಮುಖ ಮಾಡುವವರಿಗೆ ಸುಮಹೂರ್ತ ಒದಗಿ ಬಂದಂತೆ. 

ಪದ್ಮಾ ಅಂತ ಅವಳ ಹೆಸರನ್ನ ಪೂರ್ತಿ ಕೇಳಿದ್ದು ಯಾವತ್ತೂ ಇಲ್ಲ. ಸಣ್ಣ ವಯಸ್ಸಿನಲ್ಲೇ ಮನೆ ಕೆಲಸಕ್ಕೆ ಹೋಗುತ್ತಿದ್ದ ಅವಳನ್ನ ಎಲ್ಲರೂ ಪದ್ದಿ ಅಂತ ಕರೆದಿದ್ದೇ. ಇವತ್ತಿನ ತನಕ ಅವಳೆಷ್ಟೇ ದೊಡ್ಡವಳಾದರೂ ಅವಳ ಹೆಸರು ಮಾತ್ರ ಹಾಗೇ ಉಳಿದಿತ್ತು. ಮನೆ ಕೆಲಸ ಮಾಡುತ್ತಾ ಮಾಡುತ್ತಾ, ದೊಡ್ದವಳಾದಂತೆ ಊರಲ್ಲಿ ಯಾರದೇ ಮಗುವಾದರೂ ಬಾಣಂತನ ಮಾಡಿಸುವುದು ಅವಳ ಜವಾಬ್ದಾರಿಯಾಗಿಬಿಟ್ಟಿತ್ತು. ಮಗುವನ್ನ ಸ್ನಾನ ಮಾಡಿಸುವುದು ಅವಳಿಗೆ ಎಲ್ಲಿಲ್ಲದ ಖುಷಿ. ಮಗುವಿನ ದೇಹವನ್ನ, ತಲೆಯನ್ನ ತಿಕ್ಕಿ ತೀಡಿ ತಾನೇ ಆಕೃತಿ ಕೊಡುತ್ತಿರುವಂತೆ ಬೀಗುತ್ತಿದ್ದಳು. ಇಡೀ ಕೇರಿಯ ಎಲ್ಲಾ ಮಕ್ಕಳನ್ನೂ ತಾನೇ ದೊಡ್ಡ ಮಾಡಿದೆನೆಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಳು.

ಮದುವೆ ಮಾಡಿಕೊಂಡ ಒಂದೇ ವರ್ಷಕ್ಕೆ ಗಂಡ ಇವಳನ್ನ ಬಿಟ್ಟು ಹೇಳದೇ ಕೇಳದೆ ಮುಂಬೈ ಗೆ ಹೋಗಿದ್ದ. ಅದಾದ ಮೇಲೆ ಅವನ ಸುದ್ದಿಯಿರಲಿಲ್ಲ. ಅವಳೂ ತಲೆ ಕೆಡಿಸಿಕೊಂಡಿರಲಿಲ್ಲ. ಅದೊಂದು ವಿಷಯವೇ ಅಲ್ಲವೇನೋ ಅನ್ನುವಂತೆ ವರ್ಷಗಟ್ಟಲೇ ತನ್ನಷ್ಟಕ್ಕೆ ತಾನಿದ್ದ ಪದ್ದಿ, ಮಗಳು ಪಕ್ಕದ ಕೇರಿಯ ಸ್ಕೂಲ್ ಮಾಸ್ತರರ ಮಗನ ಜೊತೆ ಓಡಿ ಹೋಗಿದ್ದಾಳೆನ್ನುವ ಸುದ್ದಿ ತಿಳಿದಾಗ ಮಾತ್ರ ಕಂಗಾಲಾಗಿ ಕೂತಿದ್ದಳು. ಮಾಸ್ತರರ ಮನೆಯಲ್ಲಿ ಒಪ್ಪದ ಕಾರಣ ಇಬ್ಬರೂ ಫೋನ್ ನಂಬರ್, ವಿಳಾಸ ಕೊಡದಂತೆ ಬೆಂಗಳೂರಿಗೆ  ಹೋಗಿದ್ದರು. ಊರಿನ ಎಲ್ಲಾ ಕೇರಿಯ ಎಲ್ಲರ ಮನೆಯಲ್ಲೂ ಕೆಲಸ ಮಾಡಿಕೊಂಡು ಅವರೆಲ್ಲರ ಜೊತೆ ಖುಷಿಯಾಗಿದ್ದ ಪದ್ದಿಗೆ ಅವತ್ತು ಇದ್ದಕ್ಕಿದ್ದಂತೆ ಊರಿನಿಂದ ಬಹಿಷ್ಕಾರ ಹಾಕಿದಂತಿತ್ತು. ಊರಿಗೆ ಊರೇ ಅವಳೊಡನೆ ಮಾತಾಡುವುದನ್ನ ನಿಲ್ಲಿಸಿದಂತಿತ್ತು. ಮಾತನಾಡಿದರೂ ಮಗಳು ಓಡಿ ಹೋದಳಂತೆ ಅನ್ನುವುದರಿಂದಲೇ ಪ್ರಾರಂಭವಾಗುತ್ತಿದ್ದ ಮಾತು ಅವಳನ್ನ ಹಿಂಡಿ ಹಿಪ್ಪೆ ಮಾಡುತ್ತಿತ್ತು. ಮಾತನ್ನ ನಿಲ್ಲಿಸಿದ್ದಳು. ಅವಳೇ ದೊಡ್ಡ ಮಾಡಿದ ಮಕ್ಕಳು ಕೂಡ ಪದ್ದಿ ಮಗಳು ಓಡಿ ಹೋಗಿದಾಳಂತೆ ಅಂತ ರಸ್ತೆಯಲ್ಲಿ ಮಾತನಾಡಿಕೊಂಡು ತಿರುಗಾಡುವಾಗ ಅವಳಿಗೆ ಹೊರಗೆ ತಿರುಗಾಡುವ ಧೈರ್ಯವೂ ಇರಲಿಲ್ಲ. ಯಾರ ಮನೆಯಲ್ಲೂ ಕೆಲಸಕ್ಕೂ ಕರೆಯುತ್ತಿರಲಿಲ್ಲ. 

ಅಂತಹ ಸಮಯದಲ್ಲಿ ಅವಳ ಬೆಂಬಲಕ್ಕೆ ಅಂತ ನಿಂತಿದ್ದು ಸತ್ಯಣ್ಣ. ಸತ್ಯಣ್ಣ ಅವಳಿಗೆ ಹಳೆಯ ಪರಿಚಯ, ಹೆಂಡದಂಗಡಿ ನಡೆಸುತ್ತಿದ್ದ  ಸತ್ಯಣ್ಣ ಏನಾದರೂ ವ್ಯಾಪಾರ ಶುರು ಮಾಡಬೇಕೆಂದಿದ್ದ. ಇವಳ ಅಸಹಾಯಕ ಸ್ಥಿತಿ ನೋಡಿದ್ದೇ ಇವಳನ್ನ ಅಂಗಡಿ ನೋಡಿಕೊಳ್ಳಲು ಬಿಟ್ಟರೆ, ತಾನು ಬೇರೆ ಕೆಲಸ ಮಾಡಬಹುದೆಂದು, ಇವಳನ್ನ ಹೆಂಡದಂಗಡಿ ನೋಡಿಕೊಳ್ಳುವಂತೆ ಕೇಳಿದ್ದ. ಬರೀ ಗಂಡಸು ಗಿರಾಕಿಗಳಿಂದಲೇ ತುಂಬಿ ತುಳುಕುವ, ರಾತ್ರಿಯಿಡಿ ಅವರ ನಶೆಯಲ್ಲಿ ಅವರಿಗೆ ಹೆಂಡದ ಸೇವೆ ಮಾಡುವ ಕೆಲಸ ನೆನೆದು ಹೆದರಿದ್ದ ಅವಳಿಗೆ, ಅವಳ ಅಂಗಡಿಯಲ್ಲೇ ಸೀನನಿಗೆ ಇರಲು ಹೇಳಿ, ಯಾರಾದರೂ  ಕೆಟ್ಟದಾಗಿ ಮಾತನಾಡಿದರೆ, ಅತಿ ಸಲಿಗೆ ತೋರಿಸಿದರೆ, ಮುಟ್ಟಲು ಬಂದರೆ ತಕ್ಷಣ ಹೇಳುವಂತೆ ಹೇಳಿ ಅವಳಲ್ಲಿ ಕೆಲಸ ಮಾಡುವಂತೆ ಒಪ್ಪಿಸಿದ್ದ. ಪದ್ದಿ ಅಂಗಡಿ ನೋಡಿಕೊಳ್ಳಲು ಶುರು ಮಾಡಿದ ಮೇಲೆ ಗಿರಾಕಿಗಳೂ ಹೆಚ್ಚಾದರು. ಮೊದಮೊದಲಂತೂ ಸತ್ಯಣ್ಣನಿಗೆ ದಿನವೂ ಫೋನ್ ಬರುತ್ತಿತ್ತು. ಅವನೊಂದು ಗುಂಪು ಕಟ್ಟಿಕೊಂಡು ಬಂದು ಅವರಿವರಿಗೆ ಬಡಿದು ಹೋಗುತ್ತಿದ್ದ. ಒಂದು ತಿಂಗಳಾಗುವಷ್ಟರಲ್ಲಿ ಅವಳಿಗೆ ಸತ್ಯಣ್ಣನ ಬೆಂಬಲವಿದೆ ಎಂದು ತಿಳಿದ ಮೇಲೆ ಯಾರೂ ಅವಳ ಸುದ್ದಿಗೆ ಹೋಗುತ್ತಿರಲಿಲ್ಲ. ಅವರವರ ಕುಡಿತದಲ್ಲಿ, ಅವರವರ ಚಿಂತೆಯಲ್ಲಿ ಮುಳುಗಿರುತ್ತಿದ್ದರು. ಹೊರಗಿಂದ ಬರುತ್ತಿದ್ದವರಾರೂ ಗೊತ್ತಿಲ್ಲದ ಜಾಗದಲ್ಲಿ ಅವಳನ್ನ ರೇಗಿಸಿ ಇಕ್ಕಟ್ಟಿಗೆ ಸಿಲುಕಿಕೊಳ್ಳಲು ಇಷ್ಟ ಪಡುತ್ತಿರಲಿಲ್ಲ. ಆದರೂ ದೂರದಿಂದಲೇ ನೋಡಿ ಆ ವಯಸ್ಸಲ್ಲೂ ಮೂವತ್ತರ ಹಾಗಷ್ಟೇ ಕಾಣಿಸುವ ಅವಳ ಮೈಕಟ್ಟನ್ನ ನೋಡಿ ಜೊಲ್ಲು ಸುರಿಸುವವರೇನು ಕಮ್ಮಿ ಇರಲಿಲ್ಲ. ಹೀಗೆ ಬರುತ್ತಾ ಬರುತ್ತಾ ಸತ್ಯಣ್ಣನ ಹೆಂಡದಂಗಡಿ, ಬಾಯಿಂದ ಬಾಯಿಗೆ ಪದ್ದಿ ಅಂಗಡಿ ಆಗಿ ಹರಿದಾಡಿತ್ತು.

ಅವಳಿಗೆ ಮೊದಮೊದಲು ಈ ಕೆಲಸ ಇಷ್ಟವಾಗುತ್ತಿರಲಿಲ್ಲ. ಎದುರಿಗೆ ಕೆಟ್ಟದಾಗಿ ಮಾತನಾಡದಿದ್ದರೂ ಹಿಂದಿಂದ ಜನ ಕೆಟ್ಟದಾಗಿ ಮಾತನಾಡುತ್ತಾರೆಂದು ಹೊಸತಾಗಿ ಹೇಳಬೇಕಿರಲಿಲ್ಲ. ದುರುಗುಟ್ಟಿ ನೋಡುತ್ತಿದ್ದರು, ಮುಜುಗರವಾಗುತ್ತಿತ್ತು. ಅಸಹ್ಯ ಬೈಗುಳಗಳೆಲ್ಲ ಕೇಳಬೇಕಾಗಿತ್ತು. ನಿಧಾನವಾಗಿ ಪ್ರಾರಂಭವಾಗುತ್ತಿದ್ದ ಚರ್ಚೆಗಳು, ಮಾತು ಕಥೆಗಳು ಜಗಳಗಳಾಗಿ ಪರಿವರ್ತನೆಯಾಗುತ್ತಿತ್ತು, ಹೊಡೆದಾಟವಾಗಿ ಮುಗಿಯುತ್ತಿತ್ತು. ಊರಿನವರಾರೂ ಮಾತನಾಡಿಸದೇ ಹೋದರೂ, ಊರಿನ ಕಥೆಯಷ್ಟೂ ಇಲ್ಲಿ ಚರ್ಚೆಗೊಳ್ಳುತ್ತಿತ್ತು. ಗೊತ್ತಿದ್ದವರ ಬಗ್ಗೆ ತಿಳಿದುಕೊಳ್ಳುವ ಕುತೂಹಲವಿದ್ದರೂ ಅದನ್ನ ತೋರಿಸುತ್ತಿರಲಿಲ್ಲ. ಎಷ್ಟು ಗೊತ್ತಾಗುತ್ತದೋ ಅಷ್ಟೇ. ಮಕ್ಕಳ ಮೈ ತಿಕ್ಕಿ ಧೂಪ ಹಚ್ಚಿ ನಿದ್ದೆ ಮಾಡಿಸುತ್ತಿದ್ದ ಪದ್ದಿ, ಈಗ ಜನರಿಗೆ ನಶೆ ಹತ್ತಿಸಿ ನಿದ್ದೆ ಮಾಡಿಸುತ್ತಿದ್ದಳು. ಅಸಹ್ಯದ ಕೆಲಸ ಎನ್ನಿಸಿದರೂ ಹೊಟ್ಟೆ ಪಾಡು ಸಾಗಲೇ ಬೇಕಿತ್ತು.  ಬರಬರುತ್ತಾ ಪ್ರತಿ ದಿನವೂ ಮತ್ತೆ ಹಿಂದಿನ ದಿನದ ಪುನರಾವರ್ತನೆಯಷ್ಟೇ ಎಂದೆನಿಸಿ ಕೆಲಸ ಅಭ್ಯಾಸ ಮಾಡಿಕೊಂಡಳು.

ಕಾಸರಕೋಡಿನ ಐಸ್ ಫ್ಯಾಕ್ಟರಿ ಶ್ರೀನಿವಾಸರಾಯರ ಮಗ ಅವತ್ತು ಅಲ್ಲಿಗೆ ಬಂದಿದ್ದ. ಪದ್ದಿ ಅಂಗಡಿಗೆ. ಹೊನ್ನಾವರದಲ್ಲೋ, ಕುಮಟಾದಲ್ಲೋ ಬಾರಿಗೆ ಹೋದರೆ ಮಾರನೆಯ ದಿನವೇ ಸುದ್ದಿ ಅಪ್ಪನಿಗೆ ಗೊತ್ತಾಗಿ ರಂಪಾಟವೇ ಅಗಿಬಿಡುತ್ತೆಂದು ಅವನಿಗೆ ಗೊತ್ತಿತ್ತು. ಅದಕ್ಕೆಂದೇ ತನ್ನ ಪರಿಚಯದವರಾರೂ ಇಲ್ಲಿ ಬರಲಿಕ್ಕಿಲ್ಲ ಅಂತ ಪದ್ದಿ ಅಂಗಡಿಗೆ ಬಂದಿದ್ದ. ಪದ್ದಿಯ ಕೌಂಟರ್ ಬಳಿ ಬಂದು ತನಗೆ ತನ್ನ ಗೆಳೆಯರಿಗೆ ರಮ್ಮಿನ ಆರ್ಡರ್ ಕೊಟ್ಟಿದ್ದ. ಶ್ರೀನಿವಾಸರಾಯರ ಮಗ ತನ್ನ ಅಂಗಡಿಗೆ ಬಂದದ್ದು ನೋಡಿ ಒಂದು ಕ್ಷಣ ಏನೂ ತೋಚದವಳಂತೆ ನಿಂತಿದ್ದಳು ಪದ್ದಿ.

ಅವನ ಮುಖ ಅವಳಿಗೆ ಹೊಸತಲ್ಲ. ಸುಮಾರು ಇಪ್ಪತ್ತು ವರ್ಷದ ಹಿಂದೆ ಅವಳು ಅವನನ್ನ ಮೊದಲು ನೋಡಿದಾಗ ಅವನ ಕಣ್ಣುಗಳಲ್ಲಿ ಅಪರಿಚಿತವಾದ ಹೊಸತನ್ನೇನೋ ನೋಡುವ ಗಾಬರಿ, ಅಗಲ ಹಣೆ, ಅಮ್ಮನನ್ನೇ ಹೋಲುವ ಚಪ್ಪಟೆ ಮೂಗು, ಮೃದು ಗಲ್ಲದಲ್ಲಿ ಇನ್ನೂ ಕೆಂಪು ಹಾಗೇ ಇತ್ತು. ಆಗ ಅವಳಿಗಿನ್ನೂ ಇಪ್ಪತೈದು. ಹಲ್ಲಿಲ್ಲದ ಬೊಚ್ಚ ಬಾಯಲ್ಲಿ ಇವಳನ್ನ ನೋಡಿ ಮುಗುಳ್ನಗೆ ಬೀರಿದ್ದ ಪ್ರಶಾಂತ. ಅವನ ಕೈ ಮುಷ್ಠಿ ಬಿಡಿಸಿ ಅದರಲ್ಲಿ ಹತ್ತು ರುಪಾಯಿ ನೋಟನ್ನಿಟ್ಟು ಮುಷ್ಠಿ ಮತ್ತೆ ಕಟ್ಟಿಸಿದ್ದಳು. ರಾಯರ ಹೆಂಡತಿ ಶಾರದಮ್ಮ ಬಾದಾಮಪುರಿ ಕೊಟ್ಟು, ನಾಳೆಯಿಂದ ಮನೆ ಕೆಲಸದ ಜೊತೆ ಮಗು ಮೀಸಲಿಕ್ಕೂ ನೀನೇ ಬಂದುಬಿಡು, ಐನೂರು ಹೆಚ್ಚು ತಗೋ ಅಂದಿದ್ದರು. ಅದಾದ ಮಾರನೆಯ ದಿನ ಬೆಳಿಗ್ಗೆ ಪದ್ದಿ ಅಲ್ಲಿ ಹಾಜರಾಗಿದ್ದಳು.

ಮಗುವನ್ನ ಬಚ್ಚಲ ಮನೆಗೆ ಎತ್ತಿಕೊಂಡು ಹೋಗಿ ತೊಡೆ ಮೇಲೆ ಕೂರಿಸಿಕೊಂಡು ಮೈಗೆಲ್ಲಾ ಎಣ್ಣೆ ಹಚ್ಚಿದಳು. ಬಿಸಿ ಬಿಸಿ ನೀರನ್ನ ಸ್ವಲ್ಪ ಸ್ವಲ್ಪವೇ ಸುರಿದು, ಕೈ ಕಾಲನ್ನ ತೀಡಿದಳು. ಮಗು ಜೋರಾಗಿ ಅಳುತ್ತಿತ್ತು. ಅಳು ಕೇಳಿಸಿಕೊಳ್ಳದಂತೆ ಪದ್ದಿ ಸ್ನಾನ ಮಾಡಿಸುವುದರಲ್ಲಿ ನಿರತಳಾಗಿದ್ದಳು. ಸ್ನಾನವಾದ ನಂತರ ಒಪ್ಪವಾಗಿ ಒರೆಸಿ,  ಪೌಡರ್ ಹಚ್ಚಿ ತೊಟ್ಟಿಲಲ್ಲಿ ಮಲಗಿಸಿ ಕೆಳಗಡೆಯಿಂದ ಸಣ್ಣಗೆ ಧೂಪ ಹಚ್ಚಿದಳು. ಮಗು ಪ್ರಶಾಂತವಾಗಿ ನಿದ್ದೆ ಮಾಡಿತ್ತು. ಅದಾದ ಮೇಲೆ ನಾಲ್ಕು ತಿಂಗಳು ಇದು ಅವಳಿಗೆ ನಿತ್ಯ ದಿನಚರಿ. ಆ ಹೊತ್ತಿಗೆ ಪದ್ದಿ ಗರ್ಬಿಣಿ. ಇಲ್ಲಿನ್ನು ಕೆಲಸಕ್ಕೆ ಬರಲಾರೆ ಅಂದ ದಿನ ಶಾರದಮ್ಮ ಅವಳಿಗೊಂದು ಸೀರೆ, ಖರ್ಚಿಗೆಂದು ಮೂರೂ ಸಾವಿರ ಕೊಟ್ಟಿದ್ದರು. ಪದ್ದಿ ಒಂದೇ ಸಲಕ್ಕೆ ಅಷ್ಟು ದುಡ್ಡು ಅವಳ ಕೈಯಲ್ಲಿ ನೋಡಿದ್ದು ಅವತ್ತೇ. ಶ್ರೀನಿವಾಸರಾಯರಿಗೆ, ಶಾರದಮ್ಮನಿಗೆ ಕೈ ಮುಗಿದು ಪ್ರಶಾಂತನನ್ನೊಮ್ಮೆ ನೋಡಿ ಕಣ್ತುಂಬಿಕೊಂಡಳು. ಪ್ರಶಾಂತ ಮುಗ್ದ ನಗೆ ನಕ್ಕಿದ್ದ. ಅವನಿಗೊಂದು ಮುತ್ತು ಕೊಟ್ಟು ಹೊರಟಿದ್ದಳು ಅಲ್ಲಿಂದ. ಆಮೇಲೆ ಪ್ರಶಾಂತ ದೊಡ್ದವನಾಗುತ್ತಿದ್ದಂತೆ ಅವನ ದುಂಡು ಮುಖ ನೋಡಿ ಬೀಗುತ್ತಿದ್ದಳು. ಅವನು ಸಣ್ಣವನಿದ್ದಾಗ ಅವನ ತಲೆ ತೀಡಿದ್ದರಿಂದಲೇ ಇಷ್ಟು ಚಂದ ಕಾಣುತ್ತಿದ್ದಾನೆಂದು ಅವಳ ಬಲವಾದ ನಂಬಿಕೆ. ಪ್ರಶಾಂತ ಮಾತ್ರ ಇವಳನ್ನ ಕಂಡೊಡನೆ ನಾಚಿಕೆಯಿಂದ ದೂರ ಓಡುತ್ತಿದ್ದ.

ಇನ್ನೂ ಪ್ರಶಾಂತನನ್ನ ನೋಡುತ್ತಾ ಏನೂ ತೋಚದವಳಂತೆ ನಿಂತಿದ್ದ ಪದ್ದಿಗೆ ಮತ್ತೊಮ್ಮೆ ಜೋರಾಗಿ ಆರ್ಡರ್ ಹೇಳಿದ್ದ. 'ಎರಡು ಕ್ವಾರ್ಟರ್ xxx ರಮ್' ಅಂತ. ಒಂದಿಪ್ಪತ್ತು ವರ್ಷ ಹಿಂದೆ ಸಮಯ ಪ್ರಯಾಣ ಮಾಡಿ ಮತ್ತೆ ವರ್ತಮಾನಕ್ಕಿಳಿದ ಪದ್ದಿ, 'ಖಾಲಿಯಾಗಿದೆ' ಅಂತಷ್ಟೇ ಹೇಳಿ ಮುಖ ತಿರುಗಿಸಿದಳು. ಅಲ್ಲೇ ಇದ್ದ ಬಾಟಲಿ ತೋರಿಸಿ, 'ಅದೇನದು' ಅಂದ. 'ಅದು ನಿನ್ನಂತವರಿಗೆ ನಶೆ ಹತ್ಸೋದಕ್ಕಲ್ಲ, ಸುಮ್ಮನೆ ಹೊರಡು, ಇಲ್ಲಾಂದ್ರೆ ನಿಮ್ಮಪ್ಪನಿಗೆ ಹೇಳ್ತೆ' ಅಂದ ಪದ್ದಿ ಅವನನ್ನೊಮ್ಮೆ ದುರುಗುಟ್ಟಿ ನೋಡಿದಳು. ಗೆಳೆಯರ ಮುಂದೆ ಅವನಿಗೆ ಅವಮಾನವಾದಂತೆನಿಸಿ 'ಇಟ್ಕೊಂಡಿರದು ಹೆಂಡದಂಗಡಿ, ಮಾಡ್ತಾ ಇರೋದು ಉಪದೇಶ.. ಸರಿ ಹೋಯ್ತು ' ಅಂತ ಹೇಳಿ ಅಲ್ಲಿಂದ ತಕ್ಷಣ ಹೊರಟ. ಪದ್ದಿ ಕಣ್ಣಂಚಲ್ಲಿದ್ದ ನೀರು ಕುರುಡು ಬೆಳಕಿನಲ್ಲಿ ನಶೆ ಹತ್ತಿದ್ದವರ ಕಣ್ಣಿಗೆ ಕಾಣಲಿಲ್ಲ.

ತಕ್ಷಣವೇ ಹೋಗಿ ಶ್ರೀನಿವಾಸರಾಯರಿಗೆ ಸುದ್ದಿ ತಿಳಿಸಿಬಿಡಲಾ, ಅಂದುಕೊಂಡಳು. ರಾಯರು, ಶಾರದಮ್ಮ ಇಬ್ಬರೂ ನನ್ನ ಕಂಡರೆ ಮುಖ ತಿರುಗಿಸುತ್ತಾರೆ. ಹೆಂಡದಂಗಡಿಯ ಪದ್ದಿ ಜೊತೆ ಅವರಿಗೇನು ಮಾತು. ಮೊದಲು ಕಂಡಾಗೆಲ್ಲಾ ಚೆನ್ನಾಗಿ ಮಾತಾಡಿಸುತ್ತಿದ್ದ ಅವರು, ನನ್ನ ಮಗಳು ಓಡಿ ಹೋದಮೇಲಿಂದ ಎಷ್ಟು ಬೇಕೋ ಅಷ್ಟೇ ಮಾತು. ಆಮೇಲೆ ನಾನು ಹೆಂಡದಂಗಡಿ ನಡೆಸುತ್ತಿದ್ದೇನೆ ಅಂತ ಗೊತ್ತಾದ ಮೇಲಂತೂ ಎದುರಿಗೆ ಕಂಡರೂ ಕಾಣದಂತೆ ಹೋಗಿದ್ದಾರೆ ಎಷ್ಟೋ ಸಲ. ಈಗ ಹೋಗಿ ನಿಮ್ಮ ಮಗ ನನ್ನಂಗಡಿಗೆ ಬಂದಿದ್ದ ಅಂತ ಯಾವ ಮುಖ ಇಟ್ಟುಕೊಂಡು ಹೇಳಲಿ, ಅಷ್ಟಕ್ಕೂ ಅವನು ಹೇಳಿದ್ದರಲ್ಲಿ ತಪ್ಪೇನಿಲ್ಲ, ನಾನ್ಯಾರು ಉಪದೇಶ ಕೊಡೋದಕ್ಕೆ. ಅವನೊಬ್ಬ ಗಿರಾಕಿ, ಸುಮ್ಮನಿರುವ ಬದಲು ನಾನ್ಯಾಕೆ ಹಾಗೇ ಹೇಳಿದೆ. ಪದ್ದಿಯ ಯೋಚನಾ ಲಹರಿ ನಿಂತಿರಲಿಲ್ಲ. ಅವನು ನಾನು ಬೆಳೆಸಿದ ಹುಡುಗ, ನಾಲ್ಕೇ ತಿಂಗಳಾದರೇನು, ಅವನನ್ನ ಅಕ್ಕರೆಯಿಂದ ನೋಡಿಕೊಳ್ಳುವಾಗ ನನ್ನ ಮಗಳಿನ್ನೂ ಹುಟ್ಟಿರಲಿಲ್ಲ. ನಾನು ನೋಡಿಕೊಂಡ ಮೊದಲನೇ ಮಗು ಅದು. ಅಷ್ಟಲ್ಲದೇ ರಾಯರು ಮತ್ತು ಶಾರದಮ್ಮ ಇದನ್ನ ಖಂಡಿತ ಸಹಿಸುವುದಿಲ್ಲ. ರಾಯರ ಮನೆ ಊಟ ಮಾಡಿದ ನನಗೆ, ದಾರಿ ತಪ್ಪುತ್ತಿರೋ ಅವರ ಮಗನನ್ನ ಸರಿದಾರಿಗೆ ತರುವಂತೆ ಮಾಡುವುದು ನನ್ನ ಕರ್ತವ್ಯ, ಅವರಿಗೆ ಹೇಳದಿದ್ದರೆ ಅದು ತಪ್ಪು. ಹೀಗೆ ಯೋಚನೆಗಳು ದ್ವಂದ್ವದೊಳಗೆ ಅತ್ತಿಂದಿತ್ತ ಇತ್ತಿಂದತ್ತ ಹೊರಳಾಡುತಿತ್ತು. ಸರಿ ತಪ್ಪು ಯಾವುದೆಂದು ಸರಿ ನಿರ್ಧಾರಕ್ಕೆ ಬರಲಾಗದಿದ್ದರೂ ರಾಯರಿಗೆ ವಿಚಾರ ತಿಳಿಸುವುದೇ ಹೆಚ್ಚು ಸರಿ ಇರಬಹುದೆಂದು ನಿರ್ಧರಿಸಿದಳು ಪದ್ದಿ.

ಆ ರಾತ್ರಿಯಿಡೀ ಅವಳಿಗೆ ನಿದ್ದೆ ಬರಲಿಲ್ಲ. ಬೆಳಕು ಹರಿಯುವುದಕ್ಕೂ ಮುಂಚೆಯೇ ಎದ್ದು ಮನೆಯಂಗಳದಲ್ಲಿ ಬಂದು ಕೂತಳು.
ಹಳದಿ ದಾಸವಾಳದ ಮೊಗ್ಗು ಸಮಯ ಕಳೆದಂತೆ ಬಿರಿಯುತ್ತಾ ಹೋದಂತೆ ಶ್ರೀನಿವಾಸರಾಯರಿಗೆ ವಿಷಯ ತಿಳಿಸುವ ನಿರ್ಧಾರವೂ ಗಟ್ಟಿಯಾಗತೊಡಗಿತು.

ಅಪರೂಪಕ್ಕೆ ಮನೆಯ ಕಡೆ ಬಂದ ಪದ್ದಿಯನ್ನ ನೋಡಿ ಶಾರದಮ್ಮನಿಗೆ ಆಶ್ಚರ್ಯವಾದರೂ ಹೊರಗಡೆ ತೋರಿಸಿಕೊಳ್ಳಲಿಲ್ಲ. 'ಆರಾಮಾ ಶಾರದಮ್ಮಾ... ' ಅಂತ ಪದ್ದಿ ಕೇಳುತ್ತಿದ್ದಂತೆಯೇ 'ಏನೇ ಪದ್ದಿ, ಸುಮಾರು ದಿನ ಆದ್ಮೇಲೆ ಮನೆ ಕಡೆ ಬಂದಿದಿಯ... ಹೆಂಡದಂಗಡಿ ಇಟ್ತಿದಿಯನ್ತಲ್ಲೇ, ಬೇರೆ ಯಾವುದಾದ್ರು ಕೆಲಸ ಮಾಡೊದಲ್ವಾ, ಅದೇ ಬೇಕಿತ್ತಾ, ಇಡೀ ಊರು ನಿನ್ನ ಬಗ್ಗೆ ಕೆಟ್ಟದಾಗಿ ಮಾತಾಡ್ತಾ ಇದೆ'  ಅಂತ ಹೇಳಿ ಮುಗಿಸಿದ್ದಳು. ಹಳೆಯದನ್ನ ವಿವರಿಸೋ ತಾಳ್ಮೆ ಅವಳಿಗಿರಲಿಲ್ಲ. ನಿನ್ನೆ ನಡೆದಿದ್ದನ್ನ ವಿವರಿಸೋಕೆ ಧೈರ್ಯ ಸಾಲಲಿಲ್ಲ. ' ಏನು ಮಾಡದಮ್ಮಾ .. ಹೊಟ್ಟೆ ಪಾಡು ' ಅಂತಷ್ಟೇ ಹೇಳಿ ಅಲ್ಲಿಂದ ತಕ್ಷಣ ಹೊರಟಳು. ಅಚಾನಕ್ಕಾಗಿ ತಿರುಗಿ ಹೋರಾಟ ಪದ್ದಿಯ ಬೆನ್ನಿಗೆ 'ಊರ ಜನಾನ ಹಾಳು ಮಾಡೋಕೆ ಇವಳೊಬ್ಬಳೆ ಸಾಕು' ಅಂತ ಮಾತು ಬಂದಿತ್ತು. ಪದ್ದಿ ನಡಿಗೆಯ ವೇಗ ಜಾಸ್ತಿ ಮಾಡಿಕೊಂಡಳು. ಮತ್ಯಾವುದೇ ಮಾತು ಕೇಳದಿರಲೆಂದು.

ಮತ್ತೆ ಸಂಜೆ ಪ್ರಶಾಂತ ಅವಳಂಗಡಿಗೆ ಬಂದಿದ್ದ. ಹೊಸ ಗುಂಪಿನ ಜೊತೆ. ರಮ್ಮಿನ ಆರ್ಡರ್ ಗೆ ಪದ್ದಿ ಇಲ್ಲವೆಂದಳು . ಅವನ ಗೆಳೆಯನೊಬ್ಬ ಅಲ್ಲಿದ್ದ ಬಾಟಲಿ ಒಂದನ್ನ ಒಡೆದ. ಇನ್ನೊಬ್ಬ ಅಲ್ಲಿದ್ದ ಬೆಂಚನ್ನ ಎತ್ತಿ ಹಾಕಿದ. ಅವನಿಗೊಮ್ಮೆ ಕಪಾಳಕ್ಕೆ ಬಿಗಿಯಬೇಕೆನ್ನುವಷ್ಟು ಕೋಪ ಬಂದಿತ್ತು ಅವಳಿಗೆ. ಅವಳು ಅವತ್ತು ಅವನಿಗೆ ಹೊಡೆಯದಂತೆ ತಡೆದಿದ್ದೆಂದರೆ ಅವನು ಮಗುವಾಗಿದ್ದಾಗ ಅವಳ ತೊಡೆಯ ಮೇಲೆ ಮಲಗಿ ನಿದ್ದೆ ಹೋಗಿದ್ದ ಅವನ ಅಮಾಯಕ ಮುಖ. ಗೆಳೆಯರ ಧಾಂದಲೆ ನೋಡಿ ವಿಕೃತ ನಗೆ ನಕ್ಕಿದ್ದ. ಸತ್ಯಣ್ಣನಿಗೆ ಫೋನು ಮಾಡಲು ತಡೆದಿದ್ದು ಅವಳ ಮನಸ್ಸಲ್ಲಿ ಅಚ್ಚೊತ್ತಿದ್ದ ಅವನ ಮುಗ್ದ ಬೊಚ್ಚ ಬಾಯಿ ನಗು. ಅವಳು ಮತ್ತೆ ಉಪದೇಶ ಕೊಡುವ ಉಸಾಬರಿಗೆ ಹೋಗಲಿಲ್ಲ. ಅಲ್ಲಿಂದ ಸುಮ್ಮನೆ ಹೊರಗೆ ನಡೆದಳು. ಸೀನ ರಮ್ಮಿನ ಬಾಟಲಿ ತಂದಿಟ್ಟ. ಅವಳು ಮತ್ತೆ ಕತ್ತಲಲ್ಲಿ ಕರಗಿದಳು. ಅಂಗಡಿಯ ಕಡೆ ಮತ್ತೆ ಮುಖ ಮಾಡಲಿಲ್ಲ.

ಒಂದೇ ಹೊರಬಾಗಿಲಿನ ಸುರಂಗದೊಳಗಿನ ಕತ್ತಲಲ್ಲಿ, ಸರಿ ದಾರಿ ಹುಡುಕುವ ಗೊಂದಲದಲ್ಲಿದ್ದವಳಿಗೆ ಅಚಾನಕ್ಕಾಗಿ ದೂರದಲ್ಲೆಲ್ಲೋ ಬೆಳಕು ಕಂಡಿತ್ತು. ಅಂಗಡಿಯ ಹಿಂಬದಿಯ ಕತ್ತಲಲ್ಲಿ ಒಬ್ಬಳೇ ಬಿಕ್ಕಳಿಸುತ್ತಿದ್ದ ಅವಳಿಗೆ ಫೋನ್ ಬಂದಿತ್ತು. ಸತ್ಯಣ್ಣನಲ್ಲದೆ ಬೇರೆ ಯಾರ ಫೋನು ಬಂದಿದ್ದಿಲ್ಲ ಇಷ್ಟು ದಿನ. ಈಗ ಬೇರೆ ನಂಬರ್ ನಿಂದ ಫೋನ್ ಬಂದಿತ್ತು. ಹೆದರಿಸಲು ಯಾರೋ ಕರೆ ಮಾಡಿರಬಹುದೆಂದು ಅಂದಾಜು ಮಾಡುತ್ತಿದ್ದ ಅವಳಿಗೆ ಆಕಡೆಯಿಂದ ಬಂದಿದ್ದು 'ಆಯೀ...' ಅನ್ನೋ ಧ್ವನಿ. ವರ್ಷಗಳ ನಂತರ ಕೇಳಿದ ಮಗಳ ದ್ವನಿ ಹೆಂಡದಂಗಡಿಯ ಆಚೆಗಿನ ಪ್ರಪಂಚದ ತೆರೆ ಸರಿಸಿತ್ತು. ಉಭಯ ಕುಶಲೋಪರಿಯ ನಂತರ ಅವಳು ಹೇಳಿದ ವಿಚಾರ ತನ್ನ ಬದುಕು  ಮತ್ತೆ ಸರಿದಾರಿಗೆ ಬರುತ್ತದೆಯೆಂಬ ಭರವಸೆ ಕೊಟ್ಟಿತು.  ಮಗಳು ನಾಳೆ ಮನೆಯಲ್ಲಿರುತ್ತಾಳೆ ಗಂಡನ ಜೊತೆ, ಅವಳಿಗೀಗ ಏಳು ತಿಂಗಳು, ಇನ್ನೆರಡು ತಿಂಗಳಲ್ಲಿ ತನಗೊಬ್ಬ ಮೊಮ್ಮಗ ಬರಲಿದ್ದಾನೆಂಬ ಸುದ್ದಿ ಯಾರಿಗಾದರೂ ಹೇಳಿಕೊಳ್ಳಬೇಕೆನಿಸಿತು. ಯಾರಿಗೆಂದು ಗೊತ್ತಾಗಲಿಲ್ಲ. ಆ ಖುಷಿಯಲ್ಲಿ ಪ್ರಶಾಂತ ಮತ್ತವನ ಗೆಳೆಯರ ಪುಂಡಾಟಿಕೆ, ಶಾರದಮ್ಮ ಬೆನ್ನ ಹಿಂದೆ ಆಡಿದ ಮಾತು, ಹೆಂಡದಂಗಡಿಯ ಕತ್ತಲಲ್ಲಿ ವಾರೆನೋಟದಲ್ಲಿ ನೋಡುವ , ಅಸಹ್ಯ ಬೈಗುಳ ಬಯ್ಯುವ ಜನ ಎಲ್ಲಾ ಒಂದೇ ಸಲಕ್ಕೆ ಅವಳ ಲೋಕದಿಂದ ಮರೆಯಾಗಿದ್ದರು.

ಮಾರನೆಯ ದಿನ ಸಂಜೆ ಆರಕ್ಕೆ ಪದ್ದಿಯ ಅಂಗಡಿ ಬಾಗಿಲು ತೆರೆಯದಿರುವುದನ್ನ ನೋಡಿ ಸತ್ಯಣ್ಣ ಅವಳಿಗೆ ಫೋನ್ ಮಾಡಿದ. ಇನ್ಮುಂದೆ ತಾನು ಅಂಗಡಿಗೆ ಬರುವುದಿಲ್ಲವಾಗಿ ಹೇಳಿದಳು. ವರ್ಷಗಳ ನಂತರ ಆ ಮನೆಯಲ್ಲಿ ಸಂಜೆಯ ಹೊತ್ತಿಗೆ ಬಲ್ಬಿನ ಬೆಳಕು ಹತ್ತಿಕೊಂಡಿತ್ತು. ಪ್ರತಿ ದಿನದಂತೆ ಚಕ್ಕಲಿ ಕೊಡುಬಳೆಯ ಬದಲು ಮೊದಲ ಬಾರಿಗೆ ಬರಲಿರುವ ಮಗಳು ಅಳಿಯನಿಗೆ ರವೆ ಉಂಡೆ ಮಾಡಿದಳು. ಅಂಗಳದ ಹೊರಗಿನ ಖಾಲಿ ಸೈಟಿನಲ್ಲಿ ಹುಡುಗರ ಗುಂಪಿನ ಕ್ರಿಕೆಟ್ ನಡೆಯುತ್ತಿತ್ತು. ದಿನವೂ ಹೆಂಡದಂಗಡಿಯ ಗಲಾಟೆ ಕೇಳಿ ಕೇಳಿ ಅಭ್ಯಾಸವಾಗಿದ್ದ ಅವಳಿಗೆ ಹುಡುಗರ ಆಟದ ಜಗಳ ಮಜವೆನಿಸಿತು. ಮನೆಯೊಳಗಡೆ ಸಣ್ಣಗೆ ಧೂಪ ಹಚ್ಚಿದಳು. ದಿನವೂ ಬರುತ್ತಿದ್ದ ಹೆಂಡದ ವಾಸನೆಯ ಎದುರು ಧೂಪದ ಘಮ ಸುಖವೆನಿಸಿತು. ಬರಲಿರುವ ಮೊಮ್ಮಗನನ್ನ, ಅವನಿಗೋಸ್ಕರ ಮತ್ತೆ ಶುರುವಾಗಲಿರುವ ಮೀಸುವ ಕೆಲಸ ನೆನೆದು ಸಂಭ್ರಮಿಸಿದಳು. ಮಗಳನ್ನ ನೋಡದೆ ಎರಡು ವರ್ಷ. ಹೆಂಡದಂಗಡಿಯ ಕೆಲಸ ಮಾಡುತ್ತಾ ಎರಡು ವರ್ಷ. ಎರಡು ವರ್ಷಗಳ ಅಜ್ಞಾತ ವಾಸಕ್ಕೊಂದು ಅಂತ್ಯ ಹೇಳುವ ಸಮಯ ಮನಸ್ಸಿಗೆ ಸಂಪೂರ್ಣವಾಗಿ ನೆಮ್ಮದಿ ಕೊಟ್ಟಿತ್ತು.

ಮಾರನೆಯ ದಿನ ಅರಳಿದ ಹಳದಿ ದಾಸವಾಳ ಪದ್ದಿಯ ಮಗಳಿಗೆ ಸ್ವಾಗತ ಹೇಳಿತ್ತು. ಆ ದಿನ ಸಂಜೆ ಪದ್ದಿಯಂಗಡಿಯ ಕೌಂಟರ್ ನ ಝೀರೋ ಕ್ಯಾಂಡಲ್ ಬಲ್ಬಿನ ಅಡಿಯಲ್ಲಿ ಅವಳ ಸೀರೆಯ ಹೊಳಪಿರಲಿಲ್ಲ. ಮಗಳನ್ನ ಕಂಡ ಖುಷಿಯಲ್ಲಿ ಪದ್ದಿಯ ಮುಖ ಅರಳಿತ್ತು.